ಶ್ರೀ ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಕೋಟ್ಯಾಂತರ ಸಂಪತ್ತಿನ ಲೂಟಿ ! ಈ ಕುರಿತು ಬೆಂಗಳೂರು ಹಾಗೂ ಉಡುಪಿಯಲ್ಲಿ ಪತ್ರಿಕಾಗೋಷ್ಠಿ !-ಕಹಳೆ ನ್ಯೂಸ್
ಬೆಂಗಳೂರು : ಭಕ್ತರು ಶ್ರದ್ಧೆಯಿಂದ ಅರ್ಪಿಸಿದ ದಾನದ ವಿನಿಯೋಗವು ಭ್ರಷ್ಟ ಅಧಿಕಾರಿಗಳ ಕಿಸೆಗೆ ಹೋಗುತ್ತಿದ್ದರೆ, ಭಕ್ತರು ದೇವಸ್ಥಾನಗಳಿಗೆ ಏಕೆ ದಾನ ನೀಡಬೇಕು ? ಶ್ರೀ ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿಯ ಸರಕಾರಿ ಅಧಿಕಾರಿಯು ಕೋಟ್ಯಂತರ ಮೌಲ್ಯದ ಸಂಪತ್ತು ಲೂಟಿ ಮಾಡಿರುವುದು ಮಾಹಿತಿ ಹಕ್ಕು ಅಧಿನಿಯಮದಿಂದ ಬಹಿರಂಗವಾಗಿದೆ. ಭಕ್ತರು ಅರ್ಪಿಸಿರುವ ಧನವು ದೇವನಿಧಿಯಾಗಿದ್ದು, ದೇವನಿಧಿಯನ್ನು ಲೂಟಿ ಮಾಡುವುದು ಮಹಾಪಾಪವಾಗಿದೆ.
ಈ ಮಹಾಪಾಪಿಗಳಿಗೆ ಶ್ರೀ ಮೂಕಾಂಬಿಕಾ ದೇವಿಯು ಖಂಡಿತವಾಗಿಯೂ ಶಿಕ್ಷೆ ಕೊಡುತ್ತಾಳೆ; ಆದರೆ ಈ ಅಧಿಕಾರಿಯ ಮೇಲೆ ಕಠಿಣ ಕ್ರಮ ಜರುಗಿಸಲು ಮತ್ತು ದೇವನಿಧಿಯನ್ನು ಲೂಟಿ ಮಾಡಲು ಸಾಧನವಾಗಿರುವ ‘ದೇವಸ್ಥಾನಗಳ ಸರಕಾರಿಕರಣವನ್ನು ತಕ್ಷಣವೇ ರದ್ದುಪಡಿಸಲು ಹೋರಾಡುವುದು ಪ್ರತಿಯೊಬ್ಬ ಭಕ್ತರ ಧರ್ಮಕರ್ತವ್ಯವಾಗಿದೆ. ಈ ಸರಕಾರಿ ಅಧಿಕಾರಿಗಳ ಮೇಲೆ ತಕ್ಷಣವೇ ಕ್ರಮವನ್ನು ಜರುಗಿಸದೇ ಇದ್ದರೆ ಇದರ ವಿರುದ್ಧ ರಾಜ್ಯವ್ಯಾಪಿ ಆಂದೋಲನವನ್ನು ಕೈಗೊಳ್ಳುವ ಎಚ್ಚರಿಕೆಯನ್ನು ನೀಡುತ್ತಾ, ಈ ಲೂಟಿಕೋರ ಮತ್ತು ಭ್ರಷ್ಟ ಆಡಳಿತ ವ್ಯವಸ್ಥೆಯ ವಿರುದ್ಧದ ಧರ್ಮದ ಹೋರಾಟದಲ್ಲಿ ಸಮಸ್ತ ಭಕ್ತರು ಭಾಗವಹಿಸಬೇಕು ಎಂದು ‘ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ಕರ್ನಾಟಕದ ವಕ್ತಾರರಾದ ಶ್ರೀ. ಗುರುಪ್ರಸಾದ ಗೌಡ ಇವರು ಕರೆ ನೀಡಿದ್ದಾರೆ. ಅವರು ಸರಕಾರೀಕರಣಗೊಂಡ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಬೃಹತ್ ಪ್ರಮಾಣದಲ್ಲಿ ನಡೆದಿರುವ ಹಗರಣಗಳು ಮತ್ತು ಆರ್ಥಿಕ ಅವ್ಯವಹಾರಗಳನ್ನು ಬಹಿರಂಗಪಡಿಸಲು ಉಡುಪಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಈ ಸಮಯದಲ್ಲಿ ಅವರೊಂದಿಗೆ ‘ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ಕರ್ನಾಟಕದ ಸದಸ್ಯರಾದ ಶ್ರೀ. ಮಧುಸೂದನ ಐಯ್ಯರ್, ಮಹಾರಾಷ್ಟ್ರ ಮಹಾಸಂಘದ ವಕ್ತಾರರಾದ ಶ್ರೀ. ಸುನೀಲ್ ಘನವಟ್ ಹಾಗೂ ಸದಸ್ಯರುಗಳಾದ ಶ್ರೀ. ಪ್ರಭಾಕರ ನಾಯಕ್, ಶ್ರೀ. ಶ್ರೀನಿವಾಸ ಮತ್ತು ಶ್ರೀ. ಚಂದ್ರ ಮೊಗೇರ ಇವರು ಹಾಗೆಯೇ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ಕರ್ನಾಟಕದ ರಾಜ್ಯ ಸಮನ್ವಯಕರಾದ ಶ್ರೀ. ಮೋಹನ ಗೌಡ, ವಕೀಲರಾದ ಶ್ರೀ. ಕಿರಣ ಬೆಟ್ಟದಾಪುರ, ಶ್ರೀರಾಮಸೇನೆಯ ರಾಜ್ಯ ಕಾರ್ಯದರ್ಶಿ ಶ್ರೀ. ಎಂ. ಎಸ್ ಹರೀಶ್, ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ಕರ್ನಾಟಕದ ಸದಸ್ಯರಾದ ಶ್ರೀ. ವಿಜಯಶೇಖರ, ಶ್ರೀ. ಪ್ರಣವ ಶರ್ಮಾ ಗುರೂಜಿ ಉಪಸ್ಥಿತರಿದ್ದರು. ಶ್ರೀ. ಗುರುಪ್ರಸಾದ ಗೌಡ ಇವರು ಈ ಸಮಯದಲ್ಲಿ ಮಾಹಿತಿ ಹಕ್ಕು ಅಧಿನಿಯಮದಲ್ಲಿ ದೊರಕಿದ ಕಾಗದಪತ್ರಗಳ ವಿವರವನ್ನು ಬಹಿರಂಗ ಪಡಿಸುತ್ತಾ ದೇವಸ್ಥಾನದ ಆಡಳಿತ ಮಂಡಳಿಯ ಭ್ರಷ್ಟಾಚಾರವನ್ನು ಬಯಲು ಮಾಡಿದರು. ಅವುಗಳ ಕೆಲವು ಉದಾಹರಣೆಗಳನ್ನು ಮುಂದೆ ನೀಡಲಾಗಿದೆ. ಅರ್ಪಣೆಯಲ್ಲಿ ದೊರಕಿದ ಬಂಗಾರ-ಬೆಳ್ಳಿಯ ಆಭರಣದ ನೋಂದಣಿಯನ್ನು ವ್ಯವಸ್ಥಿತವಾಗಿಟ್ಟು ನಿಯಮಿತವಾಗಿ ಪ್ರತ್ಯಕ್ಷ ಪರಿಶೀಲನೆ ಮಾಡಬೇಕು ಮತ್ತು ಕಾರ್ಯಕಾರಿ ಅಧಿಕಾರಿಯಿಂದ ಅದನ್ನು ದೃಢೀಕೃತಗೊಳಿಸಬೇಕು ಎನ್ನುವ ನಿಯಮವಿದ್ದರೂ ಉದ್ದೇಶಪೂರ್ವಕವಾಗಿ.. ದೇವಸ್ಥಾನದಲ್ಲಿ ದೇಣಿಗೆ ಸ್ವರೂಪದಲ್ಲಿ ದೊರೆತ ಬಂಗಾರ-ಬೆಳ್ಳಿಯ ಬೆಲೆಬಾಳುವ ಆಭರಣಗಳ ಬಗ್ಗೆ ನಿಯಮಾನುಸಾರ ನೋಂದಣಿ ಮಾಡಿಟ್ಟಿಲ್ಲ. ವರ್ಷ 2018-19ರ ವರೆಗೆ ಇಂತಹ ದೇಣಿಗೆ ಸ್ವೀಕರಿಸಿದ ಆಭರಣಗಳ ಪಟ್ಟಿಯನ್ನು ಸರಕಾರಿ ಲೆಕ್ಕಪರಿಶೋಧಕರಿಗೆ ಸಲ್ಲಿಸಿಲ್ಲ. 2016ನೇ ಇಸವಿಯಲ್ಲಿ ದೇವಿಯ 4.20 ಕಿಲೋ ಬಂಗಾರದ ಹಾರವನ್ನು ಅಧಿಕಾರಿಯು ಕದ್ದಿದ್ದನು ಮತ್ತು ಆ ಅಧಿಕಾರಿಯ ಮೇಲೆ ದೂರು ದಾಖಲಾಗಿ ಆತನ ಬಂಧನವೂ ಆಗಿತ್ತು. ಅಧಿಕಾರಿಗಳೇ ದೇವಿಯ ಬಂಗಾರವನ್ನು ಕಳ್ಳತನ ಮಾಡಿದರೆ ಇಂತಹ ಅಧಿಕಾರಿಗಳನ್ನು ಹೇಗೆ ನಂಬುವುದು ? ಮತ್ತು ಸುಳ್ಳು ಸಿಬ್ಬಂದಿಗಳನ್ನು ತೋರಿಸಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರವಾಗುತ್ತಿರುವುದು ಕಂಡು ಬರುತ್ತದೆ. ಅಧಿನಿಯಮಗಳ ಕಲಮ್ 13 ಅನುಸಾರ ದೇವಸ್ಥಾನದ ಸಿಬ್ಬಂದಿಗಳ ವಿವರಗಳ ಮಾಹಿತಿಯನ್ನಿಡಬೇಕೆಂಬ ನಿಯಮವಿದ್ದರೂ ಅವರ ‘ಕೆವೈಸಿ ವಿವರ, ಜನನ ದಿನಾಂಕ ಇತ್ಯಾದಿ ಪ್ರಾಥಮಿಕ ವಿವರಗಳು ಸಹ ದೇವಸ್ಥಾನದ ಅಧಿಕಾರಿಯ ಬಳಿ ಇಲ್ಲ. ಹಾಗೂ ದೇವಸ್ಥಾನದ ಸಿಬ್ಬಂದಿಗಳ ಭವಿಷ್ಯನಿಧಿಯನ್ನು ನೋಂದಾಯಿತ ಭವಿಷ್ಯನಿಧಿ ಆಯುಕ್ತರ ಬಳಿ ಜಮೆ ಮಾಡಿಲ್ಲ; ಈ ಕಾರಣದಿಂದ ಸಂಬಂಧಪಟ್ಟ ಸರಕಾರಿ ಅಧಿಕಾರಿಗಳ ಮೇಲೆ 7,46,355 ರೂಪಾಯಿಗಳ ದಂಡದ ಮೊತ್ತವನ್ನು ವಸೂಲು ಮಾಡಲಾಗಿದೆ. ಆದರೆ ಈ ದಂಡವನ್ನು ಸರಕಾರಿ ಅಧಿಕಾರಿಯ ಸಂಬಳದಿಂದ ವಸೂಲು ಮಾಡುವ ಬದಲು ಅದನ್ನು ಭಕ್ತರ ದೇಣಿಗೆಯಿಂದ ನೀಡಲಾಗಿದೆ. ಈ ವಿಷಯವನ್ನು ಮೇಲಿಂದ ಮೇಲೆ ಗಮನಕ್ಕೆ ತಂದರೂ ದೇವಸ್ಥಾನದ ಅಧಿಕಾರಿಯು ನಿರ್ಲಕ್ಷತೆ ವಹಿಸಿದರು. ಈ ಪ್ರಶ್ನೆ ಗಂಭೀರವಾಗಿದೆ, ಏಕೆಂದರೆ ದೇವಸ್ಥಾನದ ಬಹಳಷ್ಟು ಸಿಬ್ಬಂದಿಗಳು ತಾತ್ಕಾಲಿಕ ನೌಕರರಾಗಿದ್ದಾರೆ. ಇದನ್ನೆಲ್ಲ ಗಮನಿಸಿದರೆ ಸುಳ್ಳು ನೌಕರರ ಹೆಸರು ಮತ್ತು ಅವರ ಸಂಬಳವನ್ನು ತೋರಿಸಿ ಆ ಹಣವನ್ನು ಅಧಿಕಾರಿಯೇ ಕಬಳಿಸುತ್ತಿದ್ದಾರೆ. ಹಾಗೆಯೇ ದೊಡ್ಡ ಪ್ರಮಾಣದಲ್ಲಿ ಮುಂಗಡ ಮೊತ್ತ ವಿತರಣೆಯಾಗುತ್ತಿದ್ದು, ಅವುಗಳ ಮರುಪಾವತಿ ಅನೇಕ ದಿನಗಳಿಂದ ಬಾಕಿ ಉಳಿದಿದೆ. ಇದರಲ್ಲಿ.. 2004 ನೇ ಇಸವಿಯಲ್ಲಿ ಒಟ್ಟು 2.41 ಕೋಟಿ ರೂಪಾಯಿಗಳ ಮುಂಗಡ ಮೊತ್ತ ಬಾಕಿ ಉಳಿದಿದ್ದು ಅದು ಕಡಿಮೆಯಾಗುವುದರ ಬದಲಾಗಿ ಹೆಚ್ಚಳವಾಗಿ 2018-19 ನೇ ಇಸವಿಯಲ್ಲಿ ಅದು 2.83 ಕೋಟಿಗಳಷ್ಟಾಗಿದೆ. ಈ ಮೊತ್ತವನ್ನು ಯಾರಿಂದ ಮತ್ತು ಏತಕ್ಕಾಗಿ ವಸೂಲಾತಿ ಮಾಡಬೇಕಾಗಿದೆ, ಎನ್ನುವ ವಿವರಣೆ ದೇವಸ್ಥಾನದ ಆಡಳಿತ ಮಂಡಳಿಯ ಬಳಿಯಿಲ್ಲ. ಇದರ ಯಾವುದೇ ವಿವರಗಳನ್ನು ಲೆಕ್ಕಪರಿಶೋಧಕರಿಗೆ ತೋರಿಸುತ್ತಿಲ್ಲ ಅಥವಾ ಸೂಕ್ತವಾದ ಕಾಗದಪತ್ರಗಳೊಂದಿಗೆ ಯಾವುದೇ ಸ್ಪಷ್ಟೀಕರಣವನ್ನು ನೀಡಿಲ್ಲ. ನಿಯಮಾನುಸಾರ ಪರವಾನಗಿಯನ್ನು ಪಡೆಯದೇ ದೇವಸ್ಥಾನದ ಹಣದಿಂದ ಈ ಮುಂಗಡ ಮೊತ್ತವನ್ನು ನೀಡುವುದು ಕಾನೂನುಬಾಹಿರವಾಗಿದೆ. ಇದರಲ್ಲಿ ತೊಡಗಿಕೊಂಡಿರುವ ಎಲ್ಲ ಅಧಿಕಾರಿಗಳ ಇಲಾಖಾವಾರು ವಿಚಾರಣೆ ಕೈಗೊಳ್ಳುವುದು ಮತ್ತು ದೋಷಿಗಳ ಮೇಲೆ ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ. ಹಾಗೂ ಜಮೀನು ಮತ್ತು ದೇವಸ್ಥಾನದ ಇತರೆ ಆಸ್ತಿಪಾಸ್ತಿಗಳ ಸರಿಯಾದ ಮಾಹಿತಿ ನೋಂದಾಯಿಸಿಟ್ಟುಕೊಳ್ಳದಿರುವುದು ಅತ್ಯಂತ ಗಂಭೀರವಾದ ವಿಚಾರವಾಗಿದೆ. ಪರಿಣಾಮವಾಗಿ ಅನೇಕ ಜಮೀನುಗಳ ಮೇಲೆ ಅತಿಕ್ರಮಣಗಳಾಗಿವೆ. ದೇವಸ್ಥಾನದ ಆಸ್ತಿಪಾಸ್ತಿಯ ನೋಂದಣಿಯನ್ನು ಸರಿಯಾಗಿಡಲು ಸಾಧ್ಯವಿಲ್ಲದವರು ದೇವಸ್ಥಾನದ ಆಡಳಿತವನ್ನು ನೋಡಿಕೊಳ್ಳಲು ಅರ್ಹರೇ ? ಎನ್ನುವ ಪ್ರಶ್ನೆ ನಿರ್ಮಾಣವಾಗುತ್ತದೆ. ಮತ್ತು ಅನೇಕ ನಿಯಮಬಾಹಿರ ಆರ್ಥಿಕ ವ್ಯವಹಾರಗಳನ್ನು ಮಾಡಿರುವುದು ಕಂಡು ಬಂದಿದೆ. ಇದರ ಅಂಕಿ ಅಂಶಗಳು ನೂರಾರು ಕೋಟಿಗಳಷ್ಟು ಇರಬಹುದು. ಉದಾಹರಣೆ ಹೇಳುವುದಾದರೆ ದೇವಸ್ಥಾನದ ಆಡಳಿತ ಮಂಡಳಿಯು ಅನೇಕರಿಗೆ ಕಾನೂನುಬಾಹಿರವಾಗಿ ದೇಣಿಗೆಯನ್ನು ನೀಡಿದೆ. ಅಲ್ಲದೇ ಆ ದೇಣಿಗೆಯ ಪಾವತಿಗಳು ಕೂಡ ಇರುವುದಿಲ್ಲ. ದೇವಸ್ಥಾನದ ಆಡಳಿತ ಮಂಡಳಿಯು ವಿವಿಧ ರೀತಿಯ ಖರ್ಚುಗಳನ್ನು ಮಾಡಿದೆ; ಆದರೆ ಅವುಗಳ ಬಿಲ್ಲುಗಳನ್ನು ಅಥವಾ ವೋಚರ್‍ಗಳು ಲಭ್ಯವಿರುವುದಿಲ್ಲ. 2004-05 ನೇ ಇಸವಿಯಲ್ಲಿ ದೇವಸ್ಥಾನ ಆಡಳಿತ ಮಂಡಳಿಯು 1,45,094 ರೂಪಾಯಿಗಳಷ್ಟು ದೂರವಾಣಿ ಬಿಲ್ಲನ್ನು ಪಾವತಿಸಿದೆ. ಆದರೆ ಒಂದು ವರ್ಷದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯು ಇಷ್ಟು ಯಾವ ದೂರವಾಣಿ ಕರೆಯನ್ನು ಮಾಡಿದೆ? ಯಾವ ಉದ್ದೇಶದಿಂದ ಮಾಡಿದೆ ? ಖಂಡಿತವಾಗಿಯೂ ದೂರವಾಣಿ ಕರೆ ಮಾಡಲು ವಿನಿಯೋಗಿಸಲಾಗಿದೆಯೋ ಅಥವಾ ಇನ್ನಿತರ ಅವ್ಯವಹಾರಗಳಿಗಾ ? ಎನ್ನುವ ಪ್ರಶ್ನೆ ಮೂಡುತ್ತದೆ. ವರ್ಷ 2005 ರಿಂದ 2018 ರ ವರೆಗೆ ದೇವಸ್ಥಾನ ಆಡಳಿತ ಮಂಡಳಿಯು ವಿದ್ಯಾರ್ಥಿಗಳಿಗೆ ಶಾಲೆಯ ಸಮವಸ್ತ್ರಗಳಿಗಾಗಿ 53 ಲಕ್ಷ ರೂಪಾಯಿಗಳನ್ನು ಕೊಟ್ಟಿದೆ; ಆದರೆ ಇವುಗಳ ಯಾವುದೇ ಪಾವತಿ ಅಥವಾ ಪ್ರಮಾಣಪತ್ರಗಳು ಉಪಲಬ್ಧವಿಲ್ಲ. ವಾಸ್ತವದಲ್ಲಿ ವ್ಯವಸ್ಥಾಪನೆಯು ಯಾರಿಗೆ ದೇಣಿಗೆ ನೀಡಿದೆಯೋ ಅದರ ಯೋಗ್ಯ ವಿನಿಯೋಗವಾಗುತ್ತಿದೆಯೇ ಎಂದು ಪ್ರತ್ಯಕ್ಷ ನೋಡುವುದು ಅಪೇಕ್ಷಿತವಿದೆ. ಆದರೆ ಅವರು ಕಡಿಮೆಪಕ್ಷ ಅಗತ್ಯವಿರುವ ವಿಷಯಗಳನ್ನು ಮಾಡಿಲ್ಲ. 2011-12 ನೇ ಇಸವಿಯಲ್ಲಿ ದೇವಸ್ಥಾನ ಆಡಳಿತ ಮಂಡಳಿಯು ವಿಶ್ರಾಂತಿಗೃಹಗಳಿಗಾಗಿ 2,35,555 ಗಳ ಮೊತ್ತದ ಬಕೇಟು ಮತ್ತು ಕಸದ ಡಬ್ಬಿಗಳನ್ನು ಖರೀದಿಸಿದೆ. ಇಷ್ಟು ಬಕೇಟು ಮತ್ತು ಕಸದ ಡಬ್ಬಿಗಳನ್ನು ಖರೀದಿಸಿದ್ದರೆ, ಅವುಗಳ ಪಾವತಿ, ದರಪಟ್ಟಿ ಇತ್ಯಾದಿ ಯಾವುದೂ ಉಪಲಬ್ಧವಿಲ್ಲ. 2018 ನೇ ಇಸವಿಯಲ್ಲಿ ಜಿಲ್ಲಾಧಿಕಾರಿಗಳ ನಿವಾಸದ 23,363 ರೂಪಾಯಿಗಳ ದೂರವಾಣಿ ಬಿಲ್ಲು, ಅಲ್ಲದೇ ಪಾಲಿಕೆಯ ಕೆಲವು ಸಿಬ್ಬಂದಿಗಳ ಸಂಬಳವನ್ನು ಸಹ ಮಂದಿರದ ನಿಧಿಯಿಂದ ನೀಡಲಾಗಿದೆ. ಹೀಗೇಕೆ? ಸರಕಾರದ ಬಳಿ ಇದಕ್ಕಾಗಿ ನಿಧಿ ಉಪಲಬ್ಧವಿರಲಿಲ್ಲವೇ? ಅಥವಾ ಇದರಲ್ಲಿಯೂ ಭ್ರಷ್ಟಾಚಾರ ನಡೆದಿದೆಯೇ ? ಈ ಪ್ರಶ್ನೆಗಳಿಗೆ ಉತ್ತರಗಳನ್ನು ದೇವಸ್ಥಾನ ಆಡಳಿತ ಮಂಡಳಿಯ ಸಮಿತಿಯ ವತಿಯಿಂದ ಪಡೆಯುವ ಅವಶ್ಯಕತೆಯಿದೆ. ಹಾಗೇ ದೇವಸ್ಥಾನದ ವಿಶ್ರಾಂತಿಗೃಹದಿಂದ 31.3.2018 ರ ವರೆಗೆ 21,52,000 ಗಳಿಗಿಂತ ಅಧಿಕ ರೂಪಾಯಿ ಬಾಕಿ ಬರಬೇಕಾಗಿದೆ. ಮತ್ತು ಲೆಕ್ಕಪರಿಶೋಧಕರು ದೇವಸ್ಥಾನದ ವ್ಯವಹಾರದಲ್ಲಿ 21.80 ಕೋಟಿ ರೂಪಾಯಿಗಳ ಆರ್ಥಿಕ ವ್ಯವಹಾರ ಸಂಶಯಾಸ್ಪದವಾಗಿದೆ, ಅಲ್ಲದೇ ದೇವಸ್ಥಾನದ ಆಡಳಿತ ಮಂಡಳಿಯು 84.96 ಲಕ್ಷ ರೂಪಾಯಿಗಳ ಬಾಕಿ ವಸೂಲಾತಿ ಮಾಡಬೇಕು ಎಂದು ತಿಳಿಸಿದೆ. ಶ್ರೀ. ಗುರುಪ್ರಸಾದ ಗೌಡ ಇವರು ಈ ಪತ್ರಿಕಾಗೋಷ್ಠಿಯಲ್ಲಿ ಶ್ರೀ ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿಯ ವ್ಯವಹಾರಗಳನ್ನು ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ದೊರಕಿದ ಕಾಗದಪತ್ರಗಳ ಆಧಾರದಲ್ಲಿ ಬಹಿರಂಗಗೊಳಿಸಿದರು. 2018-19 ರ ‘ಕಾಗ್ ವರದಿಗನುಸಾರ ಕರ್ನಾಟಕ ಸರಕಾರವು 140 ಕಂಪನಿಗಳು, ಸಹಕಾರಿ ಸಂಸ್ಥೆಗಳು ಮತ್ತು ಗ್ರಾಮೀಣ ಬ್ಯಾಂಕುಗಳಲ್ಲಿ 66,518 ಕೋಟಿಗಳಷ್ಟು ಮೊತ್ತವನ್ನು ಹೂಡಿಕೆ ಮಾಡಿದ್ದರೂ ಅದರಲ್ಲಿ ಸರಕಾರಕ್ಕೆ ಶೇ. 0.06 ಅಂದರೆ ಕೇವಲ 38 ಕೋಟಿಯಷ್ಟು ಲಾಭವಾಗಿದೆ. ಕೈತುಂಬ ಸಂಬಳ ಪಡೆದರೂ ಸರಕಾರಿ ಐಎಎಸ್ ಅಧಿಕಾರಿಗಳು ಸರಕಾರಕ್ಕೆ ಹಾನಿ ಮಾಡುತ್ತಿದ್ದರೆ, ಈ ಅಧಿಕಾರಿ ದೇವಸ್ಥಾನದ ಆಡಳಿತವನ್ನು ಎಂದಾದರೂ ಸರಿಯಾಗಿ ನೋಡಿಕೊಳ್ಳುವರೇ? ಈ ಒಂದು ದೇವಸ್ಥಾನದ ಆಡಳಿತ ಮಂಡಳಿಯ ವ್ಯವಹಾರದಿಂದ ಇದು ಸ್ಪಷ್ಟವಾಗಿದೆ. ಇದರಿಂದ ಸರಕಾರಿಕರಣಗೊಳಿಸಿದ ಎಲ್ಲ ದೇವಸ್ಥಾನಗಳನ್ನು ಸರಕಾರಿಕರಣದಿಂದ ಮುಕ್ತಗೊಳಿಸಿರಿ ಎಂದು ನಾವು ಕೋರುತ್ತಿದ್ದೇವೆ ಎಂದೂ ಶ್ರೀ. ಗುರುಪ್ರಸಾದ ಗೌಡ ಇವರು ಈ ಸಂದರ್ಭದಲ್ಲಿ ಹೇಳಿದರು. ಈ ಸಂದರ್ಭದಲ್ಲಿ ಶ್ರೀ. ಮಧುಸೂದನ ಐಯ್ಯರ್ ಹಾಗೂ ಶ್ರೀ. ಕಿರಣ ಬೆಟ್ಟದಾಪುರ ಇವರು ಮಾತನಾಡುತ್ತಾ, ರಾಜ್ಯದಲ್ಲಿರುವ ಮಹತ್ವದ ದೇವಸ್ಥಾನಗಳ ಪೈಕಿ ಒಂದಾಗಿರುವ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಈ ರೀತಿ ಆಗುತ್ತಿದ್ದರೆ, ಇತರೆ ದೇವಸ್ಥಾನಗಳ ಸರಕಾರಿ ಅಧಿಕಾರಿಗಳು ಏನು ಮಾಡುತ್ತಿರಬಹುದು, ಎಂದು ಕಲ್ಪನೆಯನ್ನು ಮಾಡದಿರುವುದೇ ಒಳ್ಳೆಯದು. ದೇವಸ್ಥಾನಗಳ ಸುವ್ಯವಸ್ಥಿತವಾದ ಆಡಳಿತ ಜರುಗಲು ನೇಮಿಸಿರುವ ಅಧಿಕಾರಿಯು ದೇವಸ್ಥಾನವನ್ನು ತನ್ನ ಖಾಸಗಿ ಸಂಪತ್ತು ಇರುವಂತೆ ಉಪಯೋಗಿಸುತ್ತಿದ್ದಾರೆ. ಅಲ್ಲದೇ ಕೇವಲ ಹಿಂದೂಗಳ ದೇವಸ್ಥಾನಗಳ ಸರಕಾರಿಕರಣವೇಕೆ ? ಮಸೀದಿ ಮತ್ತು ಚರ್ಚ್ ಇವುಗಳ ಸರಕಾರಿಕರಣವನ್ನು ಏಕೆ ಮಾಡುತ್ತಿಲ್ಲ? ಇದೇ ಸರಕಾರದ ಜಾತ್ಯತೀತವಾಗಿದೆಯೇ? ಎಂದು ಪ್ರಶ್ನಿಸುತ್ತಾ ನಾವು ಇದನ್ನು ಎಂದಿಗೂ ಸಹಿಸುವುದಿಲ್ಲ. ಇದರ ವಿರುದ್ಧ ರಸ್ತೆಗಿಳಿದು ಹೋರಾಟ ಮಾಡುವವರಿದ್ದೇವೆ ಎಂದೂ ಹೇಳಿದರು. ನಾವು ಮಾನ್ಯ ಮುಖ್ಯಮಂತ್ರಿಗಳು ಹಾಗೂ ಮಾನ್ಯ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿಯವರಿಗೆ ಈ ಪ್ರಕರಣದ ಸಂದರ್ಭದಲ್ಲಿ ಭೇಟಿಯಾಗುವವರಿದ್ದು ಶ್ರೀ ಮೂಕಾಂಬಿಕಾ ದೇವಸ್ಥಾನದ ದೇವನಿಧಿಯಲ್ಲಿ ಆಗುತ್ತಿರುವ ಭ್ರಷ್ಟಾಚಾರ ಮತ್ತು ಅವ್ಯವಹಾರಗಳ ಬಗ್ಗೆ ಗಮನಹರಿಸಿ ಕೂಡಲೇ ತನಿಖೆ ನಡೆಸಬೇಕು ಎಂದು ಆಗ್ರಹಿಸಲಿದ್ದೇವೆ. ದೇವನಿಧಿಯ ಒಂದೊಂದು ರೂಪಾಯಿಯೂ ವಸೂಲಾತಿ ಆಗುವವರೆಗೆ ಮತ್ತು ದೇವನಿಧಿಯನ್ನು ಲೂಟಿ ಮಾಡುವ ತಪ್ಪಿತಸ್ಥರಿಗೆ ಕಠೀಣ ಶಿಕ್ಷೆಯಾಗುವವರೆಗೆ ನಮ್ಮ ಸಂಘರ್ಷ ಮುಂದುವರಿಯಲಿದೆ ಎಂದೂ ಶ್ರೀ. ಗುರುಪ್ರಸಾದ ಗೌಡ ಇವರು ಈ ಸಂದರ್ಭದಲ್ಲಿ ಹೇಳಿದರು. ಈ ಸಮಯದಲ್ಲಿ ಮುಂದಿನ ಬೇಡಿಕೆಗಳನ್ನು ಕೂಡ ಮಾಡಲಾಯಿತು. ಈ ಲೆಕ್ಕ ಪರೀಕ್ಷಣೆಯ ಆಧಾರದಲ್ಲಿ ಈ ಪ್ರಕರಣದ ಮೂಲಕ್ಕೆ ಹೋಗಿ ತನಿಖೆ ಮಾಡಬೇಕು, ತನಿಖೆಯಲ್ಲಿ ಕಂಡುಬರುವ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಹಾಗೂ ಯಾರಲ್ಲಿ ದೇವಸ್ಥಾನದ ಬಾಕಿ ಮೊತ್ತ ಇದೆಯೋ ಅದನ್ನು ಸಂಬಂಧಪಟ್ಟವರಿಂದ ಕೂಡಲೇ ವಸೂಲಿ ಮಾಡಬೇಕು. ಅಲ್ಲಿಯ ವರೆಗೆ ದೇವಸ್ಥಾನದಲ್ಲಿರುವ ಎಲ್ಲ ವ್ಯವಹಾರಗಳಲ್ಲಿ ಪಾರದರ್ಶಕತೆ ನಿರ್ಮಾಣವಾಗಲು ದೇವಸ್ಥಾನದ ಎಲ್ಲ ವ್ಯವಹಾರಗಳ ಮಾಹಿತಿ ಮತ್ತು ಅವುಗಳ ವಿವರದ ನೋಂದಣಿಯನ್ನು ದೇವಸ್ಥಾನದ ಜಾಲತಾಣದಲ್ಲಿ ನಿಯಮಿತವಾಗಿ ಪ್ರಕಟಿಸಬೇಕು. ರಾಜ್ಯದ ಎಲ್ಲ ಸರಕಾರಿಕರಣಗೊಂಡ ದೇವಸ್ಥಾನಗಳನ್ನು ಸರಕಾರಿಕರಣದಿಂದ ಮುಕ್ತಗೊಳಿಸಿ ಭಕ್ತರ ವಶಕ್ಕೊಪ್ಪಿಸಬೇಕು. ಈಗಿನ ಸರಕಾರವು ಹಿಂದೂ ಹಿತರಕ್ಷಣೆಯ ಸರಕಾರವಾಗಿದೆಯೆಂದು ಹಿಂದೂ ಸಮಾಜದ ಭಾವನೆಯಾಗಿದೆ. ಆದುದರಿಂದ ದೇವಸ್ಥಾನ ಆಡಳಿತದ ವ್ಯವಹಾರದಲ್ಲಿ ಆಗುವ ಇಂತಹ ಅಹಿತಕರ ವಿಷÀಯಗಳನ್ನು ಗಂಭೀರವಾಗಿ ಪರಿಗಣಿಸಿ ಸಾಧ್ಯವಾದಷ್ಟು ಶೀಘ್ರವಾಗಿ ಈ ಕುರಿತು ಕ್ರಮ ವಹಿಸುವುದು ಎನ್ನುವ ಆಶಾಭಾವನೆಯನ್ನು ಶ್ರೀ. ಗುರುಪ್ರಸಾದ ಗೌಡ ಇವರು ವ್ಯಕ್ತಪಡಿಸಿದರು.