Monday, January 20, 2025
ಪುತ್ತೂರು

ಇತ್ತೀಚಿನ ದಿನಗಳಲ್ಲಿ ಲೈಂಗಿಕ ಕಿರುಕುಳ ಪ್ರಕರಣಗಳು ಅವ್ಯಾಹತವಾಗಿ ಹೆಚ್ಚುತ್ತಿದ್ದು, ಇದೊಂದು ಸಾಮಾಜಿಕ ಪಿಡುಗಾಗಿ ವಿಜೃಂಭಿಸುತ್ತಿದೆ ; ಡಾ.ಕೃತಿಶ್ರೀ-ಕಹಳೆ ನ್ಯೂಸ್

ಪುತ್ತೂರು : ಇತ್ತೀಚಿನ ದಿನಗಳಲ್ಲಿ ಲೈಂಗಿಕ ಕಿರುಕುಳ ಪ್ರಕರಣಗಳು ಅವ್ಯಾಹತವಾಗಿ ಹೆಚ್ಚುತ್ತಿದ್ದು, ಇದೊಂದು ಸಾಮಾಜಿಕ ಪಿಡುಗಾಗಿ ವಿಜೃಂಭಿಸುತ್ತಿದೆ ಎಂದು ಮಂಗಳೂರಿನ ಕಸ್ತುರ್ಬಾ ಮೆಡಿಕಲ್ ಆಸ್ಪತ್ರೆಯ ಮನೋರೋಗ ತಜ್ಞೆ ಡಾ.ಕೃತಿಶ್ರೀ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆಂತರಿಕ ದೂರು ಸಮಿತಿ ಮತ್ತು ಕುಂದುಕೊರತೆ ಪರಿಹಾರ ಕೋಶ ಇದರ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ವಿಶ್ವೇಶ್ವರಯ್ಯ ಸಭಾಭವನದಲ್ಲಿ ಲೈಂಗಿಕ ಕಿರುಕುಳ ಮತ್ತು ಮಾನಸಿಕ ಆರೋಗ್ಯ ಎನ್ನುವ ವಿಷಯದ ಕುರಿತು ಮಾತಾಡಿದರು. ಮಡಿವಂತಿಕೆಯ ನೆಪದಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣವನ್ನು ನೀಡದಿರುವುದರಿಂದ ಈ ಸಮಸ್ಯೆಗಳು ಹೆಚ್ಚಾಗುತ್ತಿದೆ ಎಂದರು. ಇಂಟರ್‌ನೆಟ್ ಹಾಗೂ ದೂರದರ್ಶನಗಳಲ್ಲಿ ಸಾಕಷ್ಟು ವಿಷಯಗಳು ಲಭ್ಯವಿದ್ದು ಮಕ್ಕಳು ಅದರ ಬಗ್ಗೆ ಪ್ರಯೋಗಕ್ಕೆ ಮುಂದಾಗುತ್ತಿರುವುದರಿಂದ ಸಾಮಾಜಿಕ ಸ್ವಾಸ್ಥ್ಯ ಕದಡುತ್ತಿದೆ ಎಂದರು. ಲೈಂಗಿಕ ಕಿರುಕುಳದಂತಹ ಸನ್ನಿವೇಶಗಳು ಎದುರಾದಾಗ ಅದನ್ನು ಸಮರ್ಥವಾಗಿ ಎದುರಿಸಬೇಕು ಮತ್ತು ಅದರ ವಿರುದ್ದ ದೂರು ದಾಖಲಿಸಬೇಕು ಕಾಲೇಜುಗಳಲ್ಲಿ ಅದಕ್ಕೆಂದೇ ಸಮಿತಿಗಳಿದ್ದು ಅದರ ಸಹಕಾರವನ್ನು ಪಡೆದುಕೊಳ್ಳಬೇಕು ಎಂದರು. ಸಮಾಜವನ್ನು ಎದುರಿಸಲಾಗದೆಯೋ, ಹೆದರಿಕೆಯಿಂದಲೋ ಹೆಚ್ಚಿನ ಸಂದರ್ಭಗಳಲ್ಲಿ ಇದನ್ನು ಮುಚ್ಚಿಡುವುದರಿಂದ ಖಿನ್ನತೆ, ಒತ್ತಡ ಮತ್ತು ಆತಂಕಗಳು ಪ್ರಾರಂಭವಾಗಿ ಮಾನಸಿಕ ಸಮತೋಲನವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ ಡಿ ಕಲ್ಲಾಜೆ ಮಾತನಾಡಿ ದೇಶದ ಭವ್ಯ ಸಾಂಸ್ಕೃತಿಕ ಚೌಕಟ್ಟನ್ನು ಅಭಿವೃದ್ದಿಯ ನೆಪದಲ್ಲಿ ಪಾಶ್ಚಾತ್ಯೀಕರಣಗೊಳಿಸಿದ್ದೇವೆ ಇದರ ಪರಿಣಾಮ ಸಾಮಾಜಿಕ ಪಿಡುಗುಗಳು ಹೆಚ್ಚಾಗುತ್ತಿವೆ ಎಂದರು. ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟು ಒಳ್ಳೆಯ ವಿಷಯಗಳಿವೆಯೋ ಅಷ್ಟೇ ಕೆಟ್ಟ ವಿಚಾರಗಳೂ ಇವೆ ಅವನ್ನು ಬಳಸುವಾಗ ನಮಗೆ ನಾವೇ ಸುರಕ್ಷಿತವಾದ ಚೌಕಟ್ಟನ್ನು ಹಾಕಿಕೊಳ್ಳಬೇಕಾದ್ದು ಅನಿವಾರ್ಯ ಎಂದರು. ನಮ್ಮ ಕಾಲೇಜು ಪರಿಸರ ಅತ್ಯಂತ ಸುರಕ್ಷಿತವಾಗಿದೆ ಈ ಶಿಸ್ತಿನ ಹಿಂದೆ ವಿದ್ಯಾರ್ಥಿಗಳ ಕೊಡುಗೆ ಅಪಾರವಾಗಿದೆ ಎಂದು ನುಡಿದರು. ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ ಕೆ., ಆಂತರಿಕ ದೂರು ಸಮಿತಿಯ ಮುಖ್ಯಸ್ಥೆ ಡಾ. ಸೌಮ್ಯ ಎನ್ ಜೆ., ಕಾರ್ಯಕ್ರಮ ಸಂಯೋಜಕಿ ಪ್ರೊ.ರೂಪಾ ಜಿ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ತೃಶಾ ಭಟ್ ಸ್ವಾಗತಿಸಿ, ತುಶಾರ್ ಆಳ್ವ ವಂದಿಸಿದರು. ಶ್ರೀಕೃಪಾ ಮತ್ತು ರಚನಾ ಕಾರ್ಯಕ್ರಮ ನಿರ್ವಹಿಸಿದರು.