Sunday, January 19, 2025
ಯಕ್ಷಗಾನ / ಕಲೆ

ಶೇಣಿ ಶತಕ ಸಂಭ್ರಮೋತ್ಸವ ;ಶೇಣಿ ಅಸಾಮಾನ್ಯ ಪ್ರತಿಭಾವಂತ, ವಾಗ್ವಿಲಾಸಿ – ಉಳಿಯ ವಿಷ್ಣು ಆಸ್ರ

ಕಾಸರಗೋಡು: ಕಲಾ ಕುಟುಂಬದ ಹಿರಿಯಜ್ಜ ಡಾ|ಶೇಣಿ ಗೋಪಾಲಕೃಷ್ಣ ಭಟ್‌ ಅಸಾಮಾನ್ಯ ಪ್ರತಿಭಾವಂತ, ವಾಗ್ವಿಲಾಸಿ. ಅವರ ಮಾತುಗಾರಿಕೆ ಒಂದು ಅಧ್ಯಯನದ ವಸ್ತುವಾಗಿದೆ. ಜಾನಪದ ಕಲೆಯಾಗಿದ್ದ ಯಕ್ಷಗಾನ ಇಂದು ಈ ಮಟ್ಟಕ್ಕೆ ಬೆಳೆದು ನಿಲ್ಲಬೇಕಾದರೆ ಹರಿದಾಸ ಶೇಣಿ ಅವರ ಕೊಡುಗೆ ಅಪ್ರತಿಮ ಎಂದು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರು ಹೇಳಿದರು.

ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಅಕಾಡೆಮಿ, ಕೇರಳ ಸರಕಾರದ ಭಾರತ್‌ ಭವನ್‌ ಹಾಗೂ ಕಾಸರಗೋಡಿನ ಶೇಣಿ ರಂಗಜಂಗಮ ಟ್ರಸ್ಟ್‌ ಆಶ್ರಯದಲ್ಲಿ ಯಕ್ಷ ದಿಗ್ಗಜ, ಹರಿದಾಸ್‌ ಡಾ| ಶೇಣಿ ಗೋಪಾಲಕೃಷ್ಣ ಭಟ್‌ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಕಾಸರಗೋಡು ನಗರಸಭಾ ಸಭಾಂಗಣದಲ್ಲಿ ಆಯೋಜಿಸಿದ “ಶೇಣಿ ಶತಕ ಸಂಭ್ರಮೋತ್ಸವ’ವನ್ನು  ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಯಕ್ಷಗಾನ ಕುಲಪತಿಯಾಗಿರುವ ಶೇಣಿ ಗೋಪಾಲಕೃಷ್ಣ ಭಟ್‌ ಅವರು ಹಲವು ಪ್ರತಿಭೆಗಳನ್ನು ರೂಪಿಸಿದವರು. ಶೇಣಿ ಅವರಂತೆ ಬೆಳೆಯಬೇಕೆಂದು ಪ್ರಯತ್ನಿಸಿದರೂ ಈ ವರೆಗೂ ಅವರ ಮಟ್ಟಕ್ಕೆ ಯಾರು ತಲುಪಿಲ್ಲ. ಶೇಣಿ ಅವರಿಗೆ ಶೇಣಿಯೇ ಸಾಟಿ. ಈಗ ಕೇರಳದಲ್ಲಿ ಯಕ್ಷಗಾನಕ್ಕೆ ಬಹಳಷ್ಟು ಮಹತ್ವವನ್ನು ನೀಡಲಾಗಿದೆ. ರಾಜ್ಯಮಟ್ಟದ ಶಾಲಾ, ಕಾಲೇಜು ಯಕ್ಷಗಾನ ಸ್ಪರ್ಧೆ ನಡೆಯುತ್ತಿದೆ. ಕಲೆಗೆ ಅದರದ್ದೇ ಆದ ನೈಜತೆ ಇದೆ. ಕನ್ನಡದಲ್ಲೇ ಯಕ್ಷಗಾನ ಇರಬೇಕು ಎಂಬ ಸಂಕಲ್ಪಕ್ಕೆ ಬರಲಾಗಿದೆ. ಇಂದು ಕೇರಳದ ಶಾಲಾ ಕಾಲೇಜುಗಳಲ್ಲಿ ಕನ್ನಡ ಕಲಿತು ಕನ್ನಡದಲ್ಲೇ ಯಕ್ಷಗಾನ ಸ್ಪರ್ಧೆಗೆ ಅಣಿಯಾಗುತ್ತಿದ್ದಾರೆ. ಅಂದರೆ ಯಕ್ಷಗಾನ ಕಲೆಯನ್ನು ಕೇರಳೀಯರು ಗೌರವಿಸುತ್ತಿದ್ದಾರೆ. ಅದ್ಭುತ ಕಲೆಯಾದ ಯಕ್ಷಗಾನ ಜನರಿಂದಲೇ ಬೆಳೆದಿದೆ. ಜಾನಪದ ಕಲೆ ಇಂದು ಉನ್ನತಿಗೆ ತರುವಲ್ಲಿ ಶೇಣಿ ಅವರ ಪಾತ್ರ ಹಿರಿದಾದುದು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಶೇಣಿ ಸ್ಮಾರಕ ಭವನ : ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ|ಎಂ.ಎ.ಹೆಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿ ಶೇಣಿ ಕಲ್ಪದ ಮಾತುಗಾರ, ಮನ್ವಂತರ ಎಂದು ಬಣ್ಣಿಸಿ ಅವರ ಅರ್ಥಗಾರಿಕೆ ಗ್ರಂಥ ರೂಪದಲ್ಲಿ ಪ್ರಕಟವಾಗಬೇಕಿತ್ತು. ಅದು ಅದ್ಭುತ ಸಾಹಿತ್ಯ ರಾಶಿ ಆಗುತ್ತಿತ್ತು.

ಮಹಾನ್‌ಮಾತುಗಾರರಾಗಿದ್ದ ಶೇಣಿ ಅವರು ಕನ್ನಡ ಸಾಹಿತ್ಯಕ್ಕೆ, ಸಂಸ್ಕೃತಿಗೆ ಸಾಕ್ಷಿಯಾಗಿದ್ದವರು. ಶೇಣಿ ಓಡಾಡಿದ, ಉಸಿರಾಡಿದ ಕಾಸರಗೋಡಿನ ಈ ಪುಣ್ಯ ನೆಲದಲ್ಲೇ ಇನ್ನೊಬ್ಬ ಶೇಣಿ ಹುಟ್ಟಿ ಬರಬೇಕು ಎಂಬ ಆಶಯವನ್ನು ಹೊತ್ತವನು ನಾನು. ಕಾಸರಗೋಡಿನಲ್ಲಿ ಕೇರಳ-ಕರ್ನಾಟಕ ರಾಜ್ಯಸರಕಾರಗಳ ಸಂಯುಕ್ತ ಆಶ್ರಯದಲ್ಲಿ ಶೇಣಿ ಸ್ಮಾರಕ ಭವನ ನಿರ್ಮಾಣವಾಗಬೇಕೆಂದರು.

ವಿದ್ವಾಂಸ ಡಾ| ಎಂ.ಪ್ರಭಾಕರ ಜೋಶಿ ಶೇಣಿ ಗೋಪಾಲಕೃಷ್ಣ ಭಟ್‌ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ ಶೇಣಿ ಹುಟ್ಟೂರು ಶೇಣಿಯಲ್ಲಿ ಶೇಣಿ ಸ್ತಂಭ ಮತ್ತು ವಿಗ್ರಹವನ್ನು ಪ್ರತಿಷ್ಠಾಪಿಸಬೇಕು. ಕಾಸರಗೋಡು ನಗರದಲ್ಲಿ ಅವರನ್ನು ಸದಾ ನೆನಪಿಸಲು ಯಾವುದಾದರೊಂದು ರಸ್ತೆಗೆ ಅವರ ಹೆಸರನ್ನು ನಾಮಕರಣ ಮಾಡಬೇಕೆಂದರು.

ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಜಬ್ಟಾರ್‌ ಸಮೋ ಸಂಪಾಜೆ, ದಾಮೋದರ ಶೆಟ್ಟಿ, ಭಾರತ್‌ ಭವನ್‌ ಕಾರ್ಯದರ್ಶಿ ಪ್ರಮೋದ್‌ ಪಯ್ಯನ್ನೂರು, ಸಾಂಸ್ಕೃತಿಕೋತ್ಸವ ಪ್ರಧಾನ ಸಂಚಾಲಕ ರವೀಂದ್ರನ್‌ ಕೊಡಕ್ಕಾಡ್‌, ಎ.ಜಿ.ನಾಯರ್‌, ಬಹುಭಾಷಾ ಸಾಂಸ್ಕೃತಿಕೋತ್ಸವ ಸಂಯೋಜಕ ಚಂದ್ರಪ್ರಕಾಶ್‌ ಮೊದಲಾದವರು ಉಪಸ್ಥಿತರಿದ್ದರು.ಶೇಣಿ ರಂಗ ಜಂಗಮ ಟ್ರಸ್ಟ್‌ ಸಂಚಾಲಕ ಶೇಣಿ ವೇಣುಗೋಪಾಲ ಪ್ರಾಸ್ತಾವಿಕ ನುಡಿದು ಸ್ವಾಗತಿಸಿದರು. ವಾಸುದೇವ ರಂಗ ಭಟ್‌ ಕಾರ್ಯಕ್ರಮ ನಿರೂಪಿಸಿದರು. ಉಮೇಶ್‌ ಸಾಲಿಯಾನ್‌ ವಂದಿಸಿದರು.

ಬಳಿಕ ಶೇಣಿ ದಶಮುಖ ದರ್ಶನ ವಿಚಾರ ಸಂಕಿರಣದಲ್ಲಿ ಡಾ| ಎಂ.ಪ್ರಭಾಕರ ಜೋಶಿ ಶಿಖರೋಪನ್ಯಾಸ ನೀಡಿದರು. ಹಿರಿಯ ಚಿಂತಕ ಲಕ್ಷ್ಮೀಶ ತೋಲ್ಪಾಡಿ(ಆಧ್ಯಾತ್ಮಿಕ ಶೇಣಿ), ಹರಿದಾಸ ಅಂಬಾತನಯ ಮುದ್ರಾಡಿ(ಹರಿದಾಸ ಶೇಣಿ), ಸೇರಾಜೆ ಸೀತಾರಾಮ ಭಟ್‌(ಶೇಣಿ ವೇಷಾಭಿವ್ಯಕ್ತಿ), ಡಾ| ಜಿ.ಎಲ್‌ ಹೆಗಡೆ(ಶೇಣಿ ಅರ್ಥಾಭಿವ್ಯಕ್ತಿ), ಎಂ.ಕೆ.ರಮೇಶ ಆಚಾರ್ಯ(ಶೇಣಿ ಒಡನಾಟ) ವಿಷಯಗಳಲ್ಲಿ ಉಪನ್ಯಾಸ ನೀಡಿದರು. ಬಳಿಕ ಕನ್ನಡ ಯುವ ಬಳಗ ಕಾಸರಗೋಡು ತಂಡದಿಂದ ಯಕ್ಷಗಾನ ತಾಳಮದ್ದಳೆ, ಭಾರತ್‌ ಭವನ್‌ ಸಾಂಸ್ಕೃತಿಕೋತ್ಸವದ ಅಂಗವಾಗಿ ಬಹುಭಾಷಾ ಕವಿಗೋಷ್ಠಿ, ವಿವಿಧ ತಂಡಗಳಿಂದ ಸಾಂಸ್ಕೃತಿಕ ವೈವಿಧ್ಯತೆ ನಡೆಯಿತು.

ಇಂದಿನ ಕಾರ್ಯಕ್ರಮ
ಎ.8ರಂದು ಆದಿತ್ಯವಾರ ಕುತ್ಯಾಳ ಶ್ರೀ ಗೋಪಾಲಕೃಷ್ಣ ಕ್ಷೇತ್ರ ಸಭಾಂಗಣದಲ್ಲಿ ಬೆಳಗ್ಗೆ 10ಕ್ಕೆ ಶೇಣಿ ಪ್ರಸಂಗ ಗಾಯನ ಪ್ರಸ್ತುತಗೊಳ್ಳಲಿದ್ದು, ಭಾಗವತರಾದ ಪದ್ಯಾಣ ಗಣಪತಿ ಭಟ್‌, ಪುತ್ತಿಗೆ ರಘುರಾಮ ಹೊಳ್ಳ, ಚೆಂಡೆ-ಮದ್ದಳೆಯಲ್ಲಿ ಪದ್ಯಾಣ ಶಂಕರನಾರಾಯಣ ಭಟ್‌, ಅಡೂರು ಗಣೇಶ್‌ ರಾವ್‌, ಚಕ್ರತಾಳದಲ್ಲಿ ದಿವಾಣ ಶಿವಶಂಕರ ಭಟ್‌ ಭಾಗವಹಿಸುವರು. ನಾ.ಕಾರಂತ ಪೆರಾಜೆ ಕಾರ್ಯಕ್ರಮ ನಿರೂಪಿಸುವರು.

11.30ರಿಂದ ಶೇಣಿ ಪ್ರಸಂಗ ದರ್ಶನ ಎಂಬ ವಿಚಾರ ಸಂಕಿರಣದಲ್ಲಿ ಕಾಸರಗೊಡು ಸರಕಾರಿ ಕಾಲೇಜಿನ ಯಕ್ಷಗಾನ
ಅಧ್ಯಯನ ಕೇಂದ್ರದ ಸಂಯೋಜಕ ಡಾ| ರತ್ನಾಕರ ಮಲ್ಲಮೂಲೆ ಉಪನ್ಯಾಸ ನೀಡುವರು. ಕೇರಳ ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರದ ನಿಕಟಪೂರ್ವ ಅಧ್ಯಕ್ಷ ಜಯರಾಮ ಮಂಜತ್ತಾಯ ಎಡನೀರು ಅಧ್ಯಕ್ಷತೆ ವಹಿಸುವರು. ಕೇರಳ ತುಳು ಅಕಡೆಮಿ ಸದಸ್ಯ ಎಂ.ಉಮೇಶ ಸಾಲ್ಯಾನ್‌, ಶಂಕರ ರೈ ಮಾಸ್ತರ್‌ ಉಪಸ್ಥಿತರಿರುವರು. ಶೇಣಿ ವೇಣುಗೋಪಾಲ ಭಟ್‌ ನಿರೂಪಿಸುವರು. ಅಪರಾಹ್ನ 1.30ರಿಂದ ಯಕ್ಷಗಾನ ತಾಳಮದ್ದಳೆ ಕೃಷ್ಣ ಸಂಧಾನ ನಡೆಯಲಿದ್ದು, ಹಿಮ್ಮೇಳದಲ್ಲಿ ಕುರಿಯ ಗಣಪತಿ ಶಾಸ್ತ್ರೀ ಎಂ.ಲಕ್ಷ್ಮೀಶ  ಅಮ್ಮಣ್ಣಾಯ, ಬಿ.ಸೀತಾರಾಮ ತೋಲ್ಪಡಿತ್ತಾಯ ಭಾಗವಹಿಸುವರು. ಮುಮ್ಮೇಳದಲ್ಲಿ ಕುಂಬಳೆ ಸುಂದರ ರಾವ್‌, ಮೂಡಂಬೈಲು ಗೋಪಾಲಕೃಷ್ಣ  ಶಾಸ್ತಿÅ, ಡಾ| ಎಂ. ಪ್ರಭಾಕರ ಜೋಶಿ, ಡಾ| ರಮಾನಂದ ಬನಾರಿ, ವಿದ್ವಾನ್‌ ಉಮಾಕಾಂತ ಭಟ್‌ ಮೇಲುಕೋಟೆ, ರಾಜೇಂದ್ರ ಕಲ್ಲೂರಾಯ ಎಡನೀರು ಭಾಗವಹಿಸುವರು.

ಸಂಜೆ 4ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ|ಎಂ.ಎ.ಹೆಗಡೆ ವಹಿಸುವರು. ಕರ್ನಾಟಕ ಲೋಕಸೇವಾ ಆಯೋಗದ ಆಯುಕ್ತ ಡಾ| ಟಿ. ಶ್ಯಾಮ ಭಟ್‌ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಹಿರಿಯ ಪತ್ರಕರ್ತ ಎ.ಈಶ್ವರಯ್ಯ ಸಮಾರೋಪ ಭಾಷಣ ಮಡುವರು. ಕೂಡ್ಲು ಕ್ಷೇತ್ರದ ಮೊಕ್ತೇಸರ ಕೆ.ಜಿ.ಶ್ಯಾನುಭೋಗ್‌, ಧಾರ್ಮಿಕ ಮುಂದಾಳು ಕೆ.ಎನ್‌.ವೆಂಕಟರಮಣ ಹೊಳ್ಳ ಕಾಸರಗೋಡು ಉಪಸ್ಥಿತರಿರುವರು. ಬಳಿಕ ಬಾಲಯಕ್ಷಕೂಟ ಕದ್ರಿ ಇವರಿಂದ ಸುದರ್ಶನ ವಿಜಯ ಹಾಗೂ ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ನಾಟಕ ಸಭಾದವರಿಂದ ನರಕಾಸುರ ವಧೆ-ಗರುಡ ಗರ್ವಭಂಗ ಯಕ್ಷಗಾನ ಬಯಲಾಟ ಪ್ರದರ್ಶನ ಗೊಳ್ಳುವುದ ರೊಂದಿಗೆ ಸಮಾರಂಭ ಸಮಾರೋಪಗೊಳ್ಳಲಿದೆ.