ಎಕ್ಸಲೆಂಟ್ ಮೂಡಬಿದಿರೆ; ಡಾ|| ಶ್ರೀ ಶ್ರೀ ರಾಮಚಂದ್ರ ಗುರೂಜಿಯವರಿಂದ ಆಧ್ಯಾತ್ಮಿಕ ಶಿಬಿರ –ಕಹಳೆ ನ್ಯೂಸ್
“ಸಕಾರಾತ್ಮಕ ಚಿಂತನೆಯುಳ್ಳ ವ್ಯಕ್ತಿ ಎಲ್ಲಾ ಕಾಲದಲ್ಲಿ ದೊರಕುವ ಸಿಹಿಯಾದ ಹಣ್ಣಿಗೆ ಸಮಾನ. ನಮ್ಮ ಎಲ್ಲಾ ಒಳಿತು ಕೆಡುಕುಗಳಿಗೆ ಮನಸ್ಸೇ ಮೂಲ ಕಾರಣ” ಎಂದು ಪ್ರಖ್ಯಾತ ಅಂತಾರಾಷ್ಟ್ರಿಯ ಆಧ್ಯಾತ್ಮಿಕ ಗುರು ಡಾ|| ಶ್ರೀ ಶ್ರೀ ರಾಮಚಂದ್ರ ಗುರೂಜಿಯವರು ಮಾತನಾಡಿದರು.
ಅವರು ಎಕ್ಸಲೆಂಟ್ ಸಮೂಹ ಸಂಸ್ಥೆಯಲ್ಲಿ ಆಧ್ಯಾತ್ಮಿಕ ಮತ್ತು ಮನೋವಿಜ್ಞಾನ ಶಿಬಿರವನ್ನು ನಡೆಸಿಕೊಡುತ್ತಾ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡುವಲ್ಲಿ ಸೂಕ್ತ ಮಾರ್ಗದರ್ಶನ ನೀಡಿದರು. “ಸುಪ್ತ ಮನಸ್ಸಿಗೆ ಗುಣಾತ್ಮಕ ಶಕ್ತಿಯನ್ನು ತುಂಬಿದರೆ ಜೀವನದ ಸವಾಲುಗಳಿಗೆ ಉತ್ತರಿಸಲು ಮನಸ್ಸು ಸದಾ ಜಾಗೃತವಾಗಿರುತ್ತದೆ” ಎಂದು ಈ ಸಂದರ್ಭದಲ್ಲಿ ಗುರೂಜಿಯವರು ಹಲವು ಪ್ರಯೋಗಗಳ ಮೂಲಕ ಶ್ರುತಪಡಿಸಿದರು. ಮತ್ತು ವಿದ್ಯಾರ್ಥಿಗಳ ಪರೀಕ್ಷಾ ಭಯವನ್ನು ನಿವಾರಿಸಿ ಜೀವನದ ಪರೀಕ್ಷೆಗೆ ಮನಸ್ಸನ್ನು ಹದಗೊಳಿಸಿದರು. ವಿದ್ಯಾರ್ಥಿಯ ಸರ್ವತೋಮುಖ ಅಭಿವೃಧ್ಧಿಯಲ್ಲಿ ಶರೀರ, ಮನಸ್ಸು, ಮೆದುಳಿನ ಸಂಯೋಜನೆ ಅತ್ಯಮೂಲ್ಯವಾಗಿದೆ. ಆ ನಿಟ್ಟಿನಲ್ಲಿ ಶರೀರದ ಚಟುವಟಿಕೆಗಳ ಮೂಲಕ ಮೆದುಳು ಹೇಗೆ ಕ್ರಿಯಾಶೀಲವಾಗಬಲ್ಲದು ಎಂದು ಪ್ರಾಯೋಗಿಕ ವಿಧಾನದ ಮೂಲಕ ಮನವರಿಕೆ ಮಾಡಿದರು. ಪ್ರಾಚೀನ ಋಷಿಗಳು ಧಾರ್ಮಿಕ ತಳಹದಿಯಲ್ಲಿ ರಚಿಸಿರುವ ಸ್ತೋತ್ರಾದಿಗಳಲ್ಲಿ ಅಡಕವಾಗಿರುವ ವೈಜ್ಞಾನಿಕ ಅಂಶಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಯಪಡಿಸಿದರು. ಬ್ರಹ್ಮ, ವಿಷ್ಣು, ರುದ್ರ ಸ್ವರೂಪದಲ್ಲಿರುವ ಮೂರು ವಿಧವಾದ ಶರೀರದ ವಿಜ್ಞಾನವನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಪ್ರಚುರ ಪಡಿಸಿದರು. ನಮ್ಮ ಸುತ್ತಮುತ್ತಲೂ ಜರಗುವ ಎಲ್ಲಾ ಘಟನೆಗಳು ಸುಪ್ತ ಮನಸಿನ ಮೆಲೆ ಪ್ರಭಾವ ಬೀರುತ್ತಿರುತ್ತವೆ. ಆ ಕಾರಣದಿಂದ ಮನುಷ್ಯ ಧನಾತ್ಮಕ ಮತ್ತು ಋಣಾತ್ಮಕ ಸಂಗತಿಗಳಿಗೆ ಅನುಗುಣವಾಗಿ ತನ್ನ ಮನಸ್ಸನ್ನು ಸಿದ್ಧಪಡಿಸಿಕೊಂಡು ಪ್ರತಿಕ್ರಿಯಿಸುವುದನ್ನು ಕಲಿಯುತ್ತಾನೆ. ಶಕ್ತಿಯುತವಾದ ಸುಪ್ತ ಮನಸ್ಸಿಗೆ ಸದಾ ಧನಾತ್ಮಕ ಚಿಂತನೆಯನ್ನೆ ಅಭ್ಯಾಸ ಮಾಡಿಸಿದರೆ ವ್ಯಕ್ತಿ ಸಮಾಜದ ಶಕ್ತಿಯಾಗಿ ರೂಪುಗೊಳ್ಳುವನೆಂದು ಪ್ರಾಯೋಗಿಕವಾಗಿ ನಿರೂಪಿಸಿದರು. ಜಗತ್ತಿನ ಶ್ರೇಷ್ಠ ವಿಜ್ಞಾನಿ ಐನ್‍ಸ್ಟೀನ್ ಹೇಳಿರುವ ‘ಕಲ್ಪನಾ ಶಕ್ತಿ ಜ್ಞಾನಕಿಂತಲೂ ಮಿಗಿಲು’ ಎಂಬ ಮಾತನ್ನು ಸ್ಮರಿಸುತ್ತಾ ಜಗತ್ತಿನ ಎಷ್ಟೋ ಸಂಶೋಧನೆಗಳಿಗೆ ಮನುಷ್ಯನ ಕಲ್ಪನಾಶಕ್ತಿಯೇ ಮೂಲಸೆಲೆಯಾಗಿದೆ ಎನ್ನುವುದನ್ನು ಹಲವು ನಿದರ್ಶನಗಳ ಮೂಲಕ ಪ್ರಸ್ತುತಪಡಿಸಿದರು.
ಆಧ್ಯಾತ್ಮವು ಪರಿಶುಧ್ಧ ವಿಜ್ಞಾನ ಎಂಬುವುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡುವ ಸಲುವಾಗಿ ಸುಷುಪ್ತಿ ಅವಸ್ಥೆಯ ಅನುಭವವನ್ನು ಮಾಡಿಸಿ ಋಷಿಗಳ ಅಗಾಧ ಜ್ಞಾನಕ್ಕೆ ಕಾರಣವಾದ ಧ್ಯಾನಾವಸ್ಥೆಯನ್ನು ನೆನಪಿಸಿದರು. ಬಹುಮುಖ್ಯವಾಗಿ ವಿದ್ಯಾರ್ಥಿಗಳಲ್ಲಿರುವ ಪರೀಕ್ಷಾ ಭಯದ ನಿರ್ಮೂಲನೆಗಾಗಿ ಮಾನಸಿಕವಾದ ಸಿದ್ಧತೆಯನ್ನು ಮಾಡಿಕೊಳ್ಳುವ ನಿಟ್ಟಿನಲ್ಲಿ ‘ವಿಜುವಲೈಜೇಶನ್’ ತಂತ್ರವನ್ನು ಬಳಸಿಕೊಳ್ಳುವುದನ್ನು ತಿಳಿಸಿಕೊಟ್ಟರು. ಆಧುನಿಕ ಪ್ರಪಂಚದಲ್ಲಿ ಮನುಷ್ಯ ಒತ್ತಡವನ್ನೇ ಬದುಕಾಗಿಸಿಕೊಂಡಿದ್ದಾನೆ. ವಿದ್ಯಾರ್ಥಿಗಳು ಒತ್ತಡವನ್ನು ಸಮರ್ಥವಾಗಿ ಎದುರಿಸಿ ಪ್ರಭಾವಶಾಲಿಯಾದ ಮನಸ್ಸನ್ನು ಸತ್ಪಥದಲ್ಲಿ ಕೊಂಡೊಯ್ಯಲು ಬೇಕಾದ ಮನೋಭೂಮಿಕೆಯನ್ನು ಸಿದ್ಧಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ರವರು ಗುರೂಜಿಯವರ ಸೂಕ್ತ ಮಾರ್ಗದರ್ಶನದಿಂದ ವಿದ್ಯಾರ್ಥಿಗಳು ಪರೀಕ್ಷೆಯನ್ನು ನಿರ್ಬೀತಿಯಿಂದ ಎದುರಿಸಿ ಉತ್ತಮ ಫಲಿತಾಂಶದೊಂದಿಗೆ ಜೀವನದಲ್ಲಿಯೂ ಯಶಸ್ಸನ್ನು ಗಳಿಸುವಂತಾಗಲಿ ಎಂದು ಶುಭಹಾರೈಸಿದರು. ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್ ಸ್ವಾಗತಿಸಿ, ಪ್ರಾಂಶುಪಾಲರಾದ ಪ್ರದೀಪ್ ಕುಮರಾರ್ ಶೆಟ್ಟಿ ವಂದಿಸಿ, ಭಾಷಾ ವಿಭಾಗ ಮುಖ್ಯಸ್ಥ ವಿಕ್ರಮ್ ನಾಯಕ್ ಮತ್ತು ಉಪನ್ಯಾಸಕ ಪ್ರಕಾಶ್ ಆಚಾರ್ಯ ನಿರೂಪಿಸಿದರು. ಈ ಸಂದರ್ಭದಲ್ಲಿ ಎಕ್ಸಲೆಂಟ್ ಪರಿಸರದಲ್ಲಿ ನೂತನವಾಗಿ ನಿರ್ಮಾಣಗೊಂಡ ಎಕ್ಸಲೆಂಟ್ ಉಪಾಹಾರ ಮಂದಿರವನ್ನು ಗುರೂಜಿಯವರು ತಮ್ಮ ಕರಕಮಲಗಳಿಂದ ಉದ್ಘಾಟಿಸಿದರು. ಶಿಬಿರದ ಸದುಪಯೋಗ ಪಡೆದುಕೊಂಡ ವಿದ್ಯಾರ್ಥಿಗಳಲ್ಲಿ ಒಬ್ಬಳಾದ ಯಶಸ್ವಿ ನಂದ್ಗಾವೆ ಶಿಬಿರದ ಕುರಿತು ತನ್ನ ಅಭಿಪ್ರಾಯವನ್ನು ಹೀಗೆ ತಿಳಿಸಿದ್ದಾಳೆ. “ಗುರೂಜಿಯವರ ಶಿಬಿರದಲ್ಲಿ ನಮ್ಮ ಕಲ್ಪನಾ ಶಕ್ತಿಯನ್ನು ಬಳಸಿಕೊಂಡು ಸುಪ್ತ ಮನಸನ್ನು ಹೇಗೆ ಜಾಗೃತಗೊಳಿಸಬೇಕೆಂದು ಅತ್ಯಂತ ಪರಿಣಾಮಕಾರಿಯಾಗಿ ತಿಳಿಸಿಕೊಟ್ಟಿರುತ್ತಾರೆ. ಇದರಿಂದ ಪರೀಕ್ಷೆಯ ಬಗೆಗಿರುವ ಭಯ, ನನ್ನಲ್ಲಿರುವ ಆತ್ಮವಿಶ್ವಾಸದ ಕೊರತೆಯನ್ನು ನೀಗಿಸುವಲ್ಲಿ ಸಹಕಾರಿಯಾಯಿತು. ಮತ್ತೊಬ್ಬ ವಿದ್ಯಾರ್ಥಿನಿ ಪ್ರೇಕ್ಷಾ ಅರವಿಂದ್ ಹೇಳುವಂತೆ ಇದೊಂದು ಅದ್ಭುತವಾದ ಅನುಭವ. ಪರೀಕ್ಷಾ ಭಯ, ಜೀವನದ ಚಿಂತೆ, ಒತ್ತಡಗಳ ನಿವಾರಣೆ, ಆತ್ಮವಿಶ್ವಾಸದ ವೃದ್ಧಿ ಗುರೂಜಿಯವರ ಮಾತುಗಳಿಂದ ಸಾಧ್ಯವಾಯಿತು. ಎಂದು ವಿದ್ಯಾರ್ಥಿಗಳು ಅಭಿಪ್ರಾಯ ತಿಳಿಸಿದರು.