ಹಾವೇರಿ : ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ತೆರಳಿ ದೇಶದ ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿ ಕೊರೊನಾ ಲಸಿಕೆ ಪಡೆದರೆ , ಕರ್ನಾಟಕ ಕೃಷಿ ಸಚಿವರು ಮಾತ್ರ ತಮ್ಮ ಕಾಲಬುಡಕ್ಕೆ ಲಸಿಕೆ ತರಿಸಿಕೊಂಡ ಅಪಾದನೆ ಇದೀಗ ಕೇಳಿಬಂದಿದೆ. ಪ್ರಧಾನಿ ಮೋದಿ ಸಾರ್ವಜನಿಕರಿಗೆ ಸಮಸ್ಯೆಯಾಗಬಾರದೆಂದು ಬೆಳ್ಳಂ ಬೆಳಗ್ಗೆ ದೆಹಲಿಯ ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಎಲ್ಲರಂತೆ ಸರದಿಯಲ್ಲಿ ಲಸಿಕೆ ಹಾಕಿಸಿಕೊಂಡಿದ್ದಾರೆ.
ಆದ್ರೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಮತ್ತು ಅವರ ಪತ್ನಿ ವನಜಾ ಪಾಟೀಲ್ , ಹಾವೇರಿ ಜಿಲ್ಲೆ ಹಿರೇಕೆರೂರಿನ ತಮ್ಮ ನಿವಾಸಕ್ಕೆ ಆರೋಗ್ಯ ಸಿಬ್ಬಂದಿಯನ್ನು ಕರೆಸಿಕೊಂಡು ಲಸಿಕೆ ಪಡೆದುಕೊಂಡಿದ್ದಾರೆ. ಮನೆಯಲ್ಲಿಯೇ ಕೂತು ಸಚಿವರು ಕೊರೋನಾ ಲಸಿಕೆ ಹಾಕಿಸಿಕೊಂಡಿದ್ದಕ್ಕೆ ಹಲವರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. 2ನೇ ಹಂತದ ಲಸಿಕೆಯ ಅಭಿಯಾನವಾಗಿ , ರಾಜ್ಯದಲ್ಲಿ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ , ಇನ್ಪೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ, ಹೀಗೆ ಹಲವಾರು ಗಣ್ಯಾತೀಗಣ್ಯರು ಲಸಿಕೆ ಪಡೆಯುತ್ತಿದ್ದಾರೆ. ಆದರೆ ಸರ್ಕಾರಿ ಆಸ್ಪತ್ರೆಗೆ ತೆರಳಿ ಲಸಿಕೆ ಪಡೆದು ಮಾದರಿಯಾಗಬೇಕಾಗಿದ್ದ ಬಿ.ಸಿ. ಪಾಟೀಲ್ ನರ್ಸ್‍ಗಳನ್ನ ತಮ್ಮ ಮನೆಗೆ ಕರೆಸಿ ಕೊರೊನಾ ಲಸಿಕೆ ಹಾಕಿಸಿಕೊಂಡಿರುವುದು ಮಾತ್ರ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಕಾಂಗ್ರೆಸ್ ಪಕ್ಷವೂ ಸಚಿವರ ನಡೆಯನ್ನು ಟೀಕಿಸಿದ್ದು, ಅಧಿಕಾರ ಜನಸೇವೆಗೆ ಹೊರತು ಜನರಿಂದ ಸೇವೆ ಮಾಡಿಸಿಕೊಳ್ಳಲಲ್ಲ ಎಂದು ಹೇಳಿದೆ