ಮೈಸೂರು : ರಮೇಶ್ ಜಾರಕಿಹೊಳಿ ಕೇಸ್ ಗೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೊಸ ಟ್ವಿಸ್ಟ್ ನೀಡಿದ್ದು, ರಮೇಶ್ ಜಾರಕಿಹೊಳಿ ಸಿಡಿಗೆ ಸಂಬಂಧಿಸಿದಂತೆ ಕಳೆದ 3 ತಿಂಗಳಿನಿಂದ ಡೀಲ್ ನಡೆದಿದೆ.
5 ಕೋಟಿ ರೂಪಾಯಿ ಡೀಲ್ ನಡೆದಿದ್ದು, ಈ ಕೇಸ್ ನಲ್ಲಿ ದೊಡ್ಡ ದೊಡ್ಡವರೇ ಇದ್ದಾರೆ ಎಂದು ಅವರು ಹೇಳಿದ್ದಾರೆ. ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿಯನ್ನು ಮಂತ್ರಿಸ್ಥಾನಕ್ಕೆ ರಾಜೀನಾಮೆ ಕೊಡಿಸುವುದು ಈ ಸಿಡಿಯ ಮುಖ್ಯ ಉದ್ದೇಶವಾಗಿತ್ತು. ಇದರಲ್ಲಿ ಅವರು ಸಫಲರಾಗಿದ್ದಾರೆ. ರಮೇಶ್ ಜಾರಕಿಹೊಳಿ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಯುವತಿ ಮತ್ತು ಈಗ ಮಂತ್ರಿಯಾಗಿರುವ ವ್ಯಕ್ತಿಗಳಿಬ್ಬರು ಸೇರಿಕೊಂಡು ಈ ವಿಡಿಯೋವನ್ನು ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಸಿಡಿ ಇದೆ ಎಂದು ವ್ಯಕ್ತಿಯೊಬ್ಬ ಬಹಿರಂಗವಾಗಿ ಹೇಳಿಕೆ ನೀಡಿದ್ದಾನೆ ಅವನನ್ನು ಮೊದಲು ಅರೆಸ್ಟ್ ಮಾಡಬೇಕು. ಆತ 4 ಸಿಡಿ ಇದೆ ಎಂದು ಹೇಳಿದ್ದಾನೆ. ಹಣಕ್ಕಾಗಿ ಇಂತಹ ಬ್ಲ್ಯಾಕ್ ಮೇಲ್ ಮಾಡುವವರು ಹೆಚ್ಚಾಗಿದ್ದಾರೆ. ಖಾಸಗಿ ಜೀವನವನ್ನು ಸಾರ್ವಜನಿಕವಾಗಿ ತರುವುದನ್ನು ಮಾಧ್ಯಮಗಳಲ್ಲಿ ನಾನು ನೋಡಿದ್ದೇನೆ. ಮೊದಲು ಅಂತವರನ್ನು ಬಂಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.