ವಿಶ್ವ ಆರೋಗ್ಯ ದಿನ ; ದೈಹಿಕ ಮಾನಸಿಕ ಹಾಗೂ ಸಾಮಾಜಿಕ ನೆಮ್ಮದಿಯ ಸ್ಥಿತಿಯೇ ಆರೋಗ್ಯ – ಡಾ. ಶ್ರೀಲತಾ ಪದ್ಯಾಣ
ಆರೋಗ್ಯದ ಕಾಳಜಿ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ ವರ್ಷ ಏಪ್ರಿಲ್ 7 ರಂದು ‘ವಿಶ್ವ ಆರೋಗ್ಯ ದಿನ’ವೆಂದು ಆಚರಿಸುತ್ತದೆ. ಸಾರ್ವಜನಿಕರಿಗೆ ಆರೋಗ್ಯ ಮತ್ತು ಹಲವಾರು ಕೆಡುಕುಗಳ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ. ನೈರ್ಮಲ್ಯ ಯುಕ್ತ ಸಮಾಜಕ್ಕೆ ಅಗತ್ಯವಾದ ಸ್ವಚ್ಛತಾ ಅಭ್ಯಾಸಗಳು ನೀರಿನ ಸಂರಕ್ಷಣೆ ಪರಿಸರ ಸ್ವಚ್ಛತೆ ಹಾಗೂ ಸೂಕ್ತ ಕಾಲಕ್ಕೆ ತೆಗೆದುಕೊಳ್ಳಬೇಕಾದ ಔಷಧಿಗಳು ಮುಂತಾದ ವಿಷಯಗಳ ಬಗ್ಗೆ ಮಾಹಿತಿ ಬಿತ್ತನೆ ಮಾಡಲಾಗುತ್ತದೆ.
ಉತ್ತಮ ರೀತಿಯ ಬದುಕಿಗೆ ಆರೋಗ್ಯವೂ ಅತ್ಯಗತ್ಯ. ಆದರೆ ಭಾರತದ ಆರೋಗ್ಯ ಅಷ್ಟು ಆರೋಗ್ಯಕರವಾಗಿಲ್ಲ ಎಂಬುದು ವಿಷಾದನೀಯ ಸಂಗತಿ. ಭಾರತ ಇನ್ನೂ ಅಪೌಷ್ಟಿಕತೆಯಿಂದ ಬಳಲುತ್ತಿದೆ. ದೇಶದ ಜನರ ಆರೋಗ್ಯ ಸುಧಾರಣೆಗಳಿಗೆ ಕಳೆದ ಹತ್ತು ವರ್ಷಗಳಿಂದ ಕ್ರಮಗಳನ್ನು ತೆಗೆದುಕೊಂಡಿದ್ದರೂ ಆರೋಗ್ಯ ಸುಧಾರಿಸಿಲ್ಲವಂತೆ! ಮಹಿಳೆಯರಲ್ಲಿ ಅನೀಮಿಯಾ, ವಯಸ್ಸಿಗೆ ಬರುವ ಮೊದಲೇ ನಡೆಯುವ ಮದುವೆಯಿಂದಾಗಿ ಮಕ್ಕಳಲ್ಲಿ ಅಪೌಷ್ಟಿಕತೆ, ಕುಂಠಿತ ಬೆಳವಣಿಗೆ, ರಕ್ತ ಕಣಗಳ ಕೊರತೆ, ಚುಚ್ಚುಮದ್ದು ನೀಡುವ ಕಾರ್ಯಕ್ರಮಗಳಲ್ಲಿ ಅಸಂತೃಪ್ತಿ ಹಾಗೂ ಸಾಂಕ್ರಾಮಿಕ ರೋಗಗಳ ನಿರ್ಲಕ್ಷ್ಯ ಎಲ್ಲವೂ ತಲೆ ಎತ್ತಿ ನಿಂತಿವೆ.ಸಾಮಾಜಿಕ ಹಾಗೂ ಆರ್ಥಿಕ ಕಾರಣಗಳು ಬಡತನ ಮತ್ತು ಶಿಕ್ಷಣದ ಕೊರತೆ ಹಾಗೂ ಮೂಲಭೂತ ಸೌಕರ್ಯಗಳ ಕೊರತೆಗಳೇ ಆರೋಗ್ಯದ ಕೆಡುಕಿಗೆ ತಳಹದಿಯಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ದೈಹಿಕ ಮಾನಸಿಕ ಹಾಗೂ ಸಾಮಾಜಿಕ ನೆಮ್ಮದಿಯ ಸ್ಥಿತಿಯೇ ಆರೋಗ್ಯ. ಉತ್ತಮ ಆರೋಗ್ಯಕ್ಕಾಗಿ ಸತ್ವಯುತ ಆಹಾರಗಳು, ಶುದ್ಧ ಕುಡಿಯುವ ನೀರು, ಶುದ್ಧ ಗಾಳಿ-ಬೆಳಕು, ಸ್ವಚ್ಛ ಪರಿಸರ, ನೆಮ್ಮದಿ ಮತ್ತು ಮನರಂಜನೆ ಅತ್ಯಗತ್ಯವಾದದ್ದು. ಹೀಗಿರುವಾಗ ಆರೋಗ್ಯದ ಅರಿವು ಮೂಡಿಸಲು ಪ್ರಯತ್ನಿಸುತ್ತಿರುವ ವೈದ್ಯರು ಬೇಡ, ಅನಾರೋಗ್ಯ ಬಂದಾಗ ಮಾತ್ರ ವೈದ್ಯರೇ ಗತಿ !
ವಿಶ್ವ ಆರೋಗ್ಯ ದಿನದ ಉದ್ದೇಶಗಳು–
• ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು.• ಸೂಕ್ತ ಕಾಲಕ್ಕೆ ನೀಡಬೇಕಾದ ಆರೋಗ್ಯ ಸೇವೆಗೆ ಪ್ರಾಮುಖ್ಯತೆ ನೀಡುವುದು.• ಪರಿಸರದ ಸ್ವಚ್ಛತೆ ಹಾಗೂ ರಕ್ಷಣಾ ಕ್ರಮಗಳು• ವಿವಿಧ ರೋಗಗಳಿಗೆ ತುತ್ತಾಗುವ ಕಾರಣಗಳು ಹಾಗೂ ಅವುಗಳನ್ನು ತಡೆಗಟ್ಟುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು.• ದುಶ್ಚಟಗಳಿಂದ ದೂರವಿರಿಸುವ ಕ್ರಮಗಳು ಹಾಗೂ ಅದರಿಂದಾಗುವ ಪರಿಣಾಮಗಳ ಬಗ್ಗೆ ತಿಳುವಳಿಕೆ ನೀಡುವುದು.
– ಡಾ. ಶ್ರೀಲತಾ ಪದ್ಯಾಣ ( ಪ್ರಕೃತಿ ಚಿಕಿತ್ಸಾ ತಜ್ಞರು)