Friday, November 15, 2024
ಪುತ್ತೂರು

ಸಂತ ಫಿಲೋಮಿನಾ ಕಾಲೇಜಿನಲ್ಲಿ ರಕ್ಷಕ-ಶಿಕ್ಷಕ-ವಿದ್ಯಾರ್ಥಿ ಸಮಾಲೋಚನೆ, ಮಕ್ಕಳಿಗೆ ಜೀವನ ಪಾಠವೂ ಬಹಳ ಅಗತ್ಯವಿದೆ ; ವಂ. ಲಾರೆನ್ಸ್ ಮಸ್ಕರೇನಸ್-ಕಹಳೆ ನ್ಯೂಸ್

ಪುತ್ತೂರು : ಉತ್ತಮ ಶಿಕ್ಷಣವು ಕೇವಲ ಅಂಕ ಗಳಿಕೆಗೆ ಮಾತ್ರ ಸೀಮಿತವಾಗಿರದೆ ಭವಿಷ್ಯದಲ್ಲಿ ಎದುರಾಗುವ ನಾನಾ ರೀತಿಯ ಸವಾಲುಗಳನ್ನು ದಿಟ್ಟವಾಗಿ ಎದುರಿಸಬಲ್ಲ ಸಾಮಥ್ರ್ಯವನ್ನು ಬೆಳೆಸುತ್ತದೆ. ಶಿಕ್ಷಣವು ನಿಂತ ನೀರಲ್ಲ. ಶಿಕ್ಷಣ ಸಂಸ್ಥೆಗಳಲ್ಲಿ ಮೂಲಭೂತ ಸೌಕರ್ಯಗಳಿರಬೇಕು. ಮಕ್ಕಳಿಗೆ ಜೀವನ ಪಾಠವೂ ಬಹಳ ಅಗತ್ಯವಿದೆ ಎಂದು ಸಂತ ಫಿಲೋಮಿನಾ ಕಾಲೇಜಿನ ಸಂಚಾಲಕರಾದ ಅವಂ. ಲಾರೆನ್ಸ್ ಮಸ್ಕರೇನಸ್ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಂತ ಫಿಲೋಮಿನಾ ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಆಶ್ರಯದಲ್ಲಿ ಫೆಬ್ರವರಿ 22, 23 ಮತ್ತು 24 ರಂದು ಕಾಲೇಜು ಸಭಾಭವನದಲ್ಲಿ ಆಯೋಜಿಸಲಾದ ರಕ್ಷಕ-ಶಿಕ್ಷಕ-ವಿದ್ಯಾರ್ಥಿ ಸಮಾಲೋಚನೆ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಮಕ್ಕಳಿಗೋಸ್ಕರ ಹೆತ್ತವರು ಸದಾ ತ್ಯಾಗಮಯ ಜೀವನವನ್ನು ನಡೆಸುತ್ತಾರೆ. ಹೆತ್ತವರು ಮಾಡುವ ತ್ಯಾಗಕ್ಕೆ ಸೂಕ್ತ ಪ್ರತಿಫಲ ಪ್ರಾಪ್ತಿಯಾಗಬೇಕು. ಮನಸ್ಸಿಗೆ ಒಳ್ಳೆಯ ವಿಚಾರಗಳು ದೊರಕಿದಾಗ ಮನೋಭಿವೃದ್ಧಿಯಾಗುತ್ತದೆ. ಬದುಕಿನಲ್ಲಿ ವಿಧೇಯತೆ, ವಿನಯತೆ, ಶಿಸ್ತು, ಸ್ವಚ್ಛತೆ, ಸರಳತೆ, ಧನಾತ್ಮಕತೆ ಮೊದಲಾದ ಉತ್ತಮ ಅಂಶಗಳು ಅನಿವಾರ್ಯ. ನಮ್ಮ ಹೊಟ್ಟೆ ತುಂಬಿದರೆ ಸಾಲದು, ಹೃದಯವೂ ತುಂಬಿರಬೇಕು. ಮನೆಯೇ ಮೊದಲ ಪಾಠ ಶಾಲೆ, ಜನನಿ ತಾನೆ ಮೊದಲ ಗುರು. ಮನೆಯಲ್ಲಿ ಮಕ್ಕಳಿಗೆ ಉತ್ತಮ ವಾತಾವರಣವಿರಬೇಕು. ಮಕ್ಕಳು ಹೆತ್ತವರನ್ನು ನೋಡಿ ಕಲಿಯುತ್ತಾರೆ. ಮಕ್ಕಳನ್ನು ಪ್ರೀತಿಸಿ, ಹಾಳು ಮಾಡಬೇಡಿ. ಸವಲತ್ತುಗಳು ಬೇಕು. ಆದರೆ ಅವುಗಳಿಂದ ಇತರರಿಗೆ ಕೀಳರಿಮೆ ಬರುವಂತಾಗಬಾರದು. ಮಕ್ಕಳ ಹಿತದೃಷ್ಠಿಯಿಂದ ಅಪ್ಪ ಅಮ್ಮನಿಗೆ ಮೂರನೆಯ ಕಣ್ಣಿರಬೇಕು. ಶಿಕ್ಷಣ ಸಂಸ್ಥೆ ಅಭಿವೃದ್ಧಿಗೊಂಡಾಗ ಸಮಾಜದ ಶ್ರೇಯೋಭಿವೃದ್ಧಿಯಾಗುತ್ತದೆ. ಶಿಕ್ಷಣ ಸಂಸ್ಥೆಯ ಬೆಳವಣಿಗೆಯಲ್ಲಿ ಎಲ್ಲಾ ಸಮುದಾಯದವರ ಜವಾಬ್ದಾರಿಯಿರುತ್ತದೆ ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಪ್ರಾಸ್ತಾವಿಕ ಮಾತುಗಳನ್ನಾಡಿ, ಕೋವಿಡ್ ಕಾಲಘಟ್ಟದಲ್ಲಿ ಅನೇಕ ಅಡಚಣೆಗಳಿದ್ದರೂ ಭವ್ಯ ಇತಿಹಾಸವುಳ್ಳ ಈ ಸಂಸ್ಥೆಗೆ ಅನೇಕ ಸಂಖ್ಯೆಯಲ್ಲಿ ದಾಖಲಾತಿ ಹೊಂದಿರುವ ನೀವೆಲ್ಲರೂ ಧನ್ಯರು. ಮೌಲ್ಯಾಧಾರಿತ, ಸಂಸ್ಕಾರಭರಿತ ಶಿಕ್ಷಣ ನೀಡುತ್ತಿರುವ ಈ ವಿದ್ಯಾ ದೇಗುಲದ ಪರಂಪರೆ ಅಭೂತಪೂರ್ವವಾದುದು. ಆರಂಭದಲ್ಲಿ ಆನ್‍ಲೈನ್, ತದನಂತರ ಆಫ್‍ಲೈನ್ ಶಿಕ್ಷಣದ ಸೌಲಭ್ಯದಿಂದಾಗಿ ವಿದ್ಯಾರ್ಥಿಗಳು ವಂಚಿತರಾಗಿಲ್ಲ. ಅತೀವ ಸಂಕಷ್ಟದ ಸಂದರ್ಭದಲ್ಲಿಯೂ ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ವಿಶ್ವ ಮಟ್ಟದಲ್ಲಿ ಮಿನುಗುತ್ತಿರುವುದು ಹೆಮ್ಮೆಯ ಸಂಗತಿ. ಕ್ರಿಯಾಶೀಲ ಆಡಳಿತ ಮಂಡಳಿ, ಬದ್ಧತೆಯಳ್ಳ ಶಿಕ್ಷಕರು, ಜವಾಬ್ದಾರಿಯುತ ಹೆತ್ತವರು ಮತ್ತು ಅಧ್ಯಯನಶೀಲ ವಿದ್ಯಾರ್ಥಿಗಳು ಸಂಸ್ಥೆಯ ಬೆಳವಣಿಗೆಗೆ ಪೂರಕವಾಗಿರುತ್ತದೆ. ಮಕ್ಕಳನ್ನು ಸನ್ಮಾರ್ಗದಲ್ಲಿ ಮುನ್ನಡೆಯುವಂತೆ ನಾವೆಲ್ಲರೂ ಕಂಕಣಬದ್ಧರಾಗೋಣ ಎಂದರು. ಕಾಲೇಜಿನ ಲಲಿತ ಕಲಾ ಸಂಘದ ವಿದಾರ್ಥಿಗಳು ಪ್ರಾರ್ಥಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಅಮ್ಮಣ್ಣ ರೈ ಡಿ ಸ್ವಾಗತಿಸಿ, ವ್ಯವಹಾರ ನಿರ್ವಹಣಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ರಕ್ಷಕ ಶಿಕ್ಷಕ ಸಂಘದ ಕಾರ್ಯದರ್ಶಿ ಪ್ರಶಾಂತ್ ರೈ ವಂದಿಸಿದರು. ಸಹಾಯಕ ಪ್ರಾಧ್ಯಾಪಕರಾದ ದಿನಕರ ಅಂಚನ್, ರಾಜೇಶ್ವರಿ ಎಮ್ ಮತ್ತು ನ್ಯಾನ್ಸಿ ಲವಿನಾ ಪಿಂಟೊ ಕಾರ್ಯಾಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಕುರಿತು ಪರಾಮರ್ಶಿಸಲಾಯಿತು.