Sunday, January 19, 2025
ದಕ್ಷಿಣ ಕನ್ನಡಯಕ್ಷಗಾನ / ಕಲೆ

” ನಾಟ್ಯಹಂಸ ಸುಮಂಗಲಾ ” – ನೃತ್ಯ ವಿದುಷಿ ಬಿ. ಸುಮಂಗಲಾ ರತ್ನಾಕರ್ ರಾವ್ ಬಹುಮುಖ ಪ್ರತಿಭೆ – ಕಹಳೆ ನ್ಯೂಸ್

ಯಕ್ಷಗಾನ, ತಾಳಮದ್ದಳೆ, ಸಂಗೀತ, ಭರತನಾಟ್ಯ ಹೀಗೆ ಎಲ್ಲಾ ರಂಗದಲ್ಲಿ ಗುರುತಿಸಲ್ಪಡುವ ಕಲಾವಿದರು ಬಹು ವಿರಳ, ಆದರೆ ಅಂತಹ ಕಲಾವಿದರ ಸಾಲಿನಲ್ಲಿ ಕರಾವಳಿಯಲ್ಲಿ ಕೇಳಿ ಬರುವ ಕೆಲವೇ ಕೆಲವು ಹೆಸರುಗಳಲ್ಲಿ ನೃತ್ಯ ವಿದುಷಿ ಶ್ರೀಮತಿ ಬಿ. ಸುಮಂಗಲಾ ರತ್ನಾಕರ ರಾವ್ ಪ್ರಮುಖರು.

ಮಂಗಳೂರಿನ ಉರ್ವದಲ್ಲಿ ಪತಿ ಬಿ. ರತ್ನಾಕರ ರಾವ್ ಅವರ ಜೊತೆ ನೆಲೆಸಿದ್ದು, ಒಬ್ಬ ಅಪ್ರತಿಮ ಕಲಾವಿದೆಯಾಗಿ ಕರಾವಳಿ ಕರ್ನಾಟಕದಲ್ಲಿ ಮನೆ ಮಾತಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಂದೆ ಪಿ. ಶ್ರೀರಾಮ ರಾವ್ , ಸುರತ್ಕಲ್ ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ತಾಯಿ ಶ್ರೀಮತಿ ಹೀರಾ ಎಚ್., ಸುರತ್ಕಲ್ ನ ಎನ್.ಐ.ಟಿ.ಕೆ.ಯಲ್ಲಿ ನಿವೃತ್ತ ಹಿರಿಯ ಅಧೀಕ್ಷಕರು ಹಾಗೂ ಗಂಡ ಬಿ. ರತ್ನಾಕರ ರಾವ್,
ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರು ಮತ್ತು
ನಂದಾ ಇಲೆಕ್ಟ್ರಿಕಲ್ಸ್ ಮಾಲಕರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇವರು 03 08 1976 ಜನಿಸಿದ್ದು, ಬಿ.ಬಿ.ಎಂ., ಹಾಗೂ ಎಂ.ಡಾನ್ಸ್ (ಭರತನಾಟ್ಯ ಸ್ನಾತಕೋತ್ತರ ಪದವೀಧರೆ) ಯಾಗಿದ್ದು, ಭರತನಾಟ್ಯದಲ್ಲಿ ವಿದ್ವತ್ ಪದವಿ (ದೂರದರ್ಶನ ಕಲಾವಿದೆ) ಯೂ ಆಗಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಜೂನಿಯರ್ ವಿಭಾಗದ ಶಿಕ್ಷಣ (ದ.ಕ. ಹಾಗೂ ಉಡುಪಿ ಜಿಲ್ಲೆಗಳಿಗೆ ತೃತೀಯ ಸ್ಥಾನ) ಹಾಗೂ ಯಕ್ಷಗಾನ, ನಾಟ್ಯ ಶಿಕ್ಷಣ ತರಬೇತಿ ಪಡೆದಿರುತ್ತಾರೆ. ಯಕ್ಷಗಾನದ ಹಿಮ್ಮೇಳ ಶಿಕ್ಷಣ (ಚಂಡೆ, ಮದ್ದಳೆ) ಪ್ರಾಥಮಿಕ ತರಬೇತಿ ಪಡೆದಿರುತ್ತಾರೆ. ಪ್ರಾಥಮಿಕ ಕೂಚುಪುಡಿ ನೃತ್ಯ ಶಿಕ್ಷಣ ತರಬೇತಿ ಪಡೆದಿದ್ದಾರೆ.

ಕಳೆದ 24 ವರ್ಷಗಳಿಂದ ಭರತನಾಟ್ಯ ಶಿಕ್ಷಕಿ ,ನೃತ್ಯ ನಿರ್ದೇಶಕಿಯಾಗಿ, ನಾಟ್ಯಾರಾಧನಾ ಕಲಾ ಕೇಂದ್ರ (ರಿ), ಉರ್ವ, ಮಂಗಳೂರು ಸಂಸ್ಥೆಯ ಸ್ಥಾಪಕಾಧ್ಯಕ್ಷರೂ ಆಗಿ , ಪ್ರಧಾನ ಟ್ರಷ್ಠಿ ಹಾಗೂ ನೃತ್ಯ ಸಂಯೋಜಕಿಯೂ ಆಗಿದ್ದಾರೆ. ಯಕ್ಷಾರಾಧನಾ ಕಲಾಕೇಂದ್ರ (ರಿ), ಉರ್ವ, ಮಂಗಳೂರು ಇದರ ಸ್ಥಾಪಕಾಧ್ಯಕ್ಷರೂ ಹಾಗೂ ಯಕ್ಷ ಶಿಕ್ಷಕಿಯೂ ಆಗಿದ್ದಾರೆ.

ಕಳೆದ 20 ವರ್ಷಗಳಿಂದ ಸಂತ ಎಲೋಶಿಯಸ್ ಆಂಗ್ಲ ಮಾಧ್ಯಮ ಫ್ರೌಢ ಶಾಲೆ, ಉರ್ವದಲ್ಲಿ (ಅರೆಕಾಲಿಕ) ನೃತ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರವೃತ್ತಿಯಲ್ಲಿ ಯಕ್ಷಗಾನ ಕಲಾವಿದೆ, ತಾಳಮದ್ದಲೆ ಕಲಾವಿದೆ, ಕಾರ್ಯಕ್ರಮ ನಿರೂಪಕಿ, ಹವ್ಯಾಸಿ ಲೇಖಕಿ, ನೃತ್ಯ ಸಾಹಿತಿ, ಸಂಪನ್ಮೂಲ ವ್ಯಕ್ತಿ , ನಟುವನ್ನಾರ್, ಕಾರ್ಯಕ್ರಮ ಸಂಘಟಕಿ ಹೀಗೆ ಸುಮಂಗಲ ಅವರು ಕೈ ಆಡಿಸದ ಕಲೆಯಿಲ್ಲ..!

ಸುಮಂಗಲ ಅವರಿಗೆ ಭರತನಾಟ್ಯದ ಗುರುಗಳಾಗಿ ದಿ. ವಿದ್ವಾನ್ ನಾರಾಯಣ ಜೆಪ್ಪು, ಕಲಾಶ್ರೀ ವಿದ್ವಾನ್ ಚಂದ್ರಶೇಖರ ನಾವಡ, ಸುರತ್ಕಲ್ , ಕಲಾಶ್ರೀ ವಿದುಷಿ ಶ್ರೀಮತಿ ಶಾರದಾಮಣಿ ಶೇಖರ್, ಮಂಗಳೂರು, ಶಾಂತಲಾ ಪ್ರಶಸ್ತಿ ಪುರಸ್ಕೃತ ನಾಟ್ಯಾಚಾರ್ಯ ಗುರು ದಿ. ಶ್ರೀ ಕೆ. ಮುರಳೀಧರ ರಾವ್, ಮೈಸೂರು ಒಲಿದು ಬಂದದ್ದು, ಇಂದು ಅವರನ್ನು ಈ ಮಟ್ಟಕ್ಕೆ ಏರುವಂತೆ ಮಾಡಿದೆ. ಮೈಸೂರಿನ ಡಾ.ಶೀಲಾ ಶ್ರೀಧರ್ ಹಾಗೂ ಡಾ.ಕುಮಾರ್ ಕರಿಯಪ್ಪ ಅವರಿಂದ ಸ್ನಾತಕೋತ್ತರ ಪದವಿ ಸಂದರ್ಭದಲ್ಲಿ ಮಾರ್ಗದರ್ಶನಯೂ ದೊರೆತಿತ್ತು.

ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ವಿದುಷಿ ಶ್ರೀಮತಿ ಲಲಿತಾ ರಮಾನಂದ ರಾವ್ (ಆಕಾಶವಾಣಿಯ ಬಿ.ಹೈ ಸಂಗೀತ ಕಲಾವಿದೆ.) ಅವರ ಶಿಷ್ಯೆಯಾಗಿ ಸುಂಮಗಲ ಅವರು ಸಾಧಿಸಿದ್ದು ಅಪಾರ.

ಕೂಚುಪುಡಿಯಲ್ಲಿ ಮಂಗಳೂರಿನ ವಿದುಷಿ ಶ್ರೀಮತಿ ಶಾರದಾಮಣಿ ಶೇಖರ್ ಯವರಿಂದ ಕರಗತ ಮಾಡಿಕೊಂಡಿದ್ದಾರೆ.

ಯಕ್ಷಗಾನ ಹಿಮ್ಮೇಳ – ಚಂಡೆ, ಮದ್ದಳೆಯ ಶಿಕ್ಷಣವನ್ನು ಯಕ್ಷಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ರಿಂದ ಪಡೆದು, ತೆಂಕುತಿಟ್ಟುದ ಯಕ್ಷಗಾನ ನಾಟ್ಯ ಹಾಗೂ ಮಾರ್ಗದರ್ಶನವನ್ನು ರಾಕೇಶ್ ರೈ ಅಡ್ಕ,ಸೂರಿಕುಮೇರು ಗೋವಿಂದ ಭಟ್ ದಿವಾಣ ಶಿವಶಂಕರ ಭಟ್ ರಿಂದ ಪಡೆದು, ತಾಳಮದ್ದಳೆಯ ರಂಗದಲ್ಲಿ ಹರೀಶ ಬಳಂತಿಮೊಗರು ಅವರು ಗುರುಗಳಾಗಿ ಒದಗಿಬಂದು ಸುಮಂಗಲ ರತ್ನಾಕರ್ ಎಂಬ ಒಬ್ಬ ಅಸಮಾನ್ಯ ಪ್ರತಿಭೆಯಾಗಿ ನಿರ್ಮಾಣವಾಗುವಲ್ಲಿ ಸಾಧ್ಯವಾಗಿದೆ.

ಸಾಧನೆಗಳಾಗಿ ಮಾರ್ಪಟ್ಟ ಕಲಾಯಾನ :

ಭರತನಾಟ್ಯ

• ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ನಡೆಸಿದ ಎಂ.ಡಾನ್ಸ್ (ಭರತನಾಟ್ಯ ಸ್ನಾತಕೋತ್ತರ ಪದವಿ)ಯನ್ನು ಮೈಸೂರು ವಿಶ್ವವಿದ್ಯಾಲಯ ಮುಖಾಂತರ ಮೈಸೂರಿನ ಎಸ್.ಎ.ಎಲ್.ಅಕಾಡೆಮಿಯಲ್ಲಿ ಪಡೆದು ಪ್ರಥಮ ಸ್ಥಾನದೊಂದಿಗೆ ತೇರ್ಗಡೆ ಹೊಂದಿರುತ್ತಾರೆ.

• 750ಕ್ಕೂ ಮಿಕ್ಕಿ ಅಂತರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಮಟ್ಟದ ವಿವಿಧ ವೇದಿಕೆಗಳಲ್ಲಿ, ಉತ್ಸವಗಳಲ್ಲಿ ಸೇರಿದಂತೆ ಭರತನಾಟ್ಯ ಕಾರ್ಯಕ್ರಮಗಳನ್ನು ನೀಡಿರುತ್ತಾರೆ.

• ತುಳು ಕೂಟ ,ಕುವೈಟ್ ಇವರ ಆಹ್ವಾನದ ಮೇರೆಗೆ ಕುವೈಟ್‍ಗೆ ತೆರಳಿ* ತುಳುಕೂಟದ ಸದಸ್ಯರಿಗೆ ಒಂದು ವಾರದ ನೃತ್ಯ ತರಬೇತಿಯನ್ನು ಕೊಟ್ಟು “ಭಾರತ ಜಾನಪದ ವೈಭವ” ಮತ್ತು “ಮಾಯಾವಿಲಾಸ” ಎಂಬ ನೃತ್ಯ ಕಾರ್ಯಕ್ರಮಗಳನ್ನು ನೀಡಿರುತ್ತಾರೆ.

• ಆಗೋಸ್ಟ್ 27, 2011 ರಂದು ತನಗೆ ಕಲಿಸಿರುವ ಎಲ್ಲಾ ಕ್ಷೇತ್ರದ ಎಲ್ಲಾ ಗುರುಗಳಿಗೂ “ಗುರುವಂದನೆ”ಯನ್ನು ಸಲ್ಲಿಸಿ ನಿರಂತರ 2 ಗಂಟೆಗಳ ಭರತನಾಟ್ಯ ಕಾರ್ಯಕ್ರಮವನ್ನು ನೀಡಿರುತ್ತಾರೆ.

• ದೂರದರ್ಶನ ಕೇಂದ್ರ, ಬೆಂಗಳೂರು ಇಲ್ಲಿನ ಶ್ರೇಣೀಕೃತ ಭರತನಾಟ್ಯ ಕಲಾವಿದೆ (ಬಿ)

• ಕರ್ನಾಟಕ ಫ್ರೌಢಶಿಕ್ಷಣ ಪರೀಕ್ಷಾ ಮಂಡಳಿ, ಬೆಂಗಳೂರು ಇವರು ನಡೆಸುವ ವಿದ್ವತ್ವರೆಗಿನ ನೃತ್ಯ ಪರೀಕ್ಷೆಗಳಿಗೆ ಪರೀಕ್ಷಕರಾಗಿ ಮೌಲ್ಯಮಾಪಕರಾಗಿ ಹಾಗೂ ಪ್ರಶ್ನೆ ಪತ್ರಿಕೆ ತಯಾರಕರಾಗಿಯೂ ನಿಯುಕ್ತಿಗೊಂಡಿದ್ದಾರೆ.

• ಬೆಂಗಳೂರು ದೂರದರ್ಶನದಲ್ಲಿ ಸಂಸ್ಥೆಯ ವಿದ್ಯಾರ್ಥಿನಿಯರೊಂದಿಗೆ 1 ಗಂಟೆಯ ಅವಧಿಯ ವೈವಿಧ್ಯಮಯ ನೃತ್ಯ ಕಾರ್ಯಕ್ರಮವನ್ನು (ಶಾಸ್ತ್ರೀಯ ಹಾಗೂ ಜಾನಪದ) ನೀಡಿದ್ದು, “ಯುವರಂಜನಿ” ಕಾರ್ಯಕ್ರಮದಲ್ಲಿ ಅದು ಹಲವಾರು ಪುನರ್ ಪ್ರಸಾರಗಳನ್ನು ಕಂಡಿದೆ.

• ಉತ್ತರ ಪ್ರದೇಶದ ಕಾನ್‍ಪುರದಲ್ಲಿ ಸಂಸ್ಕಾರ ಭಾರತಿ (ರಿ) ಇವರು ರಾಷ್ಟ್ರ ಮಟ್ಟದಲ್ಲಿ ಸಂಯೋಜಿಸಿದ ನಮನ್ 1857- ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಹೋರಾಟದ 150ನೇ ವರ್ಷಾಚರಣೆ ಪ್ರಯುಕ್ತ ನಡೆಸಿದ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದಿಂದ ನೃತ್ಯ ಕಾರ್ಯಕ್ರಮ ನೀಡಿ ಜನಮೆಚ್ಚುಗೆ ಪಡೆದಿದ್ದಾರೆ (2007).

• ವಿದ್ಯಾರ್ಥಿಗಳಿಗಾಗಿ ವಿವಿಧ ಹಾಡುಗಳಿಗೆ, ನೃತ್ಯ ಬಂಧಗಳಿಗೆ ಸಂಯೋಜಿಸಿದ ವೈಶಿಷ್ಟ್ಯ ಪೂರ್ಣ ನೃತ್ಯ ಬೆಂಗಳೂರಿನಲ್ಲಿ ನಡೆದ ಭಗತ್‍ಸಿಂಗ್ ಜನ್ಮ ಶತಮಾನೋತ್ಸವ,
ಎನ್.ಐ.ಟಿ.ಕೆ ಯಲ್ಲಿ ನಡೆದ ಅಂತಾರಾಷ್ಟ್ರೀಯ ಕಾರ್ಯಾಗಾರದ ಸಂದರ್ಭ, ಫಿಶರೀಸ್ ಕಾಲೇಜಿನ ಅಂತರಾಷ್ಟ್ರೀಯ ಕಾರ್ಯಾಗಾರ ಸಂದರ್ಭ, ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್, ಆಳ್ವಾಸ್ ನುಡಿಸಿರಿ, ಮಂಗಳೂರಿನ ಕರಾವಳಿ ಉತ್ಸವ, ಸನಾತನ ನೃತ್ಯೋತ್ಸವ, ಮಕ್ಕಳ ಸಾಹಿತ್ಯ ಸಮ್ಮೇಳನ, ನೂಪುರೋತ್ಸವ ಸೇರಿದಂತೆ 400ಕ್ಕೂ ಮಿಕ್ಕಿ ನೃತ್ಯ ವೈವಿಧ್ಯ ಕಾರ್ಯಕ್ರಮಗಳು ಜನಮನ ರಂಜಿಸಿದೆ. ಶ್ಲಾಘನೆಯನ್ನು ಪಡೆದಿದೆ.

• ತನ್ನ ತಾಯಿಯೊಂದಿಗೆ ರಚಿಸಿ ನಿರ್ದೇಶಿಸಿದ ಶ್ರೀ ಗಣೇಶ ಜನನ, ಭಸ್ಮಾಸುರ ಮೋಹಿನಿ ನೃತ್ಯ ರೂಪಕಗಳು, ಸಾಹಿತ್ಯ ಸಂಗ್ರಹಿಸಿ ಸಂಯೋಜಿಸಿದ ಶ್ರೀ ಕೃಷ್ಣ ಲೀಲೆ, ಕಂಸ ವಧೆ, ಶ್ರೀ ಕೃಷ್ಣ ಪಾರಿಜಾತ, ಶಾಕುಂತಲಾ, ದಶಾವತಾರ, ರಾಮಾಯಣ ರೂಪಕಗಳು ಪ್ರಶಂಸೆಗೆ ಪಾತ್ರವಾಗಿದೆ.

• “ಜನನಿ” (ಜನ್ಮದಾತೆ- ಭೂಮಾತೆ – ಗೋಮಾತೆ) ಯರ ಕುರಿತಾದ ಏಕವ್ಯಕ್ತಿ ನೃತ್ಯವನ್ನು ರಚಿಸಿ, ಸಂಯೋಜಿಸಿ ಪ್ರದರ್ಶಿಸಿ ಅಪಾರ ಮೆಚ್ಚುಗೆ ಗಳಿಸಿದೆ.

• “ಮಾಯಾವಿಲಾಸ” ಎಂಬ ನೃತ್ಯ ರೂಪಕದ ರಚನೆ ,ಸಂಯೋಜನೆ ನಿರ್ದೇಶನದೊಂದಿಗೆ ಇವರ ಸೀತೆಯ ಭಾವಭಿನಯ ಮುಕ್ತಕಂಠದ ಶ್ಲಾಘನೆ ಪಡೆದಿದೆ.

•ಸ್ವತಃ ಹಲವು ಕ್ಲಿಷ್ಟಕರ ತಾಳಗಳಲ್ಲಿ ಭರತನಾಟ್ಯದ ವಿವಿಧ ನೃತ್ಯ ಬಂಧಗಳನ್ನು ರಚಿಸಿ ನೃತ್ಯ ಸಂಯೋಜನೆ.

•ಮಂಗಳೂರಿನಲ್ಲಿ ನೃತ್ಯಭಾರತಿ ಸಂಸ್ಥೆಯವರು ಆಯೋಜಿಸಿದ್ದ ಶಾಸ್ತ್ರೀಯ ನೃತ್ಯ ಕುರಿತಾದ ರಾಜ್ಯ ಮಟ್ಟದ ವಿಚಾರ ಸಂಕಿರಣ “ನೃತ್ಯೋತ್ಕ್ರಮಣ”ದಲ್ಲಿ ಸಂಚಾರಿ ಭಾವ ಪ್ರಯೋಗ ಕುರಿತಂತೆ ಪ್ರಬಂಧ ಮಂಡನೆ ಮಾಡಲಾಗಿದೆ.

• ಕರಾವಳಿ ನೃತ್ಯ ಕಲಾ ಪರಿಷತ್ತಿನಲ್ಲಿ “ಪದಂ” ಕುರಿತು ನೃತ್ಯ ಪ್ರಾತ್ಯಕ್ಷಿಕೆ ನೀಡಿದೆ.

• ಶಾಲೆಗಳ ಬೇಸಗೆ ಶಿಬಿರದಲ್ಲಿ ನೃತ್ಯ ಪ್ರಾತ್ಯಕ್ಷಿಕೆ ನೀಡಿದೆ.ಸಂಪನ್ಮೂಲ ಕಲಾವಿದೆಯಾಗಿ ಭಾಗವಹಿಸಿದೆ.

•ಕರ್ನಾಟಕ ಫ್ರೌಢಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸಿದ ಭರತನಾಟ್ಯ ಪರೀಕ್ಷೆಗಳಲ್ಲಿ ಇದುವರೆಗೂ ನಾಟ್ಯಾರಾಧನಾ ಕಲಾ ಕೇಂದ್ರದಿಂದ ಹಾಜರಾದ ವಿದ್ಯಾರ್ಥಿಗಳು 100% ತೇರ್ಗಡೆಯ ಫಲಿತಾಂಶವನ್ನು ಆರಂಭದಿಂದ ಇದು ತನಕ‌ ನೀಡಿ ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದು ಉಲ್ಲೇಖನೀಯ.ಅಲ್ಲದೆ, ಪ್ರತಿವರ್ಷವೂ ಕೇಂದ್ರದ ಫಲಿತಾಂಶದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು Top 5ಯ ಪಟ್ಟಿಯ ಯಾವುದಾದರೊಂದು ಸ್ಥಾನದಲ್ಲಿರುವುದು ಉಲ್ಲೇಖನೀಯ.

ಇದು ತನಕ 224 ವಿದ್ಯಾರ್ಥಿಗಳು ಜೂನಿಯರ್ ವಿಭಾಗದಲ್ಲಿ ತೇರ್ಗಡೆ ಹೊಂದಿದ್ದು, ಅದರಲ್ಲೂ 208 ಮಂದಿ ವಿದ್ಯಾರ್ಥಿಗಳು ಉನ್ನತ ದರ್ಜೆಯಲ್ಲೂ, ಉಳಿದ 16 ಮಂದಿ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಅನೇಕ‌ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದ ಪ್ರಥಮ ಯಾ ದ್ವಿತೀಯ ಸ್ಥಾನಿಗಳಾಗಿ ಉತ್ತೀರ್ಣರಾಗಿರುವುದು ಗಮನಾರ್ಹ.

• ಇದುವರೆಗೆ ಸಂಸ್ಥೆಯ 60 ವಿದ್ಯಾರ್ಥಿಗಳು ಸೀನಿಯರ್ ವಿಭಾಗದ ನೃತ್ಯ ಶಿಕ್ಷಣ ಪೂರೈಸಿದ್ದು, ಅವರಲ್ಲಿ 52 ಮಂದಿ ವಿದ್ಯಾರ್ಥಿಗಳು ಉನ್ನತ ದರ್ಜೆಯಲ್ಲಿ, 7ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿರುವುದು ಗಮನಾರ್ಹ.

• 2014 ವಿದ್ವತ್ ಪೂರ್ವ ಪರೀಕ್ಷೆಯನ್ನು ಉನ್ನತ ದರ್ಜೆಯೊಂದಿಗೆ ಪೂರೈಸಿರುತ್ತಾರೆ. ಕು.ಅನು 93%ದೊಂದಿಗೆ ದ.ಕ,ಉಡುಪಿ ಉಭಯ ಜಿಲ್ಲೆಗಳಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ. ಅಂತೆಯೇ, 2019 ರಲ್ಲಿ ಮಲ್ಲಿಕಾ ಎಂ. ದ್ವಿತೀಯ ಸ್ಥಾನಿಯಾಗಿ ತೇರ್ಗಡೆ ಹೊಂದಿ ಇವರ ಗುರುತ್ವದ ಕೀರ್ತಿ ಹೆಚ್ಚಿಸಿದ್ದಾರೆ.

• ಭರತನಾಟ್ಯ ಕಾರ್ಯಕ್ರಮಗಳಿಗೆ ನಟುವಾಂಗ ಕಲಾವಿದೆಯಾಗಿ ಭಾಗವಹಿಸುವಿಕೆ.

•6 ವಿದ್ಯಾರ್ಥಿನಿಯರು ವಿದ್ವತ್ ಹಂತದ ಶಿಕ್ಷಣ ಪೂರೈಸಿರುತ್ತಾರೆ. 2015ರಲ್ಲಿ ನಡೆದ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ಅನು 89% ಅಂಕದೊಂದಿಗೆ ಉಡುಪಿ, ದ.ಕ., ಕೊಡಗು ಕೇಂದ್ರಗಳು ಸೇರಿದಂತೆ ದ್ವಿತೀಯ ಸ್ಥಾನಿಯಾಗಿ ಕೀರ್ತಿ ತಂದಿರುತ್ತಾರೆ.

•ಖ್ಯಾತ ಮಣಿಪುರಿ ನೃತ್ಯ ಕಲಾವಿದೆ ಪದ್ಮಶ್ರೀ ದರ್ಶನಾ ಝವೇರಿ ಅವರು ನಡೆಸಿಕೊಟ್ಟ 10 ದಿನಗಳ ಮಣಿಪುರಿ ನೃತ್ಯ ಕಾರ್ಯಾಗಾರದಲ್ಲಿ ಭಾಗವಹಿಸಿದ ಅನುಭವ.

•ಖ್ಯಾತ ಹಿರಿಯ ಭರತನಾಟ್ಯ ಗುರು ಕಲಾಶ್ರೀ ಬಿ. ಭಾನುಮತಿ, ಬೆಂಗಳೂರು ಇವರು ನಡೆಸಿಕೊಟ್ಟ ಸಮೂಹ ನೃತ್ಯ ಸಂಯೋಜನಾ ಶಿಬಿರದಲ್ಲಿ ಭಾಗವಹಿಸಿದೆ.

• ಖ್ಯಾತ ಅಂತರಾಷ್ಟ್ರೀಯ ಭರತನಾಟ್ಯ ಕಲಾವಿದೆ ಪದ್ಮಶ್ರೀ ಮಾಳವಿಕಾ ಸರುಕ್ಕೈ ಅವರಿಂದ ಸ್ಪಿಕ್ ಮೆಕೆಯ ಮೂಲಕ ನಡೆದ ರಾಷ್ಟ್ರೀಯ ಭರತನಾಟ್ಯ ಕಾರ್ಯಾಗಾರದಲ್ಲಿ ತರಬೇತಿ ಪಡೆದಿರುವ ಸೌಭಾಗ್ಯ.

•ಅಂತರಾಷ್ಟ್ರೀಯ ಖ್ಯಾತಿಯ ಕೂಚುಪುಡಿ ನೃತ್ಯ ಕಲಾವಿದೆ ಗುರು ಶ್ರೀಮತಿ ವೈಜಯಂತಿ ಕಾಶಿ ಅವರೊಂದಿಗೆ ದೇಶದ ಕೆಲವೆಡೆ ನೃತ್ಯ ಪ್ರದರ್ಶನ ನೀಡಿದ್ದಾರೆ.

•ಅಂತರಾಷ್ಟ್ರೀಯ ಖ್ಯಾತಿಯ ಮೃದಂಗ ವಾದಕ ವಿದ್ವಾನ್ ಶ್ರೀ ಜನಾರ್ಧನ್ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ನೃತ್ಯ ಕಲಾವಿದ ಶ್ರೀ ಪುಲಕೇಶಿ ಕಸ್ತೂರಿ ಇವರು ನಡೆಸಿದ ತಾಳ ಲಯ ನಟುವಾಂಗ ತರಬೇತಿ ಶಿಬಿರದಲ್ಲಿ ಭಾಗವಹಿಸಿದೆ.

•ಕಾಲೇಜು ವಿದ್ಯಾಭ್ಯಾಸ ಸಂದರ್ಭದಲ್ಲಿ 2 ಬಾರಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಶಾಸ್ತ್ರೀಯ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದು, ದಕ್ಷಿಣ ಭಾರತ ಅಂತರ್ ವಿಶ್ವವಿದ್ಯಾನಿಲಯ ಕಲೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸುವ ಅವಕಾಶ ದೊರೆತಿದೆ.
.

• ಸಂಸ್ಥೆಯಲ್ಲಿ ಭರತನಾಟ್ಯ ತರಬೇತಿ ಪಡೆದ ೫ ವಿದ್ಯಾರ್ಥಿನಿಯರು ಇಂದು ನೃತ್ಯ ಶಿಕ್ಷಣವನ್ನು ನೀಡುತ್ತಿದ್ದಾರೆ.

•ಸಂಸ್ಥೆಯ ಹಲವು ವಿದ್ಯಾರ್ಥಿಗಳು ವೈಯಕ್ತಿಕ ಹಾಗೂ ಸಮೂಹ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿರುತ್ತಾರೆ.

ಯಕ್ಷಗಾನ :

• ಯಕ್ಷಗಾನ ಕ್ಷೇತ್ರದಲ್ಲಿ ತಮ್ಮನ್ನು ತಾವು ಕಳೆದ 10 ವರ್ಷಗಳಿಂದ ತೊಡಗಿಸಿಕೊಂಡಿದ್ದು ,ಆಸಕ್ತರಿಗೆ ಉಚಿತವಾಗಿ ಯಕ್ಷಶಿಕ್ಷಣವನ್ನು ನೀಡುತ್ತಿದ್ದಾರೆ. ಸುಮಾರು 30 ಮಕ್ಕಳು ಹಾಗೂ 8 ಮಹಿಳೆಯರು ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ.

• ಇದುವರೆಗೆ 200 ಕ್ಕೂ ಮಿಕ್ಕಿ ಯಕ್ಷಗಾನ ಕಾರ್ಯಕ್ರಮಗಳನ್ನು ದೇಶದ ಹಲವೆಡೆ ನೀಡಿರುತ್ತಾರೆ. ದೇವಿ ಮಹಾತ್ಮೆಯ ಶ್ರೀದೇವಿ, ಹಲವು ಪ್ರಸಂಗಗಳಲ್ಲಿ ಕೃಷ್ಣ, ಸುಧನ್ವಾರ್ಜುನ, ಕೃಷ್ಣಾರ್ಜುನಗಳಲ್ಲಿ ಅರ್ಜುನನಾಗಿ , ಶ್ರೀಕೃಷ್ಣ ಪಾರಿಜಾತ,ನರಕಾಸುರ ಮೋಕ್ಷದ ಸತ್ಯಭಾಮೆ,ಅಲ್ಲದೆ ದಾಕ್ಷಾಯಿಣಿ, ಸುಭದ್ರೆ, ಮಾಲಿನಿ, ದ್ರೌಪದಿ, ಸರಮೆ, ರತಿ, ಜಮದಗ್ನಿ, ಮೃಕಂಡುಮುನಿ, ವಿಷ್ಣು ,ಹನೂಮಂತ, ಬಲರಾಮ, ಕಿರಾತ, ದೇವೇಂದ್ರನಂತಹಾ ಪ್ರಸಂಗದ ಪ್ರಧಾನ ಪಾತ್ರಗಳಾಗಿ ಅಭಿನಯಿಸಿದ್ದಾರೆ. ತ್ರಿಶಿರಾಸುರದಂತಹ ಬಣ್ಣದ ಪಾತ್ರವನ್ನು ನಿರ್ವಹಿಸಿದ್ದಾರೆ.

• ಯಕ್ಷಗಾನದಲ್ಲಿ ಸಾತ್ವಿಕ ಪಾತ್ರಗಳ ಪುಂಡು ವೇಷ, ರಾಜವೇಷ, ಸ್ತ್ರೀ ವೇಷಗಳನ್ನು ಅಲ್ಲದೆ ಭಾರತೀ ವೃತ್ತಿ ಪ್ರಧಾನ ಉಳ್ಳ ಪಾತ್ರಗಳನ್ನು ಸಾತ್ವಿಕತೆಯೊಂದಿಗೆ ಮೇಳೈಸಿ ಪ್ರಸ್ತುತಿ ಪಡಿಸುವ ಜಾಣ್ಮೆಯ ಕಲಾವಿದೆ.

ವೃತ್ತಿಪರ ಪ್ರಸಿದ್ಧ ಪುರುಷ ಯಕ್ಷಗಾನ ಕಲಾವಿದರಾದ ಶ್ರೀ ಸೂರಿಕುಮೇರು ಗೋವಿಂದ ಭಟ್, ಶ್ರೀ ರಾಧಾಕಕೃಷ್ಣ ನಾವಡ ಮಧೂರು, ಶ್ರೀ ಉಮೇಶ್ ಶೆಟ್ಟಿ ಉಬರಡ್ಕ, ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್, ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್, ಬಂಟ್ವಾಳ ಜಯರಾಮ ಆಚಾರ್ಯ, ಶ್ರೀ ಅಮ್ಮುಂಜೆ ಮೋಹನ ಕುಮಾರ್ , ಶ್ರೀ ದೀಪಕ್ ರಾವ್ ಪೇಜಾವರ್, ಶ್ರೀ ಶಿವರಾಮ ಜೋಗಿ ಮುಂತಾದವರ ಜತೆ ವೇದಿಕೆಯಲ್ಲಿ ಪ್ರಧಾನ ಪಾತ್ರ ನಿರ್ವಹಿಸಿ ಮೆಚ್ಚುಗೆ ಪಡೆದಿರುವುದು.

• ತುಳುಕೂಟ ಕುವೈಟ್ ಆಯೋಜಿಸಿದ ತುಳು ಪರ್ಬ 2015 ರಲ್ಲಿ ಬಡಗಿನ ಹೆಸರಾಂತ ಕಲಾವಿದ ಶ್ರೀ ಸುಜಯೀಂದ್ರ ಹಂದೆಯವರೊಂದಿಗೆ ‘ತೆಂಕು-ಬಡಗು ಯಕ್ಷಗಾನ ಜುಗಲ್ಬಂಧಿ ಕಾರ್ಯಕ್ರಮವನ್ನು ನೀಡಿರುತ್ತಾರೆ.

• ಯಕ್ಷಾರಾಧನಾ ಕಲಾಕೇಂದ್ರ(ರಿ) ಮೂಲಕ ಇತರ ಸಂಸ್ಥೆಗಳ ಸಹಯೋಗದೊಂದಿಗೆ ಕಳೆದ ಐದು ವರ್ಷಗಳ ಕಾಲ “ಯಕ್ಷೋಪಾಸನಾ ಶಿಬಿರ” ಆಯೋಜಿಸಿ, ಪ್ರಾಯೋಗಿಕ ಕಮ್ಮಟದಲ್ಲಿ- ಯಕ್ಷಗಾನದಲ್ಲಿ ನಾಟ್ಯ – ಶ್ರೀ ಕೆ. ಗೋವಿಂದ ಭಟ್, ಸೂರಿಕುಮೇರು; ಶ್ರೀ ಕರ್ಗಲ್ಲು ವಿಶ್ವೇಶ್ವರ ಭಟ್,ಯಕ್ಷಗಾನದಲ್ಲಿ ಅರ್ಥಗಾರಿಕೆ – ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್; ಯಕ್ಷಗಾನದಲ್ಲಿ ಬಣ್ಣಗಾರಿಕೆ – ಶ್ರೀ ಸದಾಶಿವ ಶೆಟ್ಟಿಗಾರ್, ಸಿದ್ಧಕಟ್ಟೆ, ಇವರಿಂದ ತರಬೇತಿ ಪಡೆದಿರುತ್ತಾರೆ

• 2013 ರಲ್ಲಿ ಭರತನಾಟ್ಯ ಮತ್ತು ಯಕ್ಷಗಾನ ಕುರಿತ ತೌಲನಿಕ ಅಧ್ಯಯನವನ್ನು “ತೆಂಕು ತಿಟ್ಟು ಯಕ್ಷಗಾನದಲ್ಲಿ ಅಭಿನಯ ದರ್ಪಣ” ಎಂಬ ಕಿರು ಸಂಶೋಧನೆಯನ್ನು ಮಾಡಿರುವುದು. ಅದಕ್ಕಾಗಿ ಸಂಯೋಜಿಸಿದ ಶಿಬಿರದಲ್ಲಿ ತೆಂಕುತಿಟ್ಟಿನ ಸಾಧಕರಾದ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಭಾಗವತರು, ಬಲಿಪ ನಾರಾಯಣ ಭಾಗವತರು, ಸೂರಿಕುಮೇರು ಗೋವಿಂದ ಭಟ್, ದಿ.ಗೇರುಕಟ್ಟೆ ಗಂಗಯ್ಯ ಶೆಟ್ಟಿ ,ಬಂಟ್ವಾಳ ಜಯರಾಮ ಆಚಾರ್ಯ,ದೀವಾಣ ಶಿವಶಂಕರ ಭಟ್, ಉಬರಡ್ಕ‌ ಉಮೇಶ್ ಶೆಟ್ಟಿ, ಚಂದ್ರಶೇಖರ ಧರ್ಮಸ್ಥಳ, ದೀಪಕ್ ರಾವ್ ಪೇಜಾವರ, ಲೋಕೇಶ್ ಮುಚ್ಚೂರು… ಹಾಗೂ ಡಾ.ಚಂದ್ರಶೇಖರ ದಾಮ್ಲೆ ಇವರ ನೇತೃತ್ವದಲ್ಲಿ ತೆಂಕುತಿಟ್ಟಿನ ನಾಟ್ಯವನ್ನು ಪುಂಡು, ರಾಜ , ಬಣ್ಣ, ಸ್ತ್ರೀ ಮತ್ತು ಹಾಸ್ಯ ಪಾತ್ರಗಳಲ್ಲಿ ಹೇಗೆ ಎನ್ನುವ ಬಗ್ಗೆ ಪ್ರಾತ್ಯಕ್ಷಿಕೆ ಸಹಿತ ವಿಚಾರ ಮಂಡನೆಯನ್ನು ಆಯೋಜಿಸಿದ್ದು.

•ತೆಂಕು ಯಕ್ಷಗಾನದ ತಾಳ ಮೀಮಾಂಸೆಯ ಕುರಿತು ಶ್ರೀ ಬೊಟ್ಟಿಕೆರೆ ಪುರುಷೋತ್ತಮ ಪೂಂಜರಿಂದ ತಿಳಿವಳಿಕೆ.

•20ನೆಯ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪರ್ಯಾಯ ವೇದಿಕೆಯಲ್ಲಿ 2015 ರ ಅಗಷ್ಟ್ 28-30ರ ವರೆಗೆ ಯಕ್ಷಾರಾಧನಾ ಕಲಾ ಕೇಂದ್ರದ ಸಂಯೋಜನೆಯಲ್ಲಿ ಕಟೀಲು ದುರ್ಗಾ ಮಕ್ಕಳ ಮೇಳದ ಸಹಕಾರದಲ್ಲಿ ಯಕ್ಷಗಾನದಲ್ಲಿ ವಾಚಿಕ ವೈಭವ ದ ಕುರಿತು ಅನುಭವಿ ಮತ್ತು ಖ್ಯತ ಕಲಾವಿದರನ್ನು ಆಮಂತ್ರಿಸಿ ವಿವಿಧ ಗೋಷ್ಠಿಗಳೊಂದಿಗೆ ಯಕ್ಷೋಪಾಸನಾ ಶಿಬಿರವನ್ನು ಸಂಯೋಜಿಸಿ ಯಶಸ್ವಿಯಾಗಿದ್ದರೆ.

• ಅಗಸ್ಟ್ 18, 2013 ರಂದು ಮಂಗಳೂರಿನ ಪುರಭವನದಲ್ಲಿ, ಮೊದಲ ಭಾಗದ ಹಿಮ್ಮೇಳದಲ್ಲಿ ಹಾಗೂ ಎಲ್ಲಾ ಮುಮ್ಮೇಳ ಪಾತ್ರಗಳಲ್ಲೂ ಮಹಿಳೆಯರೇ ಅಭಿನಯಿಸಿ ಐತಿಹಾಸಿಕ ದಾಖಲೆ ನಿರ್ಮಿಸಿ ಅಪಾರ ಜನಮೆಚ್ಚುಗೆ ಗಳಿಸಿದ ಸಂಪೂರ್ಣ ಶ್ರೀದೇವಿ ಮಹಾತ್ಮೆ ಎಂಬ ಪ್ರಸಂಗವನ್ನು ಪ್ರಸ್ತುತಪಡಿಸಿರುವುದು.

•ಐತಿಹಾಸಿಕ ಮಹಿಳಾ “ಶ್ರೀದೇವಿ ಮಹಾತ್ಮೆ” ಯಕ್ಷಗಾನ ಕಾರ್ಯಕ್ರಮದ ಕಾರ್ಯಕ್ರಮದ ಡಿವಿಡಿಯನ್ನು ಬಿಡುಗಡೆ ಗೊಳಿಸಿರುತ್ತಾರೆ .ಯಕ್ಷಾರಾಧನಾ ಕಲಾ ಕೇಂದ್ರ ನಿರ್ಮಿಸಿದ ಸಂಪೂರ್ಣ ಶ್ರೀದೇವಿ ಮಹಾತ್ಮೆ ತೆಂಕಿನಲ್ಲಿ ಲೋಕರ್ಪಣಗೊಂಡ ಪ್ರಪ್ರಥಮ ಮಹಿಳಾ ಯಕ್ಷಗಾನ ಸಿ.ಡಿ ಎನ್ನುವುದು ಉಲ್ಲೇಖನೀಯ.

•ಮುಂಬೈ, ದೆಹಲಿ, ಮೈಸೂರು,ಬೆಂಗಳೂರು, ಉಡುಪಿ ನಗರಗಳಲ್ಲಿ, ಕರಾವಳಿ ಉತ್ಸವಗಳಲ್ಲಿ, ಅಲ್ಲದೆ ಕಟೀಲು, ಕದ್ರಿ, ಕುಂಜಾರು , ಉಪ್ಪಿನಂಗಡಿ ,ಪುತ್ತೂರು , ಸುಳ್ಯ, ಅಲ್ಲದೆ ದ.ಕ.ಜಿಲ್ಲೆಯ ಎಲ್ಲಾ ಪ್ರಮುಖ ಕೇಂದ್ರಗಳಲ್ಲಿ ಮುಂತಾದ ಹಲವು ಕ್ಷೇತ್ರಗಳಲ್ಲಿ ಯಕ್ಷಗಾನ ಕಾರ್ಯಕ್ರಮ ಜರುಗಿ ಅಪಾರ ಜನಮೆಚ್ಚುಗೆ ಪಡೆದಿರುತ್ತದೆ.

• ಅತಿಥಿ ಕಲಾವಿದೆಯಾಗಿ ಮಹಾಗಣಪತಿ ಮಹಿಳಾ ಯಕ್ಷಗಾನ ಮಂಡಳಿ ,ಕಾಟಿಪಳ್ಳ ,ಸನಾತನ ಯಕ್ಷಾಲಯ ಮಂಗಳೂರು, ಜಗದಂಬಾ ಯಕ್ಷಗಾನ ಮಂಡಳಿ, ಉರ್ವ , ಸರಯೂ ಬಾಲ ಮಾತ್ತು ಮಹಿಳಾ ಯಕ್ಷಗಾನ ಮಂಡಳಿ ಕೋಡಿಕ್ಕಲ್ , ಕದಳಿ ಯಕ್ಷಕಲಾ ಮಂಡಳಿ ಕದ್ರಿ ಮುಂತಾದ ಸಂಸ್ಥೆಗಳಲ್ಲಿ ಭಾಗವಹಿಸಿದ ಅನುಭವ.

• ಯಕ್ಷಗಾನ ಕುರಿತು ರಾಜ್ಯಮಟ್ಟದ ಹಲವು ವಿಚಾರ ಸಂಕಿರಣಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದು / ಪ್ರಬಂಧ ಮಂಡನೆ ಮಾಡಿರುವುದು.

•ಮಕ್ಕಳ ಯಕ್ಷಗಾನ ತಂಡವನ್ನೂ ಕಟ್ಟಿ ಎಳೆಯರಲ್ಲಿ ಕಲಾಸಕ್ತಿಯನ್ನು ಮೂಡಿಸಲು ಅವರಿಗೂ ವೇದಿಕೆಯನ್ನು ಕಲ್ಪಿಸುತ್ತಿರುವುದು.

ತಾಳಮದ್ದಳೆ :

• 2014 ರಲ್ಲಿ ಆರಂಭವಾದ ಯಕ್ಷಾರಾಧನಾ ಮಹಿಳಾ ತಾಳಮದ್ದಳೆ ತಂಡ ಇದರ ನಿರ್ದೇಶಕಿ.

ಈ ತಂಡದಲ್ಲಿ ಪ್ರಸ್ತುತ 10 ಮಂದಿ ಸದಸ್ಯೆಯರಿದ್ದು ಸ್ವಂತಿಕೆಯೊಂದಿಗೆ ಪಾತ್ರಚಿತ್ರಣವನ್ನು ನೀಡುವಲ್ಲಿ
ಮಹಿಳೆಯರಿಗೆ ತರಬೇತಿಯನ್ನು ನೀಡುತ್ತಿರುವ ಬಗ್ಗೆ ಸಂತೋಷವಿದೆ.

• ಸುಮಾರು 100 ತಾಳಮದ್ದಳೆ ಕಾರ್ಯಕ್ರಮಗಳಲ್ಲಿ ಯಶಸ್ವಿಯಾಗಿ ಅರ್ಥಧಾರಿಯಾಗಿ ಜನಮೆಚ್ಚುಗೆ ಪಾತ್ರವಾಗಿರುವುದು.

• ಆಕಾಶವಾಣಿಯ ಶ್ರೇಣೀಕೃತ (ಬಿ) ತಾಳಮದ್ದಳೆ ತಂಡದ ನಾಯಕಿಯಾಗಿದ್ದಾರೆ ಮತ್ತು ತಂಡದ ಹಲವು ಕಾರ್ಯಕ್ರಮಗಳು ಪ್ರಸಾರವಾಗಿದೆ.

•ಧೀಶಕ್ತಿ ಮಹಿಳಾ ತಾಳಮದ್ದಳೆ ಸಂಘ ,ಪುತ್ತೂರು ತಂಡದಲ್ಲಿ ಪ್ರಧಾನ ಪಾತ್ರಗಳಿಗೆ ಅತಿಥಿ ಕಲಾವಿದೆಯಾಗಿ ಹಲವು ಬಾರಿ
ಭಾಗವಹಿಸಿದ ಸಂತೋಷ.

• ಆಯ್ದ ಮಹಿಳಾ ಕಲಾವಿದೆಯರ
ತಾಳಮದ್ದಳೆಯಲ್ಲಿಯೂ ಭಾಗವಹಿಸಿದ ಸಂತೃಪ್ತಿ.

*ಮುಂಬೈ ನಗರದಲ್ಲಿ ಧೀ ಶಕ್ತಿ ಮಹಿಳಾ ಯಕ್ಷಗಾನ ಬಳಗದ ಸದಸ್ಯೆಯಾಗಿ ಅರ್ಥಗಾರಿಕೆಯಲ್ಲಿ ಮೆರೆಯುವ ಅವಕಾಸದ ಒದಗಿತು.

• ಧುರ ವೀಳ್ಯದ ಕೌರವ ; ಕರ್ಣಾರ್ಜುನದ ಶಲ್ಯ ; ಕೃಷ್ಣಾರ್ಜುನದ ಶ್ರೀ ಕೃಷ್ಣ, ಅರ್ಜುನ, ದಾರುಕ,ಸುಭದ್ರೆ ; ಜಾಂಬವತಿ ಕಲ್ಯಾಣದ ಶ್ರೀಕೃಷ್ಣ, ಬಲರಾಮ ; ರುಕ್ಮಿಣಿ ಕಲ್ಯಾಣದ ಭೀಷ್ಮಕ, ರುಕ್ಮ ; ಕದಂಬ ಕೌಶಿಕೆಯ ಸುಗ್ರೀವಾಸುರ , ರಕ್ತಬೀಜ ; ಪಾರಿಜಾತ ಪ್ರಸಂಗದ ಸತ್ಯಭಾಮೆ ; ನರಕಾಸುರ ಮೋಕ್ಷದ ಶ್ರೀಕೃಷ್ಣ, ಸತ್ಯಭಾಮೆ ; ಭಕ್ತ ಸುಧನ್ವದ ಸುಧನ್ವ, ಅರ್ಜುನ, ಪ್ರಭಾವತಿ ; ತಾಮ್ರಧ್ವಜ ಕಾಳಗದ ಸುಮತಿ, ಘೋಷಯಾತ್ರೆಯ ವನಪಾಲಕ, ಮೇದಿನಿ ನಿರ್ಮಾಣದ ವಿಷ್ಣು, ಸಿರಿ ಮಹಾತ್ಮೆಯ ಕೋಟ್ಸರಾಳ್ವ , ಕಚ ದೇವಯಾನಿಯ ವೃಷಪರ್ವ, ಸಮರ ಸೌಗಂಧಿಕಾ ದ್ರೌಪದಿ, ವೀರಮಣಿ ಕಾಳಗದ ವೀರಮಣಿ ;ಶಬರಾರ್ಜುನದ ಅರ್ಜುನ ; ಊರ್ವಶಿ ಶಾಪದ ಅರ್ಜುನ, ಭೀಷ್ಮ ವಿಜಯದ ಅಂಬೆ…. ಇತ್ಯಾದಿ ಪಾತ್ರಗಳ ನಿರ್ವಹಣೆ.

*ತಾಳಮದ್ದಳೆಯ ಯಾವುದೇ ಪಾತ್ರವನ್ನು ಪಾತ್ರೋಚಿತ ಭಾವ ಸ್ವರಭಾರದೊಂದಿಗೆ ನಿರ್ವಹಿಸುವ ಸಾಮರ್ಥ್ಯ.

•ಹಿರಿಯ ಅರ್ಥಧಾರಿಗಳಾದ ಶ್ರೀ ರಾಧಾಕೃಷ್ಣ ಕಲ್ಚಾರ್, ಶ್ರೀಧರ ಡಿ.ಎಸ್, ಶ್ರೀ ಶ್ರೀಹರಿನಾರಾಯಣದಾಸ ಆಸ್ರಣ್ಣ, ಶ್ರೀ ಹರೀಶ ಬಳಂತಿಮೊಗರು, ಶ್ರೀ ವಾಸುದೇವ ಸಾಮಗ ಮಲ್ಪೆ, ಕಾವಳಕಟ್ಟೆ ದಿನೇಶ ಶೆಟ್ಟಿ, ರವಿರಾಜ ಪನೆಯಾಲ ಮುಂತಾದವರ ಜತೆ ತಾಳಮದ್ದಳೆ ಅರ್ಥಗಾರಿಕೆಯ ಅನುಭವ.

ಲೇಖನ -ಸಾಹಿತ್ಯ- ಉಪನ್ಯಾಸ

•ಭರತನಾಟ್ಯ ಮಾರ್ಗಂ ನ ಎಲ್ಲಾ ನೃತ್ಯಬಂಧಗಳ ರಚನೆ . ಕನ್ನಡ ಅಥವಾ ಸಂಸ್ಕೃತ ಭಾಷೆಯ ಸಾಹಿತ್ಯ ಬಳಸಿ
ರಚನೆಗಳು .

ಉದಾ: ಅಲರಿಪು – ಖಂಡಜಾತಿ ಮಠ್ಯತಾಳ, ಸಂಕೀರ್ಣ ಜಾತಿ ರೂಪಕ ತಾಳ.

•ಪುಷ್ಪಾಂಜಲಿ-ಹಂಸಧ್ವನಿ,ನಾಟ,ಅಮೃತವರ್ಷಿಣಿ , ಆರಭಿ… ರಾಗಗಳಲ್ಲಿ – ಆದಿತಾಳ ; ಷಣ್ಮುಖಪ್ರಿಯ ರಾಗ–ಮಿಶ್ರಛಾಪು ತಾಳ, ಅಮೃತವರ್ಷಿಣಿ – ಖಂಡ ಜಾತಿ –ಅಟತಾಳ ಇತ್ಯಾದಿ………

• ಶಬ್ದಂ –ಮಾಲಿಕೆ-ಮಿಶ್ರಛಾಪು ತಾಳದಲ್ಲಿ
ಗಣೇಶ ಶಬ್ದಂ, ದೇವಿ ಶಬ್ದಂ ರಚನೆ

• ವರ್ಣ- ಅಷ್ಟರಾಗ ಮಾಲಿಕ ಪದವರ್ಣ ;
ನವರಾಗ ಮಾಲಿಕ ಪದವರ್ಣ, ಪಾರಿಜಾತ ಪದ ವರ್ಣ- ಆದಿ ತಾಳದಲ್ಲಿ ಹಾಗೂ ಅಭೇರಿ ರಾಗ-ರೂಪಕ ತಾಳದಲ್ಲಿ ರಚನೆ.

•ಪದಂ ಮತ್ತು ಜಾವಳಿ- ವಿವಿಧ ನಾಯಕಿ/ ನಾಯಕ ಭಾವಗಳಲ್ಲಿ ಹಲವು ಪದಂಗಳನ್ನು ರಚನೆ.

• ಕೃತಿ ಮತ್ತು ದೇವರ ನಾಮಗಳ ರಚನೆ
• ದೇವಿ ಕೌತ್ವಂ – ಖಂಡ ಛಾಪು ತಾಳದಲ್ಲಿ
•ತಿಲ್ಲಾನ-ವಲಚಿರಾಗ–ಖಂಡಜಾತಿ ತ್ರಿಪುಟತಾಳ; ವೃಂದಾವನ ಸಾರಂಗ-ಮಿಶ್ರ ಝಂಪೆ …ಇತ್ಯಾದಿಗಳನ್ನು ಕನ್ನಡ ಸಾಹಿತ್ಯದೊಂದಿಗೆ ರಚಿಸಿರುತ್ತಾರೆ.

• ಕೆಲವು ನೃತ್ಯ ರೂಪಕಗಳ ರಚನೆ.

• ಕಲೆ–ಮಹಿಳಾ ಚಿಂತನೆಗಳ ಕುರಿತು ಇವರ ಮಾತುಗಳಿಂದಾಗಿ ಮಂಗಳೂರು ಆಕಾಶವಾಣಿಯ ಶ್ರೋತ್ರಗಳಿಗೆ ಇವರು ಪರಿಚಿತರು.

•ನೃತ್ಯ ವಿಮರ್ಷಕಿಯಾಗಿ, ಲೇಖಕಿಯಾಗಿ ಉದಯವಾಣಿ ; ವಿಜಯ ಕರ್ಣಾಟಕ ; ಪ್ರಜಾವಾಣಿ ;ವಿಕ್ರಮ ಮುಂತಾದ ದಿನಪತ್ರಿಕೆಗಳಲ್ಲಿ ಬರಹಗಳು ಪ್ರಕಟವಾಗಿವೆ.

•“ಬಲ್ಲಿರೇನಯ್ಯ” ಯಕ್ಷಗಾನ ಮಾಸಪತ್ರಿಕೆಯಲ್ಲಿ ಇವರ “ದಕ್ಷಿಣಾದಿ ಯಕ್ಷಮಾರ್ಗ” ಎನ್ನುವ ಲೇಖನ ಸರಣಿ ಪ್ರಕಟವಾಗಿರುತ್ತದೆ.

•ಹಲವು ಸ್ಮರಣ ಸಂಚಿಕೆಗಳಲ್ಲಿ ವಿದ್ವತ್ಪೂರ್ಣ ಲೇಖನಗಳು ಪ್ರಕಟವಾಗಿದೆ.

•ಹಲವು ಕವನಗಳು, ಲಲಿತ ಪ್ರಬಂಧಗಳ ರಚನೆ.(ಅಪ್ರಕಟಿತ)

ನಿರೂಪಕಿ :

•500 ಕ್ಕೂ ಮಿಕ್ಕ ಸಭಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರೂಪಕಿಯಾಗಿಯೂ ಕಾರ್ಯನಿರ್ವಹಿಸಿದ ಅನುಭವ.

•ಕರಾವಳಿ ಉತ್ಸವ, ಮಹಿಳಾ ಯಕ್ಷಸಂಭ್ರಮ, ಮಾತೃ ಛಾಯಾ, ಮುಂತಾದ ಜಿಲ್ಲಾ ರಾಜ್ಯ ಮಟ್ಟದ ಕಾರ್ಯಕ್ರಮಗಳಿಗೆ ನಿರೂಪಿಸಿದ ಹಿರಿಮೆ.

• ಹಿರಿಯ ವಿದ್ವಾಂಸ ಗುರು ವಿದ್ವಾನ್ ಪಾವಗಡ ಪ್ರಕಾಶ್ ರಾವ್, ಅವರೊಂದಿಗೆ ಚಂದನ ವಾಹಿನಿಯ “ಸತ್ಯ ದರ್ಶನ” ಸರಣಿಯ 18 ಕಂತುಗಳಿಗೆ ನಿರೂಪಕಿಯಾಗಿ ಕಾರ್ಯಕ್ರಮ ನಿರ್ವಹಿಸಿದ ಅನುಭವ.

•ಮನೋರಂಜನಾ ಕ್ರೀಡೆಗಳ ನಿರ್ವಹಣೆಯ ಕಾರ್ಯಕ್ರಮಗಳ ನಿರೂಪಣೆ ಮತ್ತು ನಿರ್ವಹಣೆ.

• ನೃತ್ಯ, ಯಕ್ಷಗಾನ, ಕಲೆ ಮುಂತಾದ ವಿಚಾರಗಳ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸಗಕಳನ್ನು‌ ಹಲವು ಸಂಸ್ಥೆಗಳಲ್ಲಿ‌ ನೀಡಿದ್ದು.

ಇತರ ಚಟುವಟಿಕೆ – ಹವ್ಯಾಸ – ಆಸಕ್ತಿ :

• ಭಗವದ್ಗೀತಾ ಕಂಠ ಪಾಠ, ಗಾಯನ, ಜಾನಪದ ನೃತ್ಯ, ಸಮೂಹ ನೃತ್ಯ, ಛದ್ಮವೇಷ, ಭಾಷಣ, ಪ್ರಬಂಧ, ರಂಗೊಲಿ , ಮೂಕಾಭಿನಯ, ಅಂತ್ಯಾಕ್ಷರಿ, ಚರ್ಚಾ ಸ್ಪರ್ಧೆ……… ಹೀಗೆ ಬಹು ವಿಚಾರಗಳಲ್ಲಿ ರಾಜ್ಯ, ಜಿಲ್ಲಾ, ಶಾಲಾ ಮಟ್ಟಗಳಲ್ಲಿ ಬಹುಮಾನವನ್ನು ಗಳಿಸಿರುವುದು.

•ವಿವಿಧ ವಿನೋದಾವಳಿ, ಪ್ರತಿಭಾ ಸ್ಪರ್ಧೆಗಳಲ್ಲಿ ಭಾಗವಹಿಸಿ “ಅತ್ಯುತ್ತಮ ಕಲಾವಿದೆ”: ಹಾಗೂ “ಅತ್ಯುತ್ತಮ ಪ್ರತಿಭೆ” ಪುರಸ್ಕಾರಗಳನ್ನು ಹಲವಾರು ಬಾರಿ
ಗೆದ್ದಿರುವುದು.

• ಯಾವುದೇ ಕಾರ್ಯಕ್ರಮ ವೀಕ್ಷಿಸುವುದು.

 

ವಿವಿಧ ಸಂಸ್ಥೆಗಳಲ್ಲಿ ಸುಮಂಗಲ ರತ್ನಾಕರ್ :

•ಕರಾವಳಿ ನೃತ್ಯ ಕಲಾ ಪರಿಷತ್ತು(ರಿ), ಮಂಗಳೂರು ಇಲ್ಲಿ ಜೊತೆ ಕಾರ್ಯದರ್ಶಿಯಾಗಿ 2003-05 ವರೆಗೆ ಸೇವೆ ಸಲ್ಲಿಸಿರುತ್ತಾರೆ.

•ಪ್ರಸ್ತುತ ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ ನ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ತೊಡಗಿಕೊಂಡಿರುವುದು .

ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ (ರಿ), ಸುರತ್ಕಲ್ ಇಲ್ಲಿ ಸಂಘಟನಾ ಕಾರ್ಯದರ್ಶಿಯಾಗಿ ಹಲವಾರು ವರ್ಷಗಳಿಂದ ಸೇವೆಯ ಸಂತೃಪ್ತಿ. ಪ್ರಸ್ತುತ ಶ್ರೀ ಶಾರದಾ ಸೇವಾ ಟ್ರಸ್ಟ್ ರಿ. ಸುರತ್ಕಲ್ ನ ಟ್ರಷ್ಠಿಯಾಗಿ ಕರ್ತವ್ಯ.

•ಸಂಸ್ಕಾರ ಭಾರತಿ (ರಿ), ಮಂಗಳೂರು ಇದರ ಜೊತೆ ಕಾರ್ಯರ್ಶಿಯಾಗಿ 2010-2012 ಸೇವೆ ಸಲ್ಲಿಸಿರುವುದು.

•ಅಶಕ್ತ ವೃತ್ತಿಪರ ಯಕ್ಷಗಾನ ಕಲಾವಿದರಿಗಾಗಿಯೇ ಇರುವ ಸಮಾಜ ಸೇವಾ ಸಂಸ್ಥೆ “ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಷ್ಟ್” ನ ಕೇಂದ್ರ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಸಮಾಜ ಸೇವೆಸಲ್ಲಿಸುವಲ್ಲಿ ಕೈ ಜೋಡಿಸಿರುವುದು.

• ಹಲವಾರು ಅಭಿನಂದನಾ ಸಮಿತಿಗಳಲ್ಲಿ ಪದಾಧಿಕಾರಿಯಾಗಿ ತೊಡಗಿಸಿಕೊಂಡ ಸಂತೋಷ.

ಪ್ರಶಸ್ತಿ ಪುರಸ್ಕಾರಗಳು :

•ಭರತನಾಟ್ಯ ಹಾಗೂ ಯಕ್ಷಗಾನ ಕ್ಷೇತ್ರಕ್ಕೆ ಸಲ್ಲಿಸುತ್ತಿರುವ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ತುಳು ಕೂಟ ಕುವೈಟ್ ಇವರು ಅಲ್ಲಿನ ಭಾರತೀಯ ರಾಯಭಾರಿಗಳ ಮೂಲಕ ಸನ್ಮಾನಿಸಿರುತ್ತಾರೆ.(ಅಕ್ಟೋಬರ್ 2015)

•ಡಾ. ರಾಜ್‍ಕುಮಾರ್ ರಾಜ್ಯೋತ್ಸವ ಪ್ರಶಸ್ತಿ (ಯುವ ನೃತ್ಯ ಕಲಾವಿದೆ – 2003)
ಇದನ್ನು ಡಾ. ರಾಜ್‍ಕುಮಾರ್ ಅಂತರಾಷ್ಟ್ರೀಯ ಅಭಿಮಾನಿಗಳ ಸಂಘ, ಬೆಂಗಳೂರು ಇವರು ನೀಡಿದ್ದಾರೆ.

• ಶ್ರೀ ಗುರುದೇವ ದತ್ತ ಸಂಸ್ಥಾನಂ , ಒಡಿಯೂರಿನ‌ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಚಿನ್ನದ ಪದಕ ಸಹಿತ ” ಶ್ರೀ ಗುರುದೇವಾನುಗ್ರಹ ಪ್ರಶಸ್ತಿ -೨೦೧೬” ನೀಡಿ ಗೌರವಿಸಿದ್ದಾರೆ.

• ರೆಡ್ ಎಫ್.ಎಂ. ಮಂಗಳೂರಿನವರು ಮಹಿಳಾ ದಿನಾಚರಣೆ ಸಂದರ್ಭ ಕಲೆ ಮತ್ತು ಸಂಸ್ಕೃತಿ ಕ್ಷೇತ್ರದ ಸಾಧನೆಗಾಗಿ “ಸೂಪರ್ ಸಾಧಕಿ- 2017” ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

•ಕುಂಜಾರುಗಿರಿ ಶ್ರೀ ದುರ್ಗಾ ದೇವಿ ದೇವಸ್ಥಾನ ಆಡಳಿತ ಮಂಡಳಿ ಹಾಗೂ ರೋಟರಿ ಕ್ಲಬ್, ಶಿರ್ವ ಇವರು ಪೂಜ್ಯ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀ ಪಾದಂಗಳವರು, ಅದಮಾರು ಮಠ ಇವರಿಂದ ಕಲಾವಿದೆಗೆ ಸನ್ಮಾನ.

•ಪಾವಂಜೆ ಶ್ರೀ ಜ್ಣಾನ ಶಕ್ತಿ ಸುಬ್ರಹ್ಮಣ್ಯ ದೇವಳದ ಮಹಿಳಾವೇದಿಕೆಯಿಂದ ನೃತ್ಯ- ಯಕ್ಷ ಕಲಾ ಸಾಧನೆಗೆ ಶ್ರೀಮತಿ ಚಂದ್ರಮ್ಮ ವಾಸುಭಟ್ಟ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

• ಶ್ರೀ ಗುರುದೇವ ಸಹಕಾರಿ ಸೇವಾ ಸೌಹಾರ್ದ ಮಂಡಳಿ ನಿಯಮಿತ ಸಂಸ್ಥೆಯ ದಶಮಾನೋತ್ಸವ ಸಂದರ್ಭದಲ್ಲಿ ” ಶ್ರೀ ಗುರುದೇವಾನುಗ್ರಹ ಪುರಸ್ಕಾರ” -2014


ಶ್ರೀಮತಿ ವನಜಾಕ್ಷಿ ಶ್ರೀಪತಿ ಭಟ್ ಮೂಡಬಿದ್ರೆ ಸ್ಮರಣಾರ್ಥ – ಯಕ್ಷದೇವ ಮಿತ್ರಕಲಾ ಮಂಡಳಿ ಪ್ರಶಸ್ತಿ – 2017

• ‘ಅಜೆಕಾರು ಕಲಾಭಿಮಾನಿ ಬಳಗ’ ಮುಂಬೈ ಇವರಿಂದ ತಿಕೋಚಿವಾಡಿ ಹಾಲ್,ಥಾಣೆಯಲ್ಲಿ ಗೌರವಾರ್ಪಣೆ (2016)

•ಕನ್ನಡ ಸಾಹಿತ್ಯ ಪರಿಷತ್, ಮಂಗಳೂರು ಹಾಗೂ ಕಲ್ಕೂರ ಪ್ರತಿಷ್ಠಾನ ಇವರಿಂದ ಸಂಕ್ರಾಂತಿ ಪುರಸ್ಕಾರ- 2011.

•ಸೇವಾಂಜಲಿ ಪ್ರತಿಷ್ಠಾನ, ಫರಂಗಿಪೇಟೆ ಇವರಿಂದ ಖ್ಯಾತ ಗಾಯಕ ಪುತ್ತೂರು ನರಸಿಂಹ ನಾಯಕ್ ಮುಖೇನ ಸನ್ಮಾನ.

•ನಾಟ್ಯಾಂಜಲಿ ಕಲಾ ಅಕಾಡೆಮಿ(ರಿ), ಪಾವಂಜೆ ಇವರಿಂದ ನಾಟ್ಯ ಶಿಕ್ಷಣ ಪುರಸ್ಕಾರ – 2011.

•ವಿಪ್ರಸಮಾಗಮ ವೇದಿಕೆ ಮಂಗಳೂರು ಇವರಿಂದ ಈ ಸಂಸ್ಥೆಯ 11ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಭರತನಾಟ್ಯ ಕ್ಷೇತ್ರದ ಸಾಧನೆಗಾಗಿ ಅಭಿನಂದನೆ. – 2014.

•“ಬಿಮ್ಸ್ ಸಂಸ್ಕೃತಿ ಸಿರಿ” ಭೀಮಾನಗರ,ಉಡುಪಿ ಇಲ್ಲಿನ ನಾಗರಿಕರಿಂದ “ಯಕ್ಷ ಪ್ರತಿಭಾ ಪುರಸ್ಕಾರ-2014”

• ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘ, ಬಾಳ ಕಾಟಿಪಳ್ಳ ಇವರ ರಜತ ಮಹೋತ್ಸವ ಸಂದರ್ಭದಲ್ಲಿ – ಯಕ್ಷಗಾನದ ಸಾಧನೆಗೆ ಸನ್ಮಾನ – ಅಭಿನಂದನೆ-2014

•ಲಯನ್ಸ್ ಕ್ಲಬ್ ಹಳೆಯಂಗಡಿಯವರಿಂದ ಸನ್ಮಾನ -2014

•ಶ್ರೀ ಚಕ್ರಪಾಣಿ ನೃತ್ಯ ಕಲಾ ಕೇಂದ್ರ ಸಮಾರಂಭವೊಂದನ್ನೇ(ರಿ),ಮಂಗಳೂರು ಇವರ ಬೆಳ್ಳಿ ಹಬ್ಬದ ಸಂದರ್ಭದಲ್ಲಿ “ ನಾಟ್ಯ ಶಿಕ್ಷಣ ಪುರಸ್ಕಾರ” -2015

• ಶ್ರೀ ಜನಾರ್ದನ ದೇವಸ್ಥಾನ ,ಉಜಿರೆ ಹಾಗೂ ಶ್ರೀ ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನ ,ಉಜಿರೆ ಇವರು ಆಯೋಜಿಸಿದ ಐತಿಹಾಸಿಕ ಮಹಿಳಾ ಯಕ್ಷಗಾನ ಸಪ್ತಾಹದ ಸಂದರ್ಭದಲ್ಲಿ ಕಲೆ,ಸಂಸ್ಕೃತಿ ಮತ್ತು ಸಂಘಟನೆಗಾಗಿ “ಕಲಾ ಕೈಂಕರ್ಯ ಪುರಸ್ಕಾರ” -2015

• ತನ್ನ ತಾಯಿಯ ತವರೂರಾದ ಹೊಸಬೆಟ್ಟು ಗ್ರಾಮ ಸಂಘ ,ಕುಳಾೈ -ಹೊಸಬೆಟ್ಟು ಇವರಿಂದ 13-9-2015 ರಂದು ನವಗಿರಿ ಕಲ್ಯಾಣ ಮಂಟಪದಲ್ಲಿ ಹೃದಯಸ್ಪರ್ಷಿ ಸಂಮಾನ.

•ಜನಹಿತ ಸೇವಾ ಟ್ರಸ್ಟ್, ಅಶೋಕನಗರ, ಮಂಗಳೂರು ಇವರಿಂದ ಸನ್ಮಾನ.

•ಅಗೋಳಿ ಮಂಜಣ ಜಾನಪದ ಕೇಂದ್ರ (ರಿ), ಪಾವಂಜೆ ಇವರಿಂದ ಗೌರವಾರ್ಪಣೆ.

* ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಮಂಗಳೂರು ಇವರಿಂದ ಬೆಳ್ಳಿ ದೀಪ‌ ಸಹಿತ ಗೌರವಾರ್ಪಣೆ – 2016

•ವಿವಿಧ ಸಂಘಟನೆಗಳು – ಸಂಸ್ಥೆಗಳು ಬೇರೆ ಬೇರೆ ಸಂದರ್ಭಗಳಲ್ಲಿ ಕಲಾವಿದೆಯನ್ನು ಗೌರವಿಸಿದ್ದಾರೆ.

ಮಾಧ್ಯಮಗಳಲ್ಲಿ ಸಂದರ್ಶನ

•ಬಹುಮುಖಿ ಪ್ರತಿಭಾ ಸಂಪನ್ನ ಕಲಾವಿದೆಯ ಸಾಧನೆಗಳನ್ನು ಗುರುತಿಸಿ ಉಡುಪಿಯ “ಸ್ಪಂದನ”
ವಾಹಿನಿಯವರು “ವಿಮೆನ್ಸ್ ವ್ಯೂ” ಎಂಬ ಮಹಿಳಾ ಕಾರ್ಯಕ್ರಮದಲ್ಲಿ ನಮೃತಾ ರಾಕೇಶ್ ಶೆಟ್ಟಿ ಸಂದರ್ಶನ ನಡೆಸಿದ್ದರು.

• ಉಡುಪಿಯ “ಸ್ಪಂದನ” “ಕಲಾವಿದ” ಎನ್ನುವ ಕಾರ್ಯಕ್ರಮದ ಮೂಲಕ ಕೆ.ವಿ ರಮಣ್ ಸಂದರ್ಶನ ನಡೆಸಿದ್ದಾರೆ.

• ಮಂಗಳೂರಿನ ದೈಜೀ ವರ್ಲ್ಡ್ ವಾಹಿನಿಯವರ “ವಿಮೆನ್ಸ್
ಕ್ಲಬ್” ಕಾರ್ಯಕ್ರಮದಲ್ಲಿ ದೀಪ್ತಿ ಭಟ್ ಸಂದರ್ಶನ ನಡೆಸಿದ್ದಾರೆ.

• ಆಕಾಶವಾಣಿ ಮಂಗಳೂರು ಇವರು ವನಿತಾವಾಣಿ
ಮಹಿಳಾ ಸಾಧಕಿ ಕಾರ್ಯಕ್ರಮದಲ್ಲಿ ಶುಭದಾ ಡಿ. ರೈ ಸಂದರ್ಶನವನ್ನು ನಡೆಸಿದ್ದಾರೆ.

•ಆಕಾಶವಾಣಿ ಮಂಗಳೂರು ಇವರು ಕರಾವಳಿಯ ಕರೆಗಾಳಿ ಕಾರ್ಯಕ್ರಮದಲ್ಲಿ ಸಂದರ್ಶನ – ದೇವು ಹನೆಹಳ್ಳಿ ಸಂದರ್ಶಿಸಿದವರು.

• ಉದಯವಾಣಿಯ ಧನ್ಯಾ ಬಾಳೆಕಜೆ ಸಂದರ್ಶನ ನಡೆಸಿದ್ದರು.

• ಹಲವರು ಬರೆದ ಪರಿಚಯ ಲೇಖನ , ವಿಮರ್ಶಕರು ಕಾರ್ಯಕ್ರಮ ಕುರಿತು ಬರೆದ ವಿಮರ್ಶೆ ಗಳು ಪ್ರತಿಷ್ಠಿತ ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ .

ಹೀಗೆ ಸುಮಂಗಲ ರತ್ನಾಕರ್ ಅವರು ಒಬ್ಬ ಸಮಗ್ರ ಮಹಿಳಾ ಕಲಾವಿದೆಯಾಗಿ ಎಲ್ಲಾ ರಂಗಗಳಲ್ಲೂ ಸಮರ್ಥವಾಗಿ ನಿರ್ವಹಿಸಿ, ಸೈ ಎನಿಸಿಕೊಂಡಿದ್ದಾರೆ, ಅಲ್ಲದೆ, ಇತರ ಮಹಿಳೆಯರಿಗೆ ಮಾದರಿಯಾಗಿದ್ದಾರೆ‌. ಇವರ ಈ ಗಮನಾರ್ಹ ಸಾಧನೆಗೆ ನಮ್ಮದೊಂದು ಸಲಾಂ.