Sunday, November 24, 2024
ಬಂಟ್ವಾಳ

ಅಜ್ಜಿಬೆಟ್ಟು ,ಪದವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದೇವಿಗೆ ಬ್ರಹ್ಮಕಲಶೋತ್ಸವ ಸಂಭ್ರಮ – ಕಹಳೆ ನ್ಯೂಸ್

ಬಂಟ್ವಾಳ : ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಇತಿಹಾಸ ಪ್ರಸಿದ್ಧ ಪದವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವು ರೂ 2 ಕೋಟಿ ವೆಚ್ಚದಲ್ಲಿ ಪುನರ್ ನವೀಕರಣಗೊಂಡು ಇಂದು ದೇವಿಗೆ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿದೆ. ವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ ಅವಧಾನಿ ಮಾರ್ಗದರ್ಶನದಲ್ಲಿ ಕ್ಷೇತ್ರದ ತಂತ್ರಿ ನಡ್ವಂತಾಡಿ ಶ್ರೀಪಾದ ಪಾಂಗಣ್ಣಾಯರ ನೇತೃತ್ವದಲ್ಲಿ ಬುಧವಾರ ಬೆಳಿಗ್ಗೆ ಗಂಟೆ 8.16ರ ಶುಭ ಸುಮುಹೂರ್ತ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಬ್ರಹ್ಮಕಲಶಾಭಿಷೇಕ ಮತ್ತು ಶ್ರೀ ಗಣಪತಿ, ಶ್ರೀ ಶಾಸ್ತಾರ, ಪರಿವಾರ ದೈವ, ನಾಗದೇವರಿಗೆ ಕಲಶಾಭಿಷೇಕ ನೆರವೇರಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಳಿಗ್ಗೆ ಗಂಟೆ 10.30ಕ್ಕೆ ಧಾರ್ಮಿಕ ಸಭೆಯಲ್ಲಿ ಒಡಿಯೂರು ಮಾತಾನಂದಮಯಿ ಆಶೀರ್ವಚನ ನೀಡುವರು. ಮಧ್ಯಾಹ್ನ 1 ಗಂಟೆಗೆ ಹಗಲು ರಥೋತ್ಸವ, 2 ಗಂಟೆಗೆ ‘ವಾಲಿಮೋಕ್ಷ’ ಯಕ್ಷಗಾನ ತಾಳಮದ್ದಳೆ, ಸಂಜೆ ಗಂಟೆ 6.30ಕ್ಕೆ ಧಾರ್ಮಿಕ ಸಭೆ, ಗಂಟೆ 7.30ಕ್ಕೆ ‘ನೃತ್ಯ ರೂಪಕ’, ರಾತ್ರಿ ಗಂಟೆ 9.30ಕ್ಕೆ ‘ನಾಗಚಂದನ’ ಯಕ್ಷಗಾನ ಬಯಲಾಟ ನಡೆಯಲಿದೆ. ಈಗಾಗಲೇ ಫೆ.19ರಂದು ಆಕರ್ಷಕ ಹೊರೆಕಾಣಿಕೆ ಮೆರವಣಿಗೆ ನಡೆದಿದ್ದು, ಫೆ.21 ರಂದು ದೇವಿಯ ವಿಗ್ರಹ ಪುನರ್ ಪ್ರತಿಷ್ಠೆಯೂ , ಮತ್ತು ದೇವರ ಪ್ರತಿಷ್ಠೆಯೂ ನಡೆದಿದೆ. ಪ್ರತಿದಿನ ಸಂಜೆ ಧಾರ್ಮಿಕ ಸಭೆ ಮತ್ತು ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯುತ್ತಿದ್ದು, ಪ್ರತಿದಿನ ಸಹಸ್ರಾರು ಮಂದಿ ಭಕ್ತರಿಗೆ ಅನ್ನಸಂತರ್ಪಣೆ ಮುಂದುವರಿದಿದೆ. ಇದರ ವಿಶೇಷತೆಯೆಂದರೆ ತಾಮ್ರದ ಹೊದಿಕೆ ಸಹಿತ ಎರಡು ಅಂತಸ್ತಿನ ಶಿಲಾಮಯ ಗರ್ಭಗುಡಿ, ಶಿಲಾಮಯ ಗಣಪತಿ ದೇವರ ಗುಡಿ ಮತ್ತು 16 ಕಂಬಗಳಿಂದ ಕೂಡಿದ ಅವಿಭಜಿತ ಜಿಲ್ಲೆಯ ಏಕೈಕ ಶಿಲಾಮಯ ತೀರ್ಥಮಂಟಪ ಇಲ್ಲಿದೆ. ಮಾಗಣೆಯ 16 ಗ್ರಾಮಣಿಗರ ಮನೆತನದ ಪಳೆಯುಳಿಕೆಯಾಗಿ ಈ ತೀರ್ಥಮಂಟಪ ಭಕ್ತರ ಗಮನ ಸೆಳೆಯುತ್ತಿದೆ. ಈ ಹಿಂದೆ 16 ಮನೆತನದವರು ಇಲ್ಲಿ ಕುಳಿತು ದೇವಳ ಮತ್ತು ಮಾಗಣೆಯ ಬಗ್ಗೆ ಚರ್ಚಿಸುತ್ತಿದ್ದರು ಎಂಬ ಇತಿಹಾಸವೂ ಇದೆ. ಈ ಹಿಂದೆ ದಟ್ಟಾರಣ್ಯದಂತೆ ಇದ್ದ ಪ್ರಕೃತಿ ರಮಣೀಯ ವಿಶಾಲವಾದ ಪ್ರದೇಶದಲ್ಲಿ ದೇವಿಯು ವನದುರ್ಗ ಸ್ವರೂಪಿಣಿಯಾಗಿ ನೆಲೆಯಾಗಿ ಬಳಿಕ ಜೈನರಸರ ಕಾಲದಲ್ಲಿ ಶ್ರೀ ದುರ್ಗಪರಮೇಶ್ವರಿಯಾಗಿ ಪೂಜೆ ಸಲ್ಲಿಸುತ್ತಿದ್ದರು. ಅಳದಂಗಡಿ ಅರಮನೆ ಅಜಿಲ ಸೀಮೆಯ ಪಟ್ಟ ದೇಗುಲ ಎಂಬ ಹಿರಿಮೆ ಹೊಂದಿದೆ. ಇದೀಗ 4 ಅಡಿ ಎತ್ತರದ ದೇವಿ ವಿಗ್ರಹವು ಶಂಖ, ಚಕ್ರ, ಗಧಾ, ಪದ್ಮಧಾರಿಯಾಗಿ ಕಂಗೊಳಿಸುತ್ತಿದೆ. ಜಿಲ್ಲೆಯಲ್ಲೇ ಅಪರೂಪ ಎಂಬಂತೆ 16 ಕಂಬಗಳು ಹೊಂದಿರುವ ವೈಶಿಷ್ಟ್ಯ ಪೂರ್ಣ ತೀರ್ಥಮಂಟಪ, ವಿಸ್ತಾರವಾದ ಹೊರಾಂಗಣ, ಸಾಂಪ್ರದಾಯಿಕ ಚಪ್ಪರ, ಕಲಾತ್ಮಕ ವೇದಿಕೆ, ವಿಶಾಲವಾದ ಸಭಾಂಗಣ, ಶಿಸ್ತುಬದ್ಧ ಕಾರ್ಯಕರ್ತರ ದಂಡು ಇಲ್ಲಿದೆ. ಕಳೆದ ಕೆಲವು ತಿಂಗಳ ಶ್ರಮದಾನ, 48 ದಿನಗಳ ಅಖಂಡ ಭಜನೆ, ಇಲ್ಲಿನ ರಸ್ತೆಯುದ್ದಕ್ಕೂ ಅತ್ಯಾಕರ್ಷಕ ಮತ್ತು ಕಲಾತ್ಮಕ ದ್ವಾರ, ಶುಭ ಕೋರುವ ಫ್ಲೆಕ್ಸ್, ಬಂಟಿಂಗ್ಸ್ ರಾರಾಜಿಸುತ್ತಿದೆ. ಇಲ್ಲಿನ ಮಾಗಣೆಯ 7 ಗ್ರಾಮಗಳಾದ ಅಜ್ಜಿಬೆಟ್ಟು, ಕುಡಂಬೆಟ್ಟು, ಪಿಲಿಮೊಗರು, ಚೆನ್ನೈತ್ತೋಡಿ, ಇರ್ವತ್ತೂರು, ಪಿಲಾತಬೆಟ್ಟು, ಮೂಡುಪಡುಕೋಡಿ ಗ್ರಾಮಗಳ ಭಕ್ತರು ಸಹಿತ ಬೆಂಗಳೂರು ಮತ್ತು ಮುಂಬೈ ಸಮಿತಿ ಬ್ರಹ್ಮಕಲಶೋತ್ಸವದ ಯಶಸ್ವಿಗೆ ಶ್ರಮಿಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು