Sunday, November 24, 2024
ಪುತ್ತೂರು

ವೈಜ್ಞಾನಿಕ ಮನೋಭಾವನೆಯು ಜನ ಸಾಮಾನ್ಯನ ನೈಜ ಬದುಕಿನಲ್ಲಿಯೂ ಹಾಸುಹೊಕ್ಕಾಗಿರುತ್ತದೆ ; ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ – ಕಹಳೆನ್ಯೂಸ್

ಪುತ್ತೂರು : ಒಂದು ವಿಷಯದ ಕುರಿತು ಕೈಗೊಳ್ಳುವ ಕ್ರಮಬದ್ಧ ಅಧ್ಯಯನವನ್ನು ವಿಜ್ಞಾನ ಎನ್ನಬಹುದು. ವೈಜ್ಞಾನಿಕ ಮನೋಭಾವನೆಯು ಜನ ಸಾಮಾನ್ಯನ ನೈಜ ಬದುಕಿನಲ್ಲಿಯೂ ಹಾಸುಹೊಕ್ಕಾಗಿರುತ್ತದೆ ಎಂದು ಸಂತ ಫಿಲೋಮಿನಾ ಕಾಲೇಜಿನ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ದ.ಕ.ಜಿ.ಪ.ಹಿ.ಪ್ರಾ ಶಾಲೆ ಕೊಡಿಪಾಡಿಯ ವಿಜ್ಞಾನ ಸಂಘವು ಸಂತ ಫಿಲೋಮಿನಾ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ಸಹಭಾಗಿತ್ವದಲ್ಲಿ ಮಾರ್ಚ್4 ರಂದು ಆಯೋಜಿಸಿರುವ ‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ’ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಭಾಗವಹಿಸಿ, ಮಾತನಾಡಿದರು. ಥಾಮಸ್ ಆಲ್ವಾಎಡಿಸನ್ ಒಬ್ಬ ಸಾಮಾನ್ಯ ವಿದ್ಯಾರ್ಥಿಯಾಗಿದ್ದು, ಹೆಚ್ಚಿನ ಶಾಲಾ ಶಿಕ್ಷಣದಿಂದ ವಂಚಿತರಾಗಿದ್ದರೂ ತನ್ನ ತಾಯಿಯ ಮೂಲಕ ಪಡೆದ ಮೂಲ ಶಿಕ್ಷಣದಿಂದ ವೈಜ್ಞಾನಿಕ ಮನೋಭಾವನೆಯನ್ನು ವೃದ್ಧಿಸಿ, ವಿಜ್ಞಾನ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಯನ್ನು ಮಾಡಿರುತ್ತಾರೆ. ನಮ್ಮಲ್ಲಿರುವ ಧನಾತ್ಮಕ ವೈಜ್ಞಾನಿಕ ಮನೋಚಿಂತನೆಗಳು ಸಮಾಜದ ಬೆಳವಣಿಗೆಗೂ ಕಾರಣೀಭೂತವಾಗಿ ಪರಿಣಮಿಸುತ್ತವೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಇದರ ಬಿ.ಆರ್.ಪಿ. ಆಗಿರುವ ವಿಜಯಕುಮಾರ್ ಮಾತನಾಡಿ, ದೈನಂದಿನ ಜೀವನದಲ್ಲಿ ಆಗುವ ಬದಲಾವಣೆಗಳಲ್ಲಿ ಇರುವ ವೈಜ್ಞಾನಿಕ ಕಾರಣಗಳನ್ನು ತಿಳಿದು ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು. ಗೌರವ ಅತಿಥಿಗಳಾಗಿ ಭಾಗವಹಿಸಿದ ಸಂತ ಫಿಲೋಮಿನಾ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ಸಂಯೋಜಕಡಾ. ಇ ದೀಪಕ್ ಡಿ’ಸಿಲ್ವ ಮಾತನಾಡಿ, ‘ರಾಮನ್ ಪರಿಣಾಮ’ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು.

ಅಧ್ಯಕ್ಷತೆ ವಹಿಸಿದ ಶಾಲಾ ಎಸ್‍ಡಿಎಮ್‍ಸಿ ಅಧ್ಯಕ್ಷ ದಿನೇಶ್‍ಗೌಡ ಜಿ ಮಾತನಾಡಿ, ವಿದ್ಯಾರ್ಥಿಗಳು ಶಾಲೆಯಲ್ಲಿ ಹಮ್ಮಿಕೊಳ್ಳಲಾಗುವ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಪೂರ್ಣಪ್ರಮಾಣದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು. ಸಭಾ ಕಾರ್ಯಕ್ರಮದ ಬಳಿಕ ಸಂತ ಫಿಲೋಮಿನಾ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಗಳು ನಾನಾ ವಿಜ್ಞಾನ ಮಾದರಿಗಳಾದ ಅಟೋಮ್ಯಾಟಿಕ್‍ಕ್ಲೋತ್‍ರಿಟ್ರೀವಲ್, ಹೈಡ್ರಾಲಿಕ್ ಲಿಫ್ಟ್, ಅಟೋಮ್ಯಾಟಿಕ್ ಸ್ಟ್ರೀಟ್ ಲೈಟ್, ಅಟೋಮ್ಯಾಟಿಕ್ ಸ್ಟ್ರೀಟ್ ಲೈಟ್ ಯೂಸಿಂಗ್, ವಾಟರ್ ಲೆವೆಲ್‍ಇಂಡಿಕೇಟರ್, ಸೆಂಟ್ರಿಫ್ಯೂಗಲ್ ವಾಟರ್‍ಪಂಪ್, ವಾಟರ್‍ಕಲೆಕ್ಟಿಂಗ್ ಬೋಟ್ ಮೊದಲಾದವುಗಳನ್ನು ಪ್ರದರ್ಶಿಸಿ, ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಚಟುವಟಿಕೆಗಳನ್ನು ನಡೆಸಿಕೊಟ್ಟರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಾಲೆಯ ಮುಖ್ಯಗುರು ಸುಂದರಿ ಪಿ ಸ್ವಾಗತಿಸಿದರು. ಸಹ ಶಿಕ್ಷಕ ಸ್ಟ್ಯಾನಿ ಪ್ರವೀಣ್ ಮಸ್ಕರೇನ್ಹಸ್ ವಂದಿಸಿದರು. ಸಹ ಶಿಕ್ಷಕಿ ವಿಜಯ ಕಾರ್ಯಕ್ರಮ ನಿರೂಪಿಸಿದರು.