Monday, January 20, 2025
ಪುತ್ತೂರು

ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಕು. ವಿದ್ಯಾ ಎ. ಎಸ್ ರವರಿಗೆ ಸನ್ಮಾನ ಸಮಾರಂಭ, ಸಾಧನೆಗೆ ಛಲ ಮತ್ತು ಪರಿಶ್ರಮ ಅಗತ್ಯ; ವಿಶ್ವೇಶ್ವರ ಭಟ್ ಬಂಗಾರಡ್ಕ-ಕಹಳೆ ನ್ಯೂಸ್

ಪುತ್ತೂರು : ಯಾವುದೇ ವ್ಯಕ್ತಿಯು ಛಲ ಮತ್ತು ಪರಿಶ್ರಮದಿಂದ ಕೆಲಸ ಮಾಡಿದರೆ ಸಾಧನೆಯನ್ನು ಮಾಡಬಹುದು. ಇದಕ್ಕೆ ಕು. ವಿದ್ಯಾ ಎ. ಎಸ್. ಅವರೇ ಉತ್ತಮ ಉದಾಹರಣೆ. ಬಡತನದ ಹಿನ್ನಲೆಯಿಂದ ಬಂದಿರುವ ಅವರು ಇಂದು ತನ್ನ ಪರಿಶ್ರಮದಿಂದ ನ್ಯಾಯಾಧೀಶರಾಗಿ ಆಯ್ಕೆಯಾಗಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ ಎಂದು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಭಟ್ ಬಂಗಾರಡ್ಕ ಅವರು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು, ನ್ಯಾಯಾಧೀಶರಾಗಿ ಆಯ್ಕೆಯಾದ ವಿವೇಕಾನಂದ ಕಾನೂನು ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಕು. ವಿದ್ಯಾ ಎ. ಎಸ್. ಅವರಿಗೆ  ಫೆಬ್ರವರಿ 27 ರಂದು ಕಾನೂನು ಕಾಲೇಜಿನ ಸಭಾಂಗಣದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪುತ್ತೂರಿನ ಸಮೀಪದ ಗ್ರಾಮೀಣ ಪ್ರದೇಶದಿಂದ ಬಂದಿರುವಂತಹ ಕು. ವಿದ್ಯಾ ಎ. ಎಸ್ ಅವರು ಇಂದು ನ್ಯಾಯಾಧೀಶರಾಗಿ ಆಯ್ಕೆಯಾಗಿ, ನಮಗೆಲ್ಲರಿಗೂ ಪ್ರೇರಣೆಯಾಗಿದ್ದಾರೆ. ಇದು ನಮಗೆ ನಮಗೆ ಮಾತ್ರವಲ್ಲದೇ ಇಡೀ ದೇಶಕ್ಕೆ ಹೆಮ್ಮೆಯ ವಿಚಾರ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪುತ್ತೂರು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಮನೋಹರ್ ಕೆ. ವಿ. ಮಾತನಾಡಿ, ವಿದ್ಯಾ ಅವರ ಸಾಧನೆಯು ನಮಗೆಲ್ಲರಿಗೂ ಸ್ಫೂರ್ತಿಯಾಗಿದ್ದು, ನಾವು ಅವರ ಹಾದಿಯಲ್ಲಿ ನಡೆಯುವಂತಾಗಬೇಕು. ಸತತ ಪರಿಶ್ರಮದಿಂದ ಹಲವಾರು ವ್ಯಕ್ತಿಗಳು ಜೀವನದಲ್ಲಿ ಉನ್ನತಿ ಹೊಂದಿದ್ದಾರೆ. ಇದುವೇ ಕಾಲೇಜಿನ ಹಲವಾರು ವಿದ್ಯಾರ್ಥಿಗಳು ಇಂದು ನ್ಯಾಯಾಧೀಶರಾಗಿ ಆಯ್ಕೆಯಾಗಿರುವುದು ಇದಕ್ಕೆ ಸಾಕ್ಷಿ. ಹನುಮಂತನು ಸೀತೆಯನ್ನು ಹುಡುಕಲು ಪಟ್ಟಂತಹ ಛಲ, ಪರಿಶ್ರಮ ಹಾಗೂ ಗುರಿ ನಾವೆಲ್ಲರೂ ಹೊಂದಿರಬೇಕು. ಆಗ ಮಾತ್ರ ಯಶಸ್ಸನ್ನು ಸಾಧಿಸಲು ಸಾಧ್ಯ. ಇದರ ಜೊತೆಗೆ ವಿವೇಕಾನಂದ ಕಾನೂನು ಮಹಾವಿದ್ಯಾಲಯವು ಇಂತಹ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಒಳ್ಳೆಯ ವಿಚಾರ ಎಂದರು. ಕಾನೂನು ಕಾಲೇಜಿನ ಹಿರಿಯ ಉಪನ್ಯಾಸಕರು ಮತ್ತು ವಕೀಲರಾದ ಶ್ರೀ ಸುಧೀರ್ ತೋಳ್ಪಾಡಿ ಮಾತನಾಡಿ, ದೃಢ ಮನೋಭಾವ ಹೊಂದಿದ್ದರೆ ವಿಧಿ ಕೂಡತಲೆ ಬಾಗುತ್ತದೆ ಎಂಬುದು ಕು. ವಿದ್ಯಾ ಎ. ಎಸ್. ಅವರಿಗೆ ಅನ್ವಯಿಸುತ್ತದೆ. ವಿದ್ಯಾ ಅವರು ಹಲವು ಬಾರಿ ಪ್ರಯತ್ನಿಸಿ ಸೋತಾಗಲೂ ದೃತಿಗೆಡಲಿಲ್ಲ. ಮತ್ತೆ ಮತ್ತೆ ಪ್ರಯತ್ನಿಸಿ ಯಶಸ್ಸನ್ನು ಸಾಧಿಸಿದ್ದಾರೆ. ಇನ್ನೂ ಮುಂದಿನ ಜೀವನದಲ್ಲಿ ಅವರು ಇನ್ನಷ್ಟು ಸವಾಲುಗಳನ್ನು ಎದುರಿಸಬಹುದು. ಆ ಸವಾಲುಗಳನ್ನು ಎದುರಿಸುವ ಧೈರ್ಯವನ್ನು ಅವರು ತಂದುಕೊಳ್ಳಬೇಕು. ಅವರು ಮುಂದಿನ ಜೀವನದಲ್ಲಿ ಯಶಸ್ಸು ಸಿಗಲಿ ಎಂದು ಹಾರೈಸಿದರು. ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ಕು. ವಿದ್ಯಾ ಎ. ಎಸ್. ಮಾತನಾಡಿ, ಇಂದಿನ ವಿದ್ಯಾರ್ಥಿಗಳಿಗೆ ನ್ಯಾಯಂಗದಲ್ಲಿ ಉನ್ನತಿಯನ್ನು ಸಾಧಿಸಲು ಹಲವಾರು ಅವಕಾಶಗಳನ್ನು ವಿವೇಕಾನಂದ ಕಾನೂನು ಮಹಾವಿದ್ಯಾಲಯವು ಒದಗಿಸಿ ಕೊಡುತ್ತಿದೆ. ನಮ್ಮ ವಿದ್ಯಾಭ್ಯಾಸದ ಸಮಯದಲ್ಲಿ ಇಷ್ಟೊಂದು ಅವಕಾಶಗಳು ಇರಲಿಲ್ಲ. ಆದ್ದರಿಂದ ಈಗಿನ ವಿದ್ಯಾರ್ಥಿಗಳು ಅದನ್ನು ಬಳಸಿಕೊಳ್ಳಬೇಕು. ಹಾಗೆಯೇ ಇಂದಿನ ವಿದ್ಯಾರ್ಥಿಗಳು ಕೂಡ ಕಲಿಯುವಿಕೆಯಲ್ಲಿ ಹೆಚ್ಚು ಆಸಕ್ತರಾಗಿದ್ದು, ಅದನ್ನು ಹಾಗೆಯೇ ಮುಂದುವರಿಸಿ ಎಂದು ಹೇಳಿದರು. ಕಾಲೇಜಿನ ಸಂಚಾಲಕರಾದ ವಿಜಯನಾರಾಯಣ ಕೆ.ಎಂ ಪ್ರಾಸ್ತಾವಿಕ ಮಾತುಗಳನ್ನಾಡಿ, ಕು. ವಿದ್ಯಾ ಎ. ಎಸ್ ಅವರು ನಮಗೆ ಹಲವಾರು ವಿಚಾರಗಳಲ್ಲಿ ಪ್ರೇರಣಾದಾಯಿಯಾಗಿದ್ದಾರೆ. ಬಡತನದ ಹಿನ್ನಲೆಯಿಂದ ಬಂದು, ಇಂದು ನ್ಯಾಯಾಧೀಶರಾಗಿ ಆಯ್ಕೆಯಾಗುವ ಮೂಲಕ ನಮಗೆ ಮಾದರಿಯಾಗಿದ್ದಾರೆ. ಛಲವಿದ್ದರೆ ಏನನ್ನೂ ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಅವರು ಸಾಕ್ಷಿ. ವಿದ್ಯಾರ್ಥಿಗಳೆಲ್ಲರೂ ಅವರ ಹಾದಿಯಲ್ಲಿ ನಡೆಯುವಂತಾಗಬೇಕು ಎಂದರು. ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮತ್ತು ವಕೀಲರಾದ ದೀಪಕ್ ಬೊಳ್ವಾರ್ ಅವರು ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಅಕ್ಷತಾ ಎ. ಪಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕರಾದ ಶ್ರೀಮತಿ ಸಂಗೀತಾ ಎಸ್. ಎಂ ಸ್ವಾಗತಿಸಿ, ಡಾ.ರೇಖಾ ಕೆ. ವಂದಿಸಿದರು. ಉಪನ್ಯಾಸಕರಾದ ಕುಮಾರ್ ಶೇಣಿ ನಿರೂಪಿಸಿದರು.