ಮಾ.11ರಂದು ಉಪ್ಪಿನಂಗಡಿಯಲ್ಲಿ ಮಹಾಶಿವರಾತ್ರಿ ಮಖೆಕೂಟ ( ಮೂರನೇ ಮಖೆ ) ; ಕಹಳೆ ನ್ಯೂಸ್ ನಲ್ಲಿ ನೇರಪ್ರಸಾರ – LED ಮೂಲಕ ವೀಕ್ಷಣೆಗೆ ಅವಕಾಶ – ಕಹಳೆ ನ್ಯೂಸ್
ಉಪ್ಪಿನಂಗಡಿ: ಗಯಾಪದ ಕ್ಷೇತ್ರ, ದಕ್ಷಿಣಕಾಶಿ ಎಂದು ಕರೆಯಲ್ಪಡುವ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಲಯದಲ್ಲಿ ಮಾ.11ರಂದು ೩ನೇ ಮಹಾಶಿವರಾತ್ರಿ ಮಖೆ ಜಾತ್ರೆ ನಡೆಯಲಿದ್ದು, ನೇತ್ರಾವತಿ ನದಿ ಗರ್ಭದಲ್ಲಿರುವ ಉದ್ಭವ ಲಿಂಗಕ್ಕೆ ವಿಶೇಷ ಅಭಿಷೇಕ, ಪೂಜೆಗಳು ನೆರವೇರಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ ಮತ್ತು ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನದಿ ಗರ್ಭದಲ್ಲಿರುವ ಉದ್ಭವ ಲಿಂಗಕ್ಕೆ ಶಿವರಾತ್ರಿ ಪ್ರಯುಕ್ತ ಭಕ್ತಾದಿಗಳಿಗೆ ಸ್ವಯಂ ಅಭಿಷೇಕ ನೆರವೇರಿಸಲು ಅವಕಾಶ ಕಲ್ಪಿಸಲಾಗಿದೆ. ರಾತ್ರಿ ಉದ್ಭವಲಿಂಗದ ಬಳಿ ಅರ್ಘ್ಯ, ಶಿವಪೂಜೆ, ಬಳಿಕ “ರುದ್ರ ಪಾರಾಯಣ” ನಡೆಯಲಿದೆ. ಅದಾಗ್ಯೂ ರಾತ್ರಿ ಗಂಟೆ ೯-೦೦ರಿಂದ ಬಲಿ ಹೊರಟು ಉತ್ಸವ, ಮಹಾಪೂಜೆ ನಡೆಯಲಿದೆ.
ಧಾರ್ಮಿಕ ಸಭೆ:
ಈ ಮಧ್ಯೆ ರಾತ್ರಿ ಧಾರ್ಮಿಕ ಸಭೆಯನ್ನು ಆಯೋಜಿಸಲಾಗಿದ್ದು, ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಸೂರ್ಯನಾರಾಯಣ ಭಟ್ ಕಶೆಕೋಡಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ತದ ನಂತರ ರಾತ್ರಿ ಯಕ್ಷಸಂಗಮ ಉಪ್ಪಿನಂಗಡಿ ಇದರ ಪ್ರಾಯೋಜಕತ್ವದಲ್ಲಿ ಕುಮಾರ ವಿಜಯ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮಾ. ೧೨ರಂದು ಪ್ರಾತಃಕಾಲದಿಂದಲೇ ನೇತ್ರಾವತಿ ಕುಮರಾಧಾರ ನದಿ ಸಂಗಮ ಸ್ಥಳದಲ್ಲಿ ಪವಿತ್ರ ಮಖೆ ತೀರ್ಥ ಸ್ನಾನವು ನಡೆಯಲಿದ್ದು, ೬.೩೦ರಿಂದ ಬಲಿ ಹೊರಟು ಹಗಲು ರಥೋತ್ಸವ, ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಕಾಳಿ ಅಮ್ಮನವರ ನೇಮಕ್ಕೆ ಪಡಿಯಕ್ಕಿ ಕೊಡುವುದು, ಮಹಾಪೂಜೆ ನಡೆದು ಆ ಬಳಿಕ ಪ್ರಥಮ ದರ್ಜೆ ಪಿ.ಡಬ್ಲ್ಯು.ಡಿ. ಗುತ್ತಿಗೆದಾರ ಕೆ.ಆರ್. ನಾಕ್‌ರವರ ಸೇವಾರ್ಥ ಅನ್ನಸಂತರ್ಪಣೆ ಜರಗಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ ಮತ್ತು
ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ ನೀಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಹಳೆ ನ್ಯೂಸ್ ಯೂಟ್ಯೂಬ್ ಮತ್ತು ಫೇಸ್‌ಬುಕ್ ಮೂಲಕ ನೇರಪ್ರಸಾರ ನಡೆಯಲಿದೆ. ಸ್ಥಳದಲ್ಲಿ LED ಪರದೇ ಅಳವಡಿಸಿ ವೀಕ್ಷಣೆಗೆ ಅವಕಾಶ ಕಲ್ಪಿಸಿಲಾಗಿದೆ.