ಉಳ್ಳಾಲ: ಅಮೃತಧಾರಾ ಗೋಶಾಲೆಯಿಂದ ಹಸು ಅಪಹರಣಗೈದವರನ್ನು ಎ. 6ರ ಸಂಜೆಯೊಳಗೆ ಬಂಧಿಸಲೇಬೇಕು. ಪೊಲೀಸರಿಂದ ಅಸಾಧ್ಯ ಎಂದಾದರೆ ಒಪ್ಪಿಕೊಂಡು ಹಿಂದೂ ಸಂಘಟನೆಗಳಿಗೆ ಜವಾಬ್ದಾರಿ ಕೊಡಿ. ಆರೋಪಿಗಳನ್ನು ಹಿಡಿದು ತರುತ್ತೇವೆ ಎಂದು ಕುಂಟಾರು ರವೀಶ ತಂತ್ರಿ ತಿಳಿಸಿದ್ದಾರೆ. ಗೋ ಕಳ್ಳತನ ಖಂಡಿಸಿ ಟಿ.ಜಿ. ರಾಜಾರಾಮ ಭಟ್ ಕಳೆದ 5 ದಿನಗಳಿಂದ ಉಪವಾಸ ಸತ್ಯಾಗ್ರಹಕ್ಕೆ ನಡೆಸುತ್ತಿರುವ ಕೈರಂಗಳ ಪುಣ್ಯಕೋಟಿ ನಗರಕ್ಕೆ ಗುರುವಾರ ಆಗಮಿಸಿ ಆರೋಗ್ಯ ವಿಚಾರಿಸಿದ ಬಳಿಕ ಅವರು ಮಾತನಾಡಿದರು.
ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮಾತನಾಡಿ, ಗೋ ಕಳ್ಳರನ್ನು ಬಂಧಿಸಲಾಗದೇ ಇದ್ದಲ್ಲಿ ಪೊಲೀಸರು ಮತ್ತು ಸರಕಾರ ಸಮಾಜಕ್ಕೆ ಉತ್ತರ ಕೊಡಬೇಕು ಎಂದು ಹೇಳಿದರು. ಸೂರ್ಯನಾರಾಯಣ ಭಟ್ ಕಶೆಕೋಡಿ ಮಾತನಾಡಿ, ಪೊಲೀಸರು ಯಾವುದೋ ಒತ್ತಡಕ್ಕೆ ಮಣಿದಿದ್ದಾರೆ ಎಂದರು. ಹಿಂ. ಜಾ.ವೇ.ಯ ಸಂಚಾಲಕ ಗಣರಾಜ ಭಟ್ ಕೆದಿಲ ಮಾತನಾಡಿದರು. ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಭೇಟಿ ನೀಡಿದರು.
ಮುಸಲ್ಮಾನರಿಂದಲೂ ಬೆಂಬಲ
ಬಿಜೆಪಿ ಅಲ್ಪಸಂಖ್ಯಾಕ ಮೋರ್ಚಾದ ಫಝಲ್ ಅಸೈಗೋಳಿ ಮಾತನಾಡಿ, ಕಳವು ನಡೆಸುವಾತ ಇಸ್ಲಾಂ ಧರ್ಮದ ಪ್ರತಿಪಾದಕನಾಗಲು ಸಾಧ್ಯವಿಲ್ಲ. ಈ ಹೋರಾಟವನ್ನು ಮುಸ್ಲಿಂ ಸಮಾಜ ಬೆಂಬಲಿಸಲಿದೆ ಎಂದರು. ಮಹಮ್ಮದ್ ಹನೀಫ್ ಅಸೈಗೋಳಿ ಮಾತನಾಡಿ, ಇಸ್ಲಾಂನಲ್ಲಿ ಕದ್ದು ತಿನ್ನಬಾರದು ಎಂಬ ಶಾಸ್ತ್ರವಿದೆ. ಈ ಅಪರಾಧ ಮಾಡಿದವರನ್ನು ಬಂಧಿಸಿ, ಶಿಕ್ಷಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳು ನಡೆಯಬಾರದು ಎಂದರು.
ಸಾಮೂಹಿಕ ಪ್ರಾರ್ಥನೆಗೆ ವಿಹಿಂಪ ಕರೆ
ನಾಡಿನಾದ್ಯಂತ ಗೋರಕ್ಷಣೆಯ ನಿಟ್ಟಿನಲ್ಲಿ ಎ. 6ರಂದು ಶುಕ್ರವಾರ ಉಳ್ಳಾಲ ವ್ಯಾಪ್ತಿಯ ಎಲ್ಲ ದೈವಸ್ಥಾನ, ದೇವಸ್ಥಾನ, ಧಾರ್ಮಿಕ ಕೇಂದ್ರಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ವಿಶ್ವಹಿಂದೂ ಪರಿಷತ್ ಮತ್ತು ಸಹ ಸಂಘಟನೆಗಳು ಕರೆ ನೀಡಿವೆ. ಕುತ್ತಾರು ಬಾಲಸಂರಕ್ಷಣಾಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಶ್ವಹಿಂದೂ ಪರಿಷತ್‌ನ ಪ್ರಾಂತ ಸಹ ಕಾರ್ಯದರ್ಶಿ ಕೃಷ್ಣಮೂರ್ತಿ ಈ ವಿಷಯ ತಿಳಿಸಿದರು.