ಆರಸ್ಸೆಸ್ ಬಗ್ಗೆ ತಯಾರಾಗಲಿದೆ ಬಿಗ್ ಬಜೆಟ್ ಸಿನೆಮಾ!! ಹೀರೋ ಅಕ್ಷಯ್ ಕುಮಾರ್ ಆದರೆ ಚಿತ್ರಕಥೆ ಯಾರದ್ದು ಗೊತ್ತೆ? – ಕಹಳೆ ನ್ಯೂಸ್
ರಾಷ್ಟ್ರೀಯ ಸ್ವಯಂಸೇವಕ ಸಂಘ(RSS) ಜಗತ್ತಿನ ಅತಿ ದೊಡ್ಡ ಸ್ವಯಂಸೇವಾ ಸಂಘಟನೆಯೆಂದೇ ಕರೆಯಲ್ಪಡುತ್ತದೆ. ತನ್ನ ಸೇವಾ ಕಾರ್ಯಗಳಿಂದಲೇ ಕೋಟ್ಯಾಂತರ ಜನ ಸ್ವಯಂಸೇವಕರನ್ನ ಹೊಂದಿರುವ ಆರೆಸ್ಸೆಸ್ ದೇಶಕ್ಕೆ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಕೊಡುಗೆಯನ್ನ ನೀಡಿದೆ.
1925 ರಲ್ಲಿ ಕೇಶವ ಬಲಿರಾಮ್ ಹೆಡಗೆವಾರರಿಂದ ಸ್ಥಾಪಿತವಾದ ಆರೆಸ್ಸೆಸ್ ಈಗ ಇಡೀ ಜಗತ್ತಿನಾದ್ಯಂತ ತನ್ನ ಶಾಖೆಗಳನ್ನ ಹೊಂದಿದೆ. ಆರಸ್ಸೆಸ್ ಎಂದರೆ ದೇಶಭಕ್ತಿ, ರಾಷ್ಟ್ರಭಕ್ತಿ, ಹಿಂದುತ್ವದ ಬಗ್ಗೆ ಅಪಾರ ಕಾಳಜಿಯುಳ್ಳ ಹಾಗು ಸಾಮಾಜಿಕ ಸಂಘಟನೆಯೆಂಬುದು ಪ್ರತಿಯೊಬ್ಬರಿಗೂ ಗೊತ್ತಿರುವ ವಿಷಯವೇ.
ಆರೆಸ್ಸೆಸ್ ಎಂದರೆ ಅದು ಕೇವಲ ಒಂದು ಸಂಘಟನೆಯಲ್ಲ, ಆ ಸಂಘಟನೆಯ ಅಡಿಯಲ್ಲಿ ಸುಮಾರು 40 ಕ್ಕೂ ಹೆಚ್ಚು ಸಂಘಟನೆಗಳು ಕಾರ್ಯ ನಿರ್ವಹಿಸುತ್ತಿದ್ದು ರೈತರ, ವಿದ್ಯಾರ್ಥಿಗಳ, ಸಾಧು ಸಂತರ, ಮತಾಂತರ ತಡೆ, ಆದಿವಾಸಿ ಕಲ್ಯಾಣ, ಮಹಿಳಾ ಸಬಲೀಕರಣ, ಧರ್ಮರಕ್ಷಣೆ, ರಾಜಕೀಯ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ಸಂಘಟನೆಗಳು ಆರೆಸ್ಸೆಸ್ ಅಡಿಯಲ್ಲಿ ದೇಶಕ್ಕಾಗಿ ಸಮಾಜಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುವಲ್ಲಿ ನಿರತವಾಗಿದೆ.
ನಮ್ಮ ದೇಶದ ಈಗಿನ ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಮೇತ ಹಲವಾರು ರಾಜ್ಯಗಳ ಮುಖ್ಯಮಂತ್ರಿಗಳನ್ನ ದೇಶಕ್ಕೆ ನೀಡಿದ ಕೀರ್ತಿ ಆರೆಸ್ಸೆಸ್ಸಿಗೆ ಸಲ್ಲಬೇಕು. ಹೌದು ಇವರೆಲ್ಲ ಆರೆಸ್ಸೆಸ್ಸಿನಲ್ಲಿ ಸ್ವಯಂಸೇವಕರಾಗಿ ದೇಶಕ್ಕೆ ದುಡಿದು ನಂತರ ರಾಜಕೀಯಕ್ಕೆ ಪದಾರ್ಪಣೆ ಮಾಡಿ ಇದೀಗ ರಾಜಕೀಯದ ಮೂಲಕ ದೇಶದ ಉನ್ನತಿಗಾಗಿ ಶ್ರಮಿಸುತ್ತಿದ್ದಾರೆ.
ಇದೀಗ ಇಂತಹ ರಾಷ್ಟ್ರ ಭಕ್ತ ಸಂಘಟನೆಯ ಕುರಿತಾಗಿ ಮೊದಲ ಬಾರಿಗೆ ಬಿಗ್ ಬಜೆಟ್ ಸಿನೆಮಾ ಒಂದು ಬರಲಿದೆ.
ಲಹರಿ ಆಡಿಯೋ ಸಂಸ್ಥೆ ಮಾಲೀಕರಾದ ತುಳಸಿರಾಮ ನಾಯ್ಡು (ಲಹರಿ ವೇಲು) ಅವರು ಆರ್‌ಎಸ್‌ಎಸ್ ಕುರಿತಾದ ಭಾರಿ ಬಜೆಟ್‌ನ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. 120 ರಿಂದ 180 ಕೋಟಿ ಬಜೆಟ್‌ನ ಈ ಚಿತ್ರಕ್ಕೆ ಕತೆ, ಚಿತ್ರಕತೆ ಬರೆಯುತ್ತಿರುವುದು ‘ಬಾಹುಬಲಿ’ ಖ್ಯಾತಿಯ ತೆಲುಗಿನ ಜನಪ್ರಿಯ ಸಿನಿಬರಹಗಾರ ಕೆವಿ ವಿಜಯೇಂದ್ರ ಪ್ರಸಾದ್!
ಹೌದು ಬಹುಭಾಷೆಗಳಲ್ಲಿ ನಿರ್ಮಾಣಗೊಳ್ಳಲಿರುವ ಈ ಚಿತ್ರ ಆರಂಭದಲ್ಲಿ ಹಿಂದಿ ಮತ್ತು ತೆಲುಗು ಭಾಷೆಯಲ್ಲಿ ನಿರ್ಮಾಣಗೊಳ್ಳಲಿದೆ. ‘ಲಹರಿ ವೇಲು’ ಎಂದೇ ಕರೆಯಲ್ಪಡುವ ತುಳಸೀರಾಮ ನಾಯ್ಡು ದೇಶದ ಎಲ್ಲಾ ಭಾಷೆಗಳಲ್ಲೂ ಈ ಚಿತ್ರಕ್ಕೆ ‘ಆರ್ ಎಸ್‌ಎಸ್’ ಎಂಬ ಹೆಸರನ್ನು ನೋಂದಾಯಿಸಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಸ್ಥೆಯ ಇತಿಹಾಸವನ್ನು ಕಮರ್ಷಿಯಲ್ ಶೈಲಿಯಲ್ಲಿ ತೆರೆಗೆ ತರುವ ಯೋಚನೆ ಅವರದ್ದು. ಚಿತ್ರಕ್ಕಾಗಿ ಸಂಘದ ಹಿರಿಯರ ಬಗ್ಗೆ ಈಗಿನ ಆರ್‌ಎಸ್‌ಎಸ್ ಮುಖಂಡರ ಬಳಿ ಮಾಹಿತಿ ಸಂಗ್ರಹಿಸಲಾಗಿದೆ. ಆರ್‌ಎಸ್‌ಎಸ್ ಮುಖ್ಯಸ್ಥರಾದ ಮೋಹನ್ ಭಾಗವತ್ ಹಾಗೂ ಗುರುಮೂರ್ತಿ ಅವರನ್ನು ಲಹರಿ ವೇಲು, ವಿಜಯೇಂದ್ರಪ್ರಸಾದ್ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಮಾಹಿತಿ ಸಂಗ್ರಹಣೆ ನಂತರ ಪ್ರಸಿದ್ಧ ನಿರ್ದೇಶಕ ರಾಜಮೌಳಿಯವರ ತಂದೆ ಕನ್ನಡಿಗರಾದ ಕೆವಿ ವಿಜಯೇಂದ್ರ ಪ್ರಸಾದ್ ಈ ಚಿತ್ರದ ಕತೆ, ಚಿತ್ರಕತೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಈ ಚಿತ್ರದ ತಾರಾಗಣವೂ ಭರ್ಜರಿಯಾಗಿಯೇ ಇರಲಿದೆ :
ಈಗಾಗಲೇ ಈ ಚಿತ್ರಕ್ಕೆ ಅಕ್ಷಯ್ ಕುಮಾರ್ ಅವರ ಜೊತೆ ಒಂದು ಸುತ್ತಿನ ಮಾತುಕತೆ ನಡೆದಿದೆ ಎನ್ನಲಾಗಿದೆ. ಪ್ರಸಿದ್ಧ ತಾರೆಯರನ್ನೇ ಆಯ್ಕೆ ಮಾಡುವ ಸೂಚನೆ ಇದೆ. ಹಿಂದಿ ಚಿತ್ರಕ್ಕೆ ಮುಂಬೈಯ ರಾಮ್ ಸಿಂಗ್ ಸಹ ನಿರ್ಮಾಪಕರು.
ರಾಷ್ಟ್ರಭಕ್ತ ಸಂಘಟನೆಯ ಕುರಿತಾದ ಚಿತ್ರಕ್ಕೆ ರಾಷ್ಟ್ರಭಕ್ತ ನಟನೆಂದೇ ಗುರುತಿಸಿಕೊಂಡಿರುವ ಹಾಗು ಸಮಾಜಕ್ಕಾಗಿ ಸೇನೆಗಾಗಿ ವಿಶಿಷ್ಟ ರೀತಿಯ ಸೇವಾ ಕೈಂಕರ್ಯದಲ್ಲಿ ತೊಡಗಿಸಿಕೊಂಡಿರುವ ಅಕ್ಷಯ್ ಕುಮಾರ್ ಈ ಚಿತ್ರದ ನಾಯಕನಟನಾಗಿ ಅಭಿನಯಿಸುತ್ತಿರುವುದು ಹಾಗು ಬಾಹುಬಲಿಯಂತಹ ಅದ್ಭುತ ಸಿನೆಮಾದ ಸ್ಕ್ರಿಪ್ಟ್ ಬರೆದಿದ್ದ ಕೆ.ವಿ.ವಿಜಯೇಂದ್ರ ಪ್ರಸಾದ್ ರವರು ಈ ಚಿತ್ರಕ್ಕೆ ಚಿತ್ರಕಥೆ ಬರೆಯುತ್ತಿದ್ದು ರಾಷ್ಟ್ರಭಕ್ತರು ಈ ಚಿತ್ರದ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ.