ಉಪ್ಪಿನಂಗಡಿ ಗ್ರಾಮ ಪಂಚಾಯಿತ್ ನಲ್ಲಿ ಗ್ರಾ.ಪಂ. ಅಧ್ಯಕ್ಷೆ ಉಷಾಚಂದ್ರ ಮುಳಿಯ ಅಧ್ಯಕ್ಷತೆಯಲ್ಲಿ ಮಹಿಳಾ ಗ್ರಾಮ ಸಭೆ – ಮಹಿಳಾ ದಿನಾಚರಣೆ ; ನಾಟಿ ವೈದ್ಯರಾದ ಚಿಕ್ಕಮ್ಮ ಮತ್ತು ಅವ್ವಮ್ಮರಿಗೆ ಸನ್ಮಾನ – ಕಹಳೆ ನ್ಯೂಸ್
ಉಪ್ಪಿನಂಗಡಿ: ಇಲ್ಲಿನ ಗ್ರಾಮ ಪಂಚಾಯಿತಿಯಲ್ಲಿ ಮಹಿಳಾ ಗ್ರಾಮ ಸಭೆ ಮತ್ತು ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್‍ಯಕ್ರಮ ಮಾ. ೧೦ರಂದು ಜರಗಿತು.
ಸಭೆಯಲ್ಲಿ ಉಪ್ಪಿನಂಗಡಿ ವನಿತಾ ಸಮಾಜದ ಗೌರವಾಧ್ಯಕ್ಷೆ ಶ್ರೀಮತಿ ಸುಭದ್ರಾ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿನ ಸ್ಥಾನ ದೊಡ್ಡದಾಗಿದ್ದು, ನಾವು ಅದನ್ನು ಪಡೆದುಕೊಳ್ಳುವಲ್ಲಿ ಅಸಕ್ತಲಾಗಬೇಕಾಗಿದೆ ಮತ್ತು ಆರ್ಥಿಕವಾಗಿ ಸಬಲೀಕರಣವಾಗಬೇಕು ಎಂದ ಅವರು ನಮ್ಮ ತಾಯಂದಿರು ತಮ್ಮ ಹೆಣ್ಣು ಮಕ್ಕಳನ್ನು ಶಿಕ್ಷಿತಳನ್ನಾಗಿ ಮಾಡಬೇಕು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಉಷಾ ಚಂದ್ರ ಮುಳಿಯ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯೆ ಡಾ| ಝರೀನಾ ಮಹಿಳೆ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶ್ರೀಮತಿ ಸುಜಾತ, ಪೊಲೀಸ್ ಸಿಬ್ಬಂದಿ ನಿವೇದಿತಾ ಸಂದರ್ಭೋಚಿತವಾಗಿ ಮಾತನಾಡಿ ಕಾರ್‍ಯಕ್ರಮದ ಬಗ್ಗೆ ಮೆಚ್ಚಗೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿನಾಯಕ ಪೈ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್, ಪಂಚಾಯಿತಿ ಸದಸ್ಯರುಗಳಾದ ಯು.ಟಿ. ತೌಸೀಫ್, ಉಷಾ ನಾಯ್ಕ್, ಶೋಭಾ, ವಿದ್ಯಾಲಕ್ಷ್ಮಿ ಪ್ರಭು, ರುಕ್ಮಿಣಿ, ವನಿತಾ, ಜಯಂತಿ, ಪೊಲೀಸ್ ಸಿಬ್ಬಂದಿ ಕವಿತಾ, ಪಂಚಾಯಿತಿ ಸಿಬ್ಬಂದಿ ಜ್ಯೋತಿ ಉಪಸ್ಥಿತರಿದ್ದರು.
ಸನ್ಮಾನ:
ಸಮಾರಂಭದಲ್ಲಿ ಉಪ್ಪಿನಂಗಡಿ ಕೂಟೇಲ್ ನಿವಾಸಿ, ನಾಟಿ ವೈದ್ಯೆ ಅವ್ವಮ್ಮ ಮತ್ತು ಮಠ ಕೊಪ್ಪಳ ನಿವಾಸಿ, ನಾಟಿ ವೈದ್ಯೆ ಚಿಕ್ಕಮ್ಮರವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಗ್ರಾಮ ಪಂಚಾಯಿತಿ ಕಾರ್‍ಯದರ್ಶಿ ಮರಿಯಮ್ಮ ಸ್ವಾಗತಿಸಿ, ಲೆಕ್ಕ ಸಹಾಯಕ ರವಿಚಂದ್ರ ವಂದಿಸಿದರು. ಅಂಗನವಾಡಿ ಕಾರ್‍ಯಕರ್ತೆ ಗುಣವತಿ ಕಾರ್‍ಯಕ್ರಮ ನಿರೂಪಿಸಿದರು.