ಕಾಣಿಯೂರು : ಕಡಬ ತಾಲೂಕಿನ ಕಾಣಿಯೂರಿನ ಸಹಕಾರಿ ಸಂಘವೊಂದರಲ್ಲಿ ಕೇರಳದಲ್ಲಿ ಹೈವೇ ದರೋಡೆಯಲ್ಲಿ ನಿರತವಾಗಿದ್ದ ದುಷ್ಕರ್ಮಿಗಳ ತಂಡ ಕದ್ದ ಚಿನ್ನಾಭರಣಗಳನ್ನೂ ಅಡಮಾನ ಇಟ್ಟಿರುವುದು ಬೆಳಕಿಗೆ ಬಂದಿದೆ.
ಈ ಹಿನ್ನಲೆ ಇದರ ಮಹತ್ವದ ತನಿಖೆಗೆ ಕೇರಳ ಪೋಲೀಸರ ತಂಡ ಆರೋಪಿಯ ಜತೆ ಕಾಣಿಯೂರಿನಲ್ಲಿರುವ ಚಾರ್ವಾಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘಕ್ಕೆ ಮಾರ್ಚ್ 2 ರಂದು ಆಗಮಿಸಿದೆ. ಬಂಧಿತ ಆರೋಪಿ ಕೇರಳದ ನಿವಾಸಿ ರಾಜೀವ್ ಎಂದು ತಿಳಿದುಬಂದಿದೆ. ಹೆದ್ದಾರಿಯಲ್ಲಿ ದರೋಡೆ ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನಿಬ್ಬರು ಆರೋಪಿಗಳಾದ ಉನ್ಮೇಶ್ ಹಾಗೂ ಜೋಗಿ ಎಂಬವರು ಪರಾರಿಯಾಗಿದ್ದು ಇವರಿಗಾಗಿ ಪೊಲೀಸರು ಶೋಧ ನಡೆಸುತಿದ್ದಾರೆ. ಈ ಮೂವರು ಆರೋಪಿಗಳು ಕಾಣಿಯೂರಿನ ಮಠತ್ತಾರು ಎಂಬಲ್ಲಿ ರಬ್ಬರ್ ತೋಟ ಲೀಸ್ ಗೆ ಪಡೆದು ಟ್ಯಾಪಿಂಗ್ ನಡೆಸುತಿದ್ದರು. ಹಾಗಾಗಿ ಇಲ್ಲಿಯ ವಿಳಾಸ ನೀಡಿ ಆಧಾರ್ ಕಾರ್ಡ್ ಕೂಡ ಮಾಡಿಸಿಕೊಂಡಿದ್ದರು. ಈ ಅಧಾರ್ ಕಾರ್ಡ್ ನ್ನು ವಿಳಾಸ ದಾಖಲೆಯಾಗಿ ನೀಡಿ ಚಾರ್ವಾಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದಲ್ಲಿ ಚಿನ್ನ ಅಡವಿಟ್ಟು ಸಾಲ ಪಡೆದಿದ್ದರು. ಕೃತ್ಯ ಕ್ಕೆ ಬಳಸಿದ ಚಾಕು ತಲುವಾರು ಇತ್ಯಾದಿ ಮಾರಾಕ ಯುದ್ದಗಳನ್ನೂ ಇಲ್ಲಿಯೇ ಬಿಸಾಡಿರುವ ಮಾಹಿತಿಯನ್ನೂ ಆ ದರೋಡೆಕೋರರು ತಿಳಿಸಿದ್ದು, ಸಹಕಾರಿ ಸಂಘದ ಹಿಂಬದಿ ಆರೋಪಿಗಳು ಬಿಸಾಡಿರುವ ಮಾರಕಾಸ್ತ್ರಗಳು ಪತ್ತೆಯಾಗಿದೆ. ಸದ್ಯ ಅದರ ಮಹಜರು ನಡೆಯುತ್ತಿದೆ ಎಂಬ ಮಾಹಿತಿಯೂ ಲಭಿಸಿದೆ. ಅಡವಿಟ್ಟ ಚಿನ್ನಾಭರಣಗಳ ಪರಿಶೀಲನೆ ನಡೆಯುತ್ತಿದ್ದೂ ಒಟ್ಟು ಚಿನ್ನದ ಮೌಲ್ಯ ಇನ್ನಷ್ಟೇ ತಿಳಿದು ಬರಬೇಕಿದೆ.