1ರಿಂದ 5ನೇ ವರೆಗೂ ಪೂರ್ಣ ತರಗತಿ ಆರಂಭ ; ಅನುಮತಿ ಕೋರಿ ಸರ್ಕಾರಕ್ಕೆ ಪತ್ರ ಬರೆದ ಶಿಕ್ಷಣ ಇಲಾಖೆ-ಕಹಳೆ ನ್ಯೂಸ್
ಬೆಂಗಳೂರು : ರಾಜ್ಯದಲ್ಲಿ ಈಗಾಗಲೇ 6ರಿಂದ 10ನೇ ತರಗತಿ ಆರಂಭವಾಗಿದ್ದು, 1ರಿಂದ 5ನೇ ತರಗತಿಗಳನ್ನೂ ಪೂರ್ಣ ಪ್ರಮಾಣದಲ್ಲಿ ಆರಂಭಿಸಲು ಅನುಮತಿ ಕೋರಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸರಕಾರಕ್ಕೆ ಪತ್ರ ಬರೆಯಲಾಗಿದೆ.
ಸರಕಾರಿ ಶಾಲೆಯ 1ರಿಂದ 5ನೇ ತರಗತಿ ಮಕ್ಕಳಿಗೆ ನಲಿಯುತ್ತಾ ಕಲಿಯೋಣ ಎಂಬ ರೇಡಿಯೋ ಪಾಠ ಹೊರತುಪಡಿಸಿ ಬೇರೆ ಯಾವುದೇ ಬೋಧನೆ ಆಗುತ್ತಿಲ್ಲ. ಖಾಸಗಿ ಶಾಲೆಗಳು ಆನ್‍ಲೈನ್ ತರಗತಿ, ಪೂರ್ವ ಮುದ್ರಿತ ವೀಡಿಯೋ ತರಗತಿ ಇತ್ಯಾದಿಗಳನ್ನು ಮಾಡುತ್ತಿವೆ. ಸರಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಮೌಲ್ಯಮಾಪನ ಮತ್ತು ಪರೀಕ್ಷೆಗಳನ್ನು ನಿಯಮಿತವಾಗಿ ನಡೆಸಬೇಕಾಗಿರುವುದರಿಂದ ಪೂರ್ಣ ಪ್ರಮಾಣದಲ್ಲಿ ತರಗತಿ ನಡೆಸಲು ಅವಕಾಶ ಕಲ್ಪಿಸುವಂತೆ ಸರಕಾರಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಪತ್ರ ಬರೆದಿದೆ.