ಅಂಬಿಕಾ ಪದವಿ ಕಾಲೇಜಿನಲ್ಲಿ ತತ್ವಶಾಸ್ತ್ರದ ಕುರಿತಾಗಿ ವಿಶೇಷ ಉಪನ್ಯಾಸ, ಆತ್ಮತತ್ವ ತಿಳಿಯಲು ವೇದ ಮತ್ತು ಉಪನಿಷತ್ ಸಹಾಯಕ ; ಸೋಮಯಾಜಿ-ಕಹಳೆ ನ್ಯೂಸ್
ಪುತ್ತೂರು : ಇಲ್ಲಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಕಾಲೇಜಿನ ತತ್ತ್ವಶಾಸ್ತ್ರ ಮತ್ತು ಸಂಸ್ಕøತ ವಿಭಾಗಗಳ ಆಶ್ರಯದಲ್ಲಿ ಉಪನಿಷತ್ತಿನ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವು ಸೋಮವಾರ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ತೀರ್ಥಹಳ್ಳಿ ತಾಲೂಕಿನ ಕಮ್ಮರಡಿಯ ವಿದ್ವಾಂಸ ವಿದ್ವಾನ್ ಕೆ.ಎಲ್.ತೇಜಶಂಕರ ಸೋಮಯಾಜಿ ಮಾತನಾಡಿ ವೇದ, ಉಪನಿಷತ್ತುಗಳು ಆತ್ಮತತ್ತ್ವವನ್ನು ತಿಳಿಯಲು ಸಹಾಯ ಮಾಡುವ ಶಾಸ್ತ್ರಗಳು. ವೇದಗಳು ಅಧಿಕಾರಯುತವಾದ ಆದೇಶವನ್ನು ಕೊಡುತ್ತವೆ. ಆತ್ಮತತ್ತ್ವವನ್ನು ಉಪನಿಷತ್ತಿನ ಅಧ್ಯಯನದಿಂದ ಅತ್ಯಂತ ಸರಳವಾಗಿ ತಿಳಿಕೊಳ್ಳಬಹುದು.ತತ್ತ್ವಶಾಸ್ತ್ರದ ಅಧ್ಯಯನ ಎಂದರೆ ಉಪನಿಷತ್ತುಗಳ ಅಧ್ಯಯನವೇ ಆಗಿದೆ ಎಂದರು. ಉಪನಿಷತ್ತಗಳು ಮಹತ್ವವಾದವುಗಳು. ಅತ್ಯಂತ ಸರಳವಾದ ಹಾಗು ಗಹನವಾದ ವೇದಗಳ ಸಾರವನ್ನು ಉಪನಿಷತ್ತುಗಳ ಮೂಲಕ ಸುಲಭವಾಗಿ ತಿಳಿದುಕೊಳ್ಳಬಹುದು. ಉಪನಿಷತ್ತುಗಳು ಪ್ರಶ್ನೋತ್ತರಗಳಲ್ಲಿ ಇರುವುದರಿಂದ ಇದರ ಮುಖೇನ ವೇದಾರ್ಥವನ್ನು ಗ್ರಹಿಸಲು ಸಾಧ್ಯ. ಭಾರತೀಯ ವಿದ್ಯೆಗಳಲ್ಲಿ ಉಪನಿಷತ್ ವಿದ್ಯೆ ಅತ್ಯಂತ ಗಹನವಾಗಿದ್ದು, ಇದನ್ನು ಅರ್ಥೈಸಲು ಬಹಳ ದೀರ್ಘಕಾಲದ ತಪಸ್ಸು ಅಗತ್ಯವಿದೆ. ಆಧುನಿಕ ಕಾಲದಲ್ಲಿ ಕೂಡ ಉಪನಿಷತ್ ಅಧ್ಯಯನ ಅಗತ್ಯವಿದ್ದು ಇದರ ಮುಖೇನ ಆತ್ಮದ ಉತ್ಕರ್ಷ ಸಾಧ್ಯ ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಮಾತನಾಡಿ ವಿದ್ಯಾರ್ಥಿಗಳು ಪರೀಕ್ಷಾತ್ಮಕ ದೃಷ್ಟಿಯನ್ನು ಬೆಳೆಸಿಕೊಳ್ಳಬೇಕು. ಜೀವನದಲ್ಲಿ ವೇದ, ಉಪನಿಷತ್ತುಗಳ ಸಾರವನ್ನು ಪ್ರಾಯೋಗಿಕವಾಗಿ ಬೆಳೆಸಿಕೊಳ್ಳಬೇಕು ಎಂದರು. ಕಾಲೇಜಿನ ವಿದ್ಯಾರ್ಥಿ ಮೋಹನ್ ಸ್ವಾಗತಿಸಿ ವಿದ್ಯಾರ್ಥಿನಿ ಪ್ರಕೃತಿ ವಂದಿಸಿದರು. ವಿದ್ಯಾರ್ಥಿ ಕಾರ್ತಿಕ್ ಕಾರ್ಯಕ್ರಮ ನಿರ್ವಹಿಸಿದರು.