ಅಂಬಿಕಾ ವಸತಿ ಪದವಿಪೂರ್ವ ವಿದ್ಯಾಲಯದಲ್ಲಿ ಪೋಷಕರ ಸಭೆ, ಗುರಿ ಸಾಧನೆಗೆ ಗುರುವಿನ ಅನುಗ್ರಹ ಅತ್ಯಂತ ಮುಖ್ಯ ; ಕೃಷ್ಣ ಮೂರ್ತಿ-ಕಹಳೆ ನ್ಯೂಸ್
ಪುತ್ತೂರು : ಇಲ್ಲಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಸತಿಯುತ ಪದವಿಪೂರ್ವ ವಿದ್ಯಾಲಯದ ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾಥಿಗಳ ಪೋಷಕರ ಸಭೆ ಶುಕ್ರವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ, ನ್ಯಾಯವಾದಿ ಕೃಷ್ಣಮೂರ್ತಿ ಗುರಿ ಸಾಧನೆಗೆ ಗುರುವಿನ ಅನುಗ್ರಹ ಅತ್ಯಂತ ಮುಖ್ಯ. ಅಂಬಿಕಾ ಪದವಿಪೂರ್ವ ಕಾಲೇಜಿನಲ್ಲಿ ಅಂತಹ ಎಲ್ಲ ಸೌಲಭ್ಯಗಳಿವೆ. ವಿದ್ಯಾರ್ಥಿಗಳಿಗೆ ಇಂದು ಬೆಳೆಯುವುದಕ್ಕೆ ಸಾಕಷ್ಟು ಅವಕಾಶಗಳಿವೆ ಎಂದು ಹೇಳಿದರು. ಅಂಬಿಕಾ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ವಿದ್ಯಾರ್ಥಿಗಳಿಗೆ ಸಂಸ್ಕಾರ ನೀಡುವುದು ವಿದ್ಯಾಸಂಸ್ಥೆಯ ಕರ್ತವ್ಯ. ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಸಂಸ್ಕಾರದೊಂದಿಗೆ ಯೋಗಾಸನವನ್ನೂ ನಿರಂತರವಾಗಿ ನೀಡಲಾಗುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚು ಗಮನ ನೀಡುವುದಕ್ಕೆ ಸಾಧ್ಯವಾಗುತ್ತಿದೆ. ಪಠ್ಯೇತರ ಚಟುವಟಿಕೆಗಳಿಗೂ ಸಾಕಷ್ಟು ಅವಕಾಶ ಕಲ್ಪಿಸಿಕೊಡಲಾಗುತ್ತಿದೆ ಎಂದು ನುಡಿದರು. ಅಂಬಿಕಾ ಸಮೂಹ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟ್ಟೋಜ ಮಾತನಾಡಿ ಹೆತ್ತವರು ಮಕ್ಕಳಿಗೆ ಪ್ರೇರಣೆ ನೀಡಬೇಕು. ಮಕ್ಕಳ ಕಲಿಕೆಯಲ್ಲಿ ಪೋಷಕರ ಪಾತ್ರ ಹಿರಿದಾದದ್ದು. ಮಕ್ಕಳ ಮೇಲೆ ಒತ್ತಡ ಹಾಕುವುದನ್ನು ಬಿಟ್ಟು ಧೈರ್ಯ ತುಂಬುವ ಕಾರ್ಯ ಆಗಬೇಕಿದೆ. ಮಕ್ಕಳು ಸ್ವತಂತ್ರವಾಗಿ ಬೆಳೆಯುವ ಅವಕಾಶ ಕಲ್ಪಿಸಿಕೊಡಬೇಕು ಎಂದು ನುಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಶಂಕರ ನಾರಾಯಣ ಭಟ್, ಹಿರಿಯ ಉಪನ್ಯಾಸಕ ರಾಮಚಂದ್ರ ಭಟ್, ಕ್ಯಾಂಪಸ್ ಮೇಲ್ವಿಚಾರಕ ಭಾಸ್ಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಉಪನ್ಯಾಸಕಿಯರಾದ ಗೀತಾ ಕಾರ್ಯಕ್ರಮ ನಿರೂಪಿಸಿ ವಿನುತಾ ವಂದಿಸಿದರು.