ಪುತ್ತೂರು : ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕಲಿಸುತ್ತಿರುವ ಪತ್ರಿಕೋದ್ಯಮಕ್ಕೆ ಹಾಗೂ ವಾಸ್ತವವಾಗಿ ಚಾಲ್ತಿಯಲ್ಲಿರುವ ಪತ್ರಿಕೋದ್ಯಮಕ್ಕೆ ತುಂಬಾ ವ್ಯತ್ಯಾಸ ಇದೆ. ಪತ್ರಕರ್ತರಾದ ನಂತರ ಕಲಿಯುವ ವಿಷಯ ಬಹಳ ಇದೆ. ವಾಸ್ತವದ ಪತ್ರಿಕೋದ್ಯಮದ ಕಲಿಕೆಯು ಜೀವನದಲ್ಲಿ ತುಂಬಾ ಮುಖ್ಯವಾಗಿರುತ್ತದೆ ಎಂದು ವಿಜಯವಾಣಿಯ ಹಿರಿಯ ಪತ್ರಕರ್ತ ಪಿ. ಬಿ. ಹರೀಶ್‍ರೈ ಹೇಳಿದರು.
ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಕರ್ನಾಟಕ ನಾಟಕ ಅಕಾಡಮಿ ಬೆಂಗಳೂರು, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಹಾಗೂ ಐಕ್ಯೂಎಸಿ ಘಟಕದ ಸಹಯೋಗದಲ್ಲಿ ನಡೆದ ‘ಒಂದು ದಿನದ ರಂಗ ವಿಮರ್ಶಾಕಮ್ಮಟ’ ಪ್ರಯುಕ್ತ ನಡೆದ ಗೋಷ್ಟಿಯಲ್ಲಿ ‘ರಂಗಾವಲೋಕನ’ ಎಂಬ ವಿಷಯದ ಕುರಿತು ಶುಕ್ರವಾರ ಅವರು ವಿಚಾರ ಮಂಡಿಸಿದರು. ನಾಟಕದ ಬಗ್ಗೆ ವಸ್ತುನಿಷ್ಠ ವಿಮರ್ಶೆಗಳು ಇಂದು ಸಿಗುತ್ತಿಲ್ಲ. ವೇಗದ ಜಗತ್ತಿನಲ್ಲಿ ಓದುವ ವ್ಯವಧಾನ ಯಾರಿಗೂ ಇಲ್ಲ. ಇದರಿಂದಾಗಿ ಪುರವಾಣಿಗಳ ಸಂಖ್ಯೆಗಳು ಕಡಿಮೆಯಾಗಿದ್ದು, ನಾಟಕ ವಿಮರ್ಶೆಗಳು ಕೂಡ ಕಡಿಮೆಯಾಗಿದೆ. ಇಂದಿನ ಯುವಜನತೆಗೆ ಸಿನೆಮಾದ ಕಡೆಗೆ ಒಲವು ಹೆಚ್ಚಾಗಿರುವುದರಿಂದ ಸಿನಿವಾರ್ತೆಗಳನ್ನೇ ಹೆಚ್ಚಾಗಿ ಪ್ರಕಟಿಸಬೇಕಾದ ಸಂಗತಿ ಎದುರಾಗಿದೆ. ಶಾಲೆಗಳಲ್ಲಿ ರಂಗ ಶಿಬಿರಗಳನ್ನು ಮಾಡುವ ಮೂಲಕ ಮಕ್ಕಳಲ್ಲಿ ನಾಟಕಾಸಕ್ತಿಯನ್ನು ಬೆಳೆಸಬಹುದು. ನಾಟಕ ಎನ್ನುವುದು ಖುಷಿ ಕೊಡುವ ಕಲೆ. ಕೆಲವೊಂದು ನಾಟಕಗಳು ಜನರಿಗೆ ಬದುಕಿನ ಪಾಠಗಳನ್ನು ಹೇಳಿಕೊಡುತ್ತದೆ. ಆದರೆ ಇಂದು ಸ್ಥಳೀಯ ಭಾಷೆಗಳಲ್ಲಿ ಹಾಸ್ಯ ನಾಟಕಗಳು ಪ್ರಸಿದ್ಧಿ ಪಡೆದು ನಾಟಕದ ಸ್ವರೂಪಗಳು ಬದಲಾಗಿ ಬಿಟ್ಟಿವೆ. ನವ್ಯ ನಾಟಕಗಳಿಗೆ ಯಾವುದೇ ರೀತಿಯ ಕಟ್ಟಳೆಗಳಿಲ್ಲ. ಈ ಕಾರಣದಿಂದ ದೇಶದ ಕಾನೂನು-ಆಚರಣೆಗಳನ್ನು ಅವಹೇಳನ ಮಾಡುವಂತಹ ನಾಟಕಗಳು ಪ್ರದಶನಗೊಳ್ಳುತ್ತಿರುವ ಚಟುವಟಿಕೆಗಳು ಕಂಡುಬರುತ್ತಿದೆ. ಇಂತಹ ನಾಟಕಗಳು ಸಮಾಜದ ಮೇಲೆ ವ್ಯತಿರಿಕ್ತ ಪ್ರಭಾವವನ್ನು ಬೀರುತ್ತಿವೆ. ಇದರಿಂದ ಜನರು ನಾಟಕದಿಂದ ದೂರ ಸರಿಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಾಟಕದ ಬೆಳವಣಿಗೆ ಕುಂಠಿತಗೊಳುತ್ತಿದ್ದು, ಮತ್ತೆ ಎದ್ದು ನಿಲ್ಲುವಂತೆ ಮಾಡಬೇಕಾಗಿದೆ. ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಭವ್ಯ ಪಿ.ಆರ್ ನಿಡ್ಪಳ್ಳಿ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು ದ್ವಿತೀಯ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿನಿ ಪವಿತ್ರ ಭಟ್ ಕಾರ್ಯಕ್ರಮ ನಿರ್ವಹಿಸಿದರು.