ಕಾಂಗ್ರೆಸ್ ಶಾಸಕಾಂಗ ಪಕ್ಷ ಸೇರ್ಪಡೆ ಬದಲಿಗೆ ಬಾಹ್ಯ ಬೆಂಬಲ; ಕಾಂಗ್ರೆಸ್ ಸೇರ್ಪಡೆಯಿಂದ ಹಿಂದೆ ಸರಿದ ಶರತ್ ಬಚ್ಚೇಗೌಡ-ಕಹಳೆ ನ್ಯೂಸ್
ಬೆಂಗಳೂರು : ಹೊಸಕೋಟೆ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಅವರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬುದಕ್ಕೆ ಇಂದು ತೆರೆ ಬಿದ್ದಿದೆ. ಅವರು ಪಕ್ಷಕ್ಕೆ ಸೇರ್ಪಡೆಯಾಗುವುದಕ್ಕೆ ಬದಲಾಗಿ ಕಾಂಗ್ರೆಸ್ನ ಬೆಂಬಲ ಪಡೆದುಕೊಂಡಿದ್ದಾರೆ.
ನಿಮ್ಮ ಶಾಸಕರು ಈಗಲೂ ನಾನು ಪಕ್ಷೇತರವಾಗಿಯೇ ಉಳಿತೀನಿ ಅಂತಿದ್ದಾರೆ. ಆದರೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಬೆಂಬಲ ಕೋರಿದ್ದಾರೆ, ನಾವು ಬೆಂಬಲ ನೀಡ್ತೇವೆ. ಈಗ ನಿಮ್ಮನ್ನೆಲ್ಲ ಪಕ್ಷಕ್ಕೆ ಸೇರಿಸಿಕೊಳ್ಳಲು ಏನೆಲ್ಲಾ ಪಗಡೆ ಆಡಿದ್ದೀವಿ ಅಂತ ನನಗೆ ಹಾಗೂ ಸಿ.ಎಂ. ಲಿಂಗಪ್ಪನವರಿಗೆ ಗೊತ್ತು. ನಮ್ಮ ಸಂಪೂರ್ಣ ಬೆಂಬಲ ನಿಮಗೆಲ್ಲಾ ಇದೆ ಎಂದರು. ಸಿದ್ದರಾಮಯ್ಯನವರ ಸರ್ಕಾರಿ ನಿವಾಸದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಹಸದಸ್ಯನಾಗಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಹೊಸಕೋಟೆ ನಾಯಕರಿಗೆ ನಾನು 30-40 ವರ್ಷಗಳಿಂದ ಗಾಳ ಹಾಕುತ್ತಲೇ ಇದ್ದೆ. ಆದರೆ ನನ್ನ ಗಾಳಕ್ಕೆ ಮೀನು ಬಿದ್ದಿರಲಿಲ್ಲ. ಈಗಲೂ ಸಹ ನಿಮ್ಮ ಶಾಸಕರು ನಮ್ಮ ಗಾಳಕ್ಕೆ ಬಿದ್ದಿಲ್ಲ, ಆದರೆ ಬೆಂಬಲಿಗರು ನಮ್ಮ ಗಾಳಕ್ಕೆ ಬಿದ್ದಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದರು. ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಯಾರು ಗರ್ಭದಿಂದ ನಾಯಕರಾಗಿ ಬರಲು ಸಾಧ್ಯವಿಲ್ಲ. ಜನರ ಆಯ್ಕೆಯಿಂದಲೇ ನಾಯಕರಾಗಬೇಕಾಗುತ್ತದೆ. ನಾವು ಜನರ ಹಿತಕ್ಕೆ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೇಳಿದರು. ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಲ್ಲ. ಇದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಾರ್ಯಕ್ರಮ. ಕ್ಷೇತ್ರದ ಅಭಿವೃದ್ಧಿಗೆ ನೀವೆಲ್ಲರೂ ದುಡಿಯಬೇಕು. ಶರತ್ ಬಚ್ಚೇಗೌಡ ಬಾಹ್ಯ ಬೆಂಬಲ ಕೊಟ್ಟಿದ್ದಾರೆ. ಶಾಸಕಾಂಗ ಪಕ್ಷದ ನಾಯಕರಿಗೆ ಪತ್ರ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಜನರ ಬಾಗಿಲನ್ನ ಸರ್ಕಾರ ಬಡಿಯುತ್ತಿದೆ. ಇದಕ್ಕೆ ಮುಕ್ತಿ ಕೊಡಬೇಕಾದ್ರೆ ನಾವು ಹೋರಾಡಬೇಕು ಎಂದು ಡಿಕೆಶಿ ಕರೆ ಕೊಟ್ಟರು. ತಾಲೂಕಿನ ಹಿತದೃಷ್ಟಿಯಿಂದ ಇಲ್ಲಿ ಸೇರಿಸಿದ್ದೇವೆ. ಉಪಚುನಾವಣೆಯಲ್ಲಿ ಸ್ವಾಭಿಮಾನಿಯಾಗಿ ಸ್ಪರ್ಧಿಸಿ ಗೆದ್ದೆ. ತಾಲೂಕಿನಲ್ಲಿ ಅಧಿಕಾರಿಗಳ ದಬ್ಬಾಳಿಕೆ ನಡೆದಿದೆ, ಪೊಲೀಸರ ದೌರ್ಜನ್ಯವೂ ನಡೆಯುತ್ತಿದೆ. ನಮ್ಮ ಕೂಗಿಗೆ ಧ್ವನಿ ಸಿಕ್ಕಿರಲಿಲ್ಲ. ಹಾಗಾಗಿ ಕಾಂಗ್ರೆಸ್ ಶಾಸಕಾಂಗ ಬೆಂಬಲ ಕೇಳುತ್ತಿದ್ದೇನೆ. ಹಾಗೆ ನಾನು ಬಾಹ್ಯ ಬೆಂಬಲವನ್ನ ಸೂಚಿಸುತ್ತಿದ್ದೇನೆ ಎಂದು ಹೇಳಿದರು. ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಕೃಷ್ಣ ಭೈರೇಗೌಡ, ಮಾಜಿ ಸಚಿವ ರಮೇಶ್ ಕುಮಾರ್, ನಾರಾಯಣಸ್ವಾಮಿ, ಭೈರತಿ ಸುರೇಶ್, ಜಮೀರ್ ಅಹ್ಮದ್, ಕೆ.ಜೆ. ಜಾರ್ಜ್, ನಜೀರ್ ಅಹ್ಮದ್, ಎಂಎಲ್ಸಿ ರವಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.