ಅಂಬಿಕಾ ಪದವಿ ಕಾಲೇಜಿನ ರಕ್ಷಕ ಶಿಕ್ಷಕ ಸಂಘ ಉದ್ಘಾಟನೆ,ಜ್ಞಾನ ಪಸರಿಸುವಿಕೆಯಲ್ಲಿ ತತ್ವಶಾಸ್ತ್ರದ ಪಾತ್ರ ಮಹತ್ವದ್ದು ; ರಾಜಶ್ರೀ ನಟ್ಟೋಜ-ಕಹಳೆ ನ್ಯೂಸ್
ಪುತ್ತೂರು : ಜ್ಞಾನ ಪಸರಿಸುವಿಕೆಯ ಪ್ರಕ್ರಿಯೆಯಲ್ಲಿ ತತ್ವಶಾಸ್ತ್ರದ ಅಧ್ಯಯನ ಅತ್ಯಂತ ಅಗತ್ಯವಾದದ್ದು. ತತ್ವಶಾಸ್ತ್ರದ ಹಿನ್ನೆಲೆಯಿದ್ದಾಗ ಉತ್ತಮ ವ್ಯಕ್ತಿತ್ವವೊಂದರ ರೂಪುಗೊಳ್ಳುವಿಕೆ ಸುಲಭ ಸಾಧ್ಯವೆನಿಸುತ್ತದೆ. ಉತ್ತಮ ಸಮಾಜದ ನಿರ್ಮಾಣದಲ್ಲಿ ತತ್ವಶಾಸ್ತ್ರ ಪ್ರಮುಖ ಪಾತ್ರ ವಹಿಸಬಲ್ಲುದು ಎಂದು ಅಂಬಿಕಾ ಸಮೂಹ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಹೇಳಿದರು.
ಅವರು ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಬುಧವಾರ ಮಾತನಾಡಿದರು. ಇಂದು ವಿಜ್ಞಾನದೊಂದಿಗೆ ತತ್ವಶಾಸ್ತ್ರವನ್ನು ಬೋಧಿಸುತ್ತಿರುವ ದೇಶದ ಏಕೈಕ ವಿದ್ಯಾಸಂಸ್ಥೆಯಾಗಿ ಅಂಬಿಕಾ ಮಹಾವಿದ್ಯಾಲಯ ಕಾರ್ಯನಿರ್ವಹಿಸುತ್ತಿದೆ. ಹಾಗೆಯೇ ಪತ್ರಿಕೋದ್ಯಮದೊಂದಿಗೆ ಕೂಡ ತತ್ವಶಾಸ್ತ್ರವನ್ನು ಸಂಯೋಜಿಸಲಾಗಿದೆ. ಉತ್ತಮ ಪತ್ರಕರ್ತರ ತಯಾರಿಯಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ. ಇಂದಿನ ಸಮಾಜಕ್ಕೆ ಕೇವಲ ಬುದ್ಧಿವಂತರಷ್ಟೇ ಸಾಲದು ಬದಲಾಗಿ ಭಾವನಾತ್ಮಕ ಜೀವಿಗಳಾಗಿರುವ ಆಧ್ಯಾತ್ಮಿಕ ಸಾಧಕರ ಅಗತ್ಯವಿದೆ. ಹಾಗಾದಾಗ ಸಮಾಜ ಉನ್ನತಿಕೆಯನ್ನು ಕಾಣಬಹುದು ಎಂದು ಅಭಿಪ್ರಾಯಪಟ್ಟರು. ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಮಾತನಾಡಿ ನೂತನ ಶಿಕ್ಷಣ ನೀತಿಯು ಹೊಸ ಬಗೆಯ ದೃಷ್ಟಿಕೋನವನ್ನು ಒದಗಿಸುವತ್ತ ಹೆಜ್ಜೆ ಇಡುತ್ತಿದೆ. ಇಂತಹ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಗಳೂ ಭಿನ್ನವಾಗಿ ಆಲೋಚಿಸುವ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ. ನೈತಿಕವಾಗಿ ಗಟ್ಟಿಯಾಗಿರುವ ಕೌಶಲ್ಯಪೂರ್ಣ ಯುವಸಮುದಾಯದ ಸೃಷ್ಟಿ ಶಿಕ್ಷಣದ ಗುರಿಯಾಗಬೇಕು. ತರಗತಿಯ ಒಳಗಿದ್ದು ಕಲಿಯುವ ರೀತಿಯಲ್ಲೇ ತರಗತಿಯಾಚೆಗೆ ಕಲಿಯುವ ವಾತಾವರಣವನ್ನೂ ನಿರ್ಮಿಸಿಕೊಡಬೇಕಾಗಿದೆ. ಭಾರತೀಯ ಸಂಸ್ಕøತಿ, ಸಂಸ್ಕಾರಗಳೊಡನೆ ವಿದ್ಯಾರ್ಥಿಗಳ ಮನೋವಿಕಾಸದ ಉದ್ದೇಶವುಳ್ಳ ಶಿಕ್ಷಣ ಇಂದಿನ ಅನಿವಾರ್ಯತೆಯೂ ಹೌದು ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಟ್ಟೋಜ ಫೌಂಡೇಶನ್ ಟ್ರಸ್ಟ್‍ನ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಇಂದು ಶಿಕ್ಷಣ ಸಂಸ್ಥೆಗಳು ಲಾಭದ ದೃಷ್ಟಿಕೋನವಿಟ್ಟುಕೊಂಡು ಕೋರ್ಸ್‍ಗಳನ್ನು ಆರಂಭಿಸುವ ಉದಾಹರಣೆಗಳನ್ನು ಕಾಣುತ್ತಿದ್ದೇವೆ. ಆದರೆ ಲಾಭದ ಉದ್ದೇಶವನ್ನು ಬದಿಗಿರಿಸಿ ಜ್ಞಾನದ ಉದ್ದೇಶವನ್ನು ಸ್ವೀಕರಿಸಿ ಮುನ್ನಡೆಯುವ ಜವಾಬ್ಧಾರಿ ಎಲ್ಲ ಶಿಕ್ಷಣ ಸಂಸ್ಥೆಗಳ ಮೇಲಿದೆ. ನಮ್ಮ ದೇಸೀಯವಾದ ತತ್ವ ಸಿದ್ಧಾಂತಗಳನ್ನು ಸಾರುವ ಶಿಕ್ಷಣವನ್ನು ನಾವಿಂದು ನೀಡಬೇಕಾಗಿದೆ ಎಂದರಲ್ಲದೆ ಹೆತ್ತವರು ಆಗಾಗ ಶಿಕ್ಷಣ ಸಂಸ್ಥೆಗೆ ಭೇಟಿ ನೀಡುವುದು ವಿದ್ಯಾರ್ಥಿಗಳ ಸಮರ್ಪಕ ಬೆಳವಣಿಗೆಗೆ ಪೂರಕ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳನ್ನು ಗುರುತಿಸಲಾಯಿತು. ಅಧ್ಯಕ್ಷರಾಗಿ ಪಿ.ಜಿ.ಜಗನ್ನಿವಾಸ ರಾವ್, ಕಾರ್ಯದರ್ಶಿಯಾಗಿ ರಾಮ ಭಟ್ ಕೆದಿಮಾರು, ಖಜಾಂಚಿಯಾಗಿ ಮಲ್ಲಿಕಾ ನೇಮಕಗೊಂಡರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಅಭಿಷೇಕ್ ಸ್ವಾಗತಿಸಿ, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಅಕ್ಷಯ್ ಹೆಗಡೆ ವಂದಿಸಿದರು. ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಕಾರ್ಯಕ್ರಮ ನಿರ್ವಹಿಸಿದರು.