Monday, January 20, 2025
ಪುತ್ತೂರು

ಪುತ್ತೂರಿನ ಅಂಬಿಕಾ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ,ಪ್ರಪಂಚಕ್ಕೆ ಭಾರತದ ಕೊಡುಗೆ ಸೊನ್ನೆ ಎಂಬುದು ತಮಾಷೆಯಲ್ಲ ; ಸತ್ಯಜಿತ್ ಉಪಾಧ್ಯಾಯ-ಕಹಳೆ ನ್ಯೂಸ್

ಪುತ್ತೂರು : ಪ್ರಪಂಚಕ್ಕೆ ಭಾರತದ ಕೊಡುಗೆ ಸೊನ್ನೆ ಎಂದು ತಮಾಷೆಯಾಗಿ ಹೇಳುವುದಿದೆ. ಆದರೆ ಆರ್ಯಭಟ ಸೊನ್ನೆಯನ್ನು ಕಂಡುಹಿಡಿಯದಿದ್ದರೆ ನಮ್ಮ ಬದುಕು ಈಗಿನ ಹಾಗಿರುತ್ತಿರಲಿಲ್ಲ. ಇಂತಹ ಅನೇಕ ಸಾಧನೆಗಳು ನಮ್ಮ ದೇಶದಲ್ಲಿ ವೇದಕಾಲದಲ್ಲಿಯೇ ಆಗಿದೆ ಎಂಬುದನ್ನು ಗಮನಿಸಬೇಕು. ಆದರೆ ನಮ್ಮ ದೇಶದ ಹಿರಿಮೆಯನ್ನು ಗುರುತಿಸುವಲ್ಲಿ ನಾವು ಎಡವುತ್ತಿದ್ದೇವೆ ಅನ್ನುವುದು ವಿಷಾದನೀಯ ಎಂದು ಪುತ್ತೂರಿನ ನೆಲ್ಲಿಕಟ್ಟೆಯಲ್ಲಿನ ಅಂಬಿಕಾ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಕಾಲೇಜಿನ ವಿಜ್ಞಾನ ವಿಭಾಗಗಳ ಆಶ್ರಯದಲ್ಲಿ ಬುಧವಾರ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸ್ವಾತಂತ್ರ್ಯಾನಂತರದ ಸುಮಾರು ಎರಡು ದಶಕಗಳ ಕಾಲ ಭಾರತೀಯ ವಿಜ್ಞಾನ ಬಹುವೇಗವಾಗಿ ಬೆಳವಣಿಗೆಯನ್ನು ಕಾಣದಿದ್ದರೂ 1969ರಲ್ಲಿ ಇಸ್ರೋ ಸ್ಥಾಪನೆಯಾದ ನಂತರ ನಮ್ಮ ವೈಜ್ಞಾನಿಕ ಕ್ಷೇತ್ರ ಗಮನಾರ್ಹವಾಗಿ ಅಭಿವೃದ್ಧಿಯಾಗುವುದಕ್ಕೆ ಸಾಧ್ಯವಾಯಿತು. ಬಾಹ್ಯಾಕಾಶಕ್ಕೆ ಉಪಗ್ರಹ ಉಡಾವಣೆ ಮಾಡುವುದಕ್ಕೆ ಅನ್ಯ ದೇಶಗಳ ಸಹಾಯ ಕೇಳುತ್ತಿದ್ದ ಭಾರತ ಒಂದೇ ಸಲಕ್ಕೆ ನೂರಾ ನಾಲ್ಕು ಉಪಗ್ರಹಗಳನ್ನು ಸ್ವಯಂನಿರ್ಮಿತ ಯಂತ್ರದ ಮೂಲಕ ಉಡಾವಣೆ ಮಾಡುವ ಹಂತಕ್ಕೆ ಬಂದು ಪ್ರಪಂಚದ ಮುಂದೆ ತನ್ನ ಶ್ರೇಷ್ಟತೆಯನ್ನು ಸಾರಿದೆ. ಇದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ ಎಂದರು. ಅಮೇರಿಕಾ ಮಂಗಳಯಾನ ಕೈಗೊಳ್ಳುವುದಕ್ಕೆ ಬಳಸಿಕೊಂಡ ಮೊತ್ತದ ಒಂಬತ್ತನೇ ಒಂದು ಭಾಗದಷ್ಟೇ ಮೊತ್ತದಲ್ಲಿ ಭಾರತದ ವಿಜ್ಞಾನಿಗಳು ಮಂಗಳಯಾನ ಕೈಗೊಂಡಿದ್ದಾರೆ. ಭೂಮಿಯಿಂದ ಮಂಗಳನೆಡೆಗಿನ ಚಲನೆಗೆ ಕಿಲೋಮೀಟರಿಗೆ ಕೇವಲ ಆರು ರೂಪಾಯಿಗಳಷ್ಟೇ ವೆಚ್ಚವಾಗಿದೆ. ಮಾಮೂಲಿ ವಾಹನಗಳಿಗಿಂತಲೂ ಕಡಿಮೆ ವೆಚ್ಚದಲ್ಲಿ ಮಂಗಳಯಾನ ಕೈಗೊಂಡ ಏಕೈಕ ರಾಷ್ಟ್ರ ನಮ್ಮದು ಎಂದರಲ್ಲದೆ ಭಾರತದಲ್ಲಿ ವೈಜ್ಞಾನಿಕ ಸಾಧನೆಗಳು ಪುರಾತನ ಕಾಲದಿಂದಲೇ ಇದ್ದಿರುವುದನ್ನು ಗಮನಿಸಬೇಕು. ಸುಶ್ರುತ, ಆರ್ಯಭಟ, ವರಾಹಮಿಹಿರನಂತಹ ವಿಜ್ಞಾನಿಗಳು ಯಾವುದೇ ಉಪಕರಣಗಳಿಲ್ಲದ ಕಾಲದಲ್ಲಿ ನಿಖರವಾಗಿ ವೈಜ್ಞಾನಿಕ ಸಂಗತಿಗಳನ್ನು ಜಗತ್ತಿನ ಮುಂದೆ ತೆರೆದಿಟ್ಟಿದ್ದಾರೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಮಾತನಾಡಿ ಭಾರತದಲ್ಲಿ ಋಷಿ ಮುನಿಗಳ ಕಾಲದಲ್ಲೇ ವಿಜ್ಞಾನ ಪ್ರಬಲವಾಗಿ ಬೆಳೆದಿತ್ತು. ಆದರೆ ಅವರು ತಿಳಿಸಿದ ಸಂಗತಿಗಳನ್ನು ಅನುಷ್ಟಾನಕ್ಕೆ ತರುವಲ್ಲಿ ನಾವು ವಿಫಲರಾಗಿರುವುದರಿಂದ ನಮ್ಮವರು ಅದಾಗಲೇ ಹೇಳಿದ ಅನೇಕ ಸಂಗತಿಗಳನ್ನು ವಿದೇಶೀಯರು ಕಂಡುಹಿಡಿದಿದ್ದಾರೆಂಬ ಭಾವನೆಯನ್ನು ನಾವು ಹೊಂದುವಂತಾಗಿದೆ. ರಾಮಾಯಣದ ಸುಶೇಣನನ್ನು ಸೇತುವೆ ನಿರ್ಮಾಣದ ಇಂಜಿನಿಯರ್ ಎಂದೇ ಗುರುತಿಸಲಾಗುತ್ತದೆ. ಹಾಗೆಯೇ ದ್ರೌಪದಿ ಸ್ವಯಂವರದಲ್ಲಿ ಇಡಲಾಗಿದ್ದ ಮತ್ಸ್ಯ ಯಂತ್ರವೂ ವಿಜ್ಞಾನದಿಂದ ಸೃಷ್ಟಿಸಿದ ಸಂಗತಿಯೇ ಆಗಿತ್ತು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ನಟ್ಟೋಜ ಫೌಂಡೇಶನ್ ಟ್ರಸ್ಟ್‍ನ ಕೋಶಾಧಿಕಾರಿ ರಾಜಶ್ರೀ ನಟ್ಟೋಜ ಮಾತನಾಡಿ ನಾವು ನಮ್ಮ ಕಣ್ಣಿಗೆ ಕಾಣುವುದಷ್ಟೇ ಸತ್ಯ ಅಂದುಕೊಳ್ಳುತ್ತೇವೆ. ಆದರೆ ಅದರಾಚೆಗೂ ಅನೇಕ ಸಂಗತಿಗಳಿರುವುದನ್ನು ಗುರುತಿಸುವುದಿಲ್ಲ. ಶೂನ್ಯ ಅನ್ನುವುದು ಪೂರ್ಣತ್ವವೇ ಹೊರತು ಏನೂ ಇಲ್ಲ ಎಂದಲ್ಲ. ಎಲ್ಲಿ ವಿಜ್ಞಾನ ಕೊನೆಯಾಗುತ್ತದೆಯೋ ಅಲ್ಲಿ ತತ್ವಜ್ಞಾನ ಆರಂಭಗೊಳ್ಳುತ್ತದೆ. ವಿಜ್ಞಾನದೊಂದಿಗೆ ತತ್ವಜ್ಞಾನ ಸೇರಿಕೊಂಡಾಗ ಸದೃಢ ಸಮಾಜ ನಿರ್ಮಾಣವಾಗುತ್ತದೆ. ವಿಜ್ಞಾನಿಯಾದವನು ತತ್ವಜ್ಞಾನಿಯಾಗುವುದು ಅಗತ್ಯ ಎಂದರಲ್ಲದೆ ಅಂತಃಪ್ರಜ್ಞೆಯ ಕುರಿತಾದ ಅಧ್ಯಯನ ಇಂದು ಹೆಚ್ಚಿನ ಆದ್ಯತೆಯನ್ನು ಪಡೆಯುತ್ತಿದೆ ಎಂದು ಅಭಿಪ್ರಾಯಪಟ್ಟರು. ವೇದಿಕೆಯಲ್ಲಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಅಭಿಷೇಕ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸಮೀಕ್ಷಾ ಸ್ವಾಗತಿಸಿ, ಕೃಷ್ಣ ಕಿಶೋರ್ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ವರೇಣ್ಯಾ ವಂದಿಸಿದರು. ವಿದ್ಯಾರ್ಥಿ ಕಾರ್ತಿಕ್ ಕೆದಿಮಾರು ಕಾರ್ಯಕ್ರಮಮ ನಿರ್ವಹಿಸಿದರು.