Saturday, November 23, 2024
ಪುತ್ತೂರು

ಸರ್ವೆ ಸುಬ್ರಹ್ಮಣ್ಯೇಶ್ವರನಿಗೆ ದೇವಸ್ಥಾನ ಕಟ್ಟುವ ಸಂಭ್ರಮ ; ಪ್ರತಿದಿನ ಸಂಜೆ 6ರಿಂದ ರಾತ್ರಿ 9ರವರೆಗೆ ಶ್ರೀ ಸುಬ್ರಾಯನ ಅಂಗಳದಲ್ಲಿ ಬಿಡುವಿಲ್ಲದ ಶ್ರಮದಾನ-ಕಹಳೆ ನ್ಯೂಸ್

ಪುತ್ತೂರು : ಇಲ್ಲಿ ಎರಡು ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯ ಭರದಿಂದ ನಡೆಯುತ್ತಿದೆ. ಒಂದು ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ, ಮತ್ತೊಂದು ಎಲಿಯದ ಶ್ರೀ ವಿಷ್ಣುಮೂರ್ತಿ ದೇವರದ್ದು. ಈ ದೇವಸ್ಥಾನಗಳ ಮಧ್ಯೆ ಕೇವಲ 4 ಕಿ.ಮೀ. ಅಂತರವಷ್ಟೇ. ಎರಡೂ ಭಾಗದ ಜನ ಈಗ ಆಲಯ ಕಟ್ಟುವಲ್ಲಿ ಬ್ಯುಸಿ. ಈ ಪೈಕಿ ತುರ್ತಾಗಿ ಕಾಮಗಾರಿ ನಡೆಯುತ್ತಿರುವುದು ಸರ್ವೆ ಸುಬ್ರಹ್ಮಣ್ಯನ ದೇಗುಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಲ್ಲಿ ಮೇ 15ರಿಂದ 21 ವರೆಗೆ ಬ್ರಹ್ಮಕಲಶೋತ್ಸವ. ಪ್ರತಿದಿನ ಸಂಜೆ 6ರಿಂದ ರಾತ್ರಿ 9ರವರೆಗೆ ಶ್ರೀ ಸುಬ್ರಾಯನ ಅಂಗಳದಲ್ಲಿ ಬಿಡುವಿಲ್ಲದ ಶ್ರಮದಾನ. ಸಮಯದ ಸದುಪಯೋಗಕ್ಕೆ ಸಕಾಲ ಎಂದು ಮಕ್ಕಳು, ಮಹಿಳೆಯರು, ಯುವಕರು, ವೃದ್ಧರಿಂದ ಅಳಿಲ ಸೇವೆ. ಇಲ್ಲಿ ಯಾರು ಯಾವ ಪಕ್ಷಕ್ಕೆ ಸೇರಿದರು ಎಂಬ ಚರ್ಚೆ ಇಲ್ಲ. ಬಿಗ್ ಬಾಸ್ ನಲ್ಲಿ ಇವತ್ತು ಯಾರು ಹೊರಗೆ ಹೋಗುತ್ತಾರೆ ಎಂಬ ಚಿಂತೆ ಇಲ್ಲ, ಧಾರವಾಹಿಯ ಎಪಿಸೋಡ್ ತಪ್ಪಿತಲ್ಲ ಎಂಬ ಬೇಸರವಿಲ್ಲ. ಬಾರ್ ಗೆ ಹೋಗುವ, ಬೀಡಿ ಸಿಗರೇಟು ಸೇದುವ, ಜಾಲಿ ಮಾಡುವ ಗೊಡವೆಯೇ ಇಲ್ಲ. ಎಲ್ಲರ ಚಿತ್ತ ಗ್ರಾಮದ ಸುಂದರ ದೇವಸ್ಥಾನ ನಿರ್ಮಾಣದತ್ತ. ಪ್ರತಿಯೊಬ್ಬ ಭಕ್ತನಲ್ಲೂ ಬೇಗ ಕೆಲಸ ಮುಗಿದು ಸುಬ್ರಹ್ಮಣ್ಯನ ವೈಭವದ ಕ್ಷಣ ಕಣ್ತುಂಬಿಕೊಳ್ಳಬೇಕೆಂಬ ತವಕ. ದೂರದ ಊರಿನಲ್ಲಿರುವ ಮಗಳು-ಅಳಿಯನನ್ನು ಕಾರ್ಯಕ್ರಮಕ್ಕೆ ಕರೆಯಬೇಕು, ಊರಲ್ಲಿ ಜಾಗ ಮಾರಿ ಹೋದ ಭಟ್ಟರಿಗೆ ಸುದ್ದಿ ಮುಟ್ಟಿಸಬೇಕು, ಕಳೆದ ವರ್ಷ ವಿದೇಶಕ್ಕೆ ಉದ್ಯೋಗ ಅರಸಿ ತೆರಳಿದ ಶೆಟ್ರಿಗೊಮ್ಮೆ ಫೋನ್ ಮಾಡಬೇಕು, ತಾಯಿ ಮನೆಯವರನ್ನು ಕರೆದು ಊರಿನ ಸಂಭ್ರಮವನ್ನು ತೋರಿಸಬೇಕು, ಗೆಳೆಯರನ್ನು ಕಾರ್ಯಕ್ರಮಕ್ಕೆ ಕರೆಯಬೇಕು ಎಂಬೆಲ್ಲ ಕನಸು. ಅಲ್ಲಿ ಪಾಕಶಾಲೆಯಾಗಬೇಕು, ಇಲ್ಲಿ ರಂಗಮಂದಿರವಿರಬೇಕು, ಅಲಂಕಾರ ಹೀಗಿರಬೇಕು ಮೊದಲಾದ ಚರ್ಚೆ. ಜೀರ್ಣೋದ್ಧಾರ, ಬ್ರಹ್ಮಕಲಶದ ಜವಾಬ್ದಾರಿ ಹೊತ್ತವರದ್ದು – ಕಾರ್ಯಕ್ರಮಕ್ಕಾಗಿ ದುಡ್ಡು ಒಟ್ಟುಗೂಡಿಸುವ, ಉಳಿದ ಕಾಮಗಾರಿಗಳನ್ನು ತುರ್ತಾಗಿ ಮುಗಿಸುವ, ಸಿದ್ಧತೆಗಳನ್ನು ಕೈಗೊಳ್ಳುವ ಮಂಡೆಬಿಸಿ. ಜತೆಗೆ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗುತ್ತಿದ್ದೇವಲ್ಲ ಎಂಬ ಖುಷಿ. ಹೀಗೆ ಭಕ್ತಿಯ ಶ್ರಮದ ನಡುವೆ ರಾತ್ರಿ ಗಂಟೆ 9 ಆಗುವುದು ಗೊತ್ತೇ ಆಗುವುದಿಲ್ಲ. ‘ಉಪಾಹಾರ ಸಿದ್ಧವಾಗಿದೆ’ ಎಂದು ಪಾಕಶಾಲೆಯಿಂದ ಬರುವ ಕರೆಯೊಂದಿಗೆ ಆ ದಿನದ ಕೆಲಸ ಮುಕ್ತಾಯ. ಉಪಾಹಾರದ ವಿಶೇಷವನ್ನು ಇಲ್ಲಿ ಹಂಚಿಕೊಳ್ಳಲೇಬೇಕು. ನಾಲ್ಕೈದು ಮಂದಿ ಅಡುಗೆ ಕಾರ್ಯಕ್ಕೆಂದೆ ಮೀಸಲು. ಶ್ರಮಕ್ಕೆ ತಕ್ಕ ಸವಿ. ದಿನಂಪ್ರತಿ ಬಗೆ ಬಗೆಯ ತಿಂಡಿ ತಿನಸುಗಳು. ಚಪಾತಿ, ಬನ್ಸು, ಬಟಾಟೆ ಬೋಂಡಾ, ಪೂರಿ ಬಾಜಿ, ಶ್ಯಾವಿಗೆ, ಬಾಳೆ ಹಣ್ಣಿನ ರಸಾಯನ, ಕಡ್ಲೆ ಬಜಿಲ್, ಸಜ್ಜಿಗೆ, ಪಾಯಸ, ಬಾಳೆಹಣ್ಣು, ಕಿತ್ತಳೆ, ಶೀರಾ, ಚಾ, ಕಾಫಿ, ಹಾಲು, ಮಜ್ಜಿಗೆ, ಕಲ್ಲಂಗಡಿ ಜ್ಯೂಸು ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಯಾರದ್ದಾದರೂ ಮದುವೆ ವಾರ್ಷಿಕೋತ್ಸವ, ಹುಟ್ಟು ಹಬ್ಬಗಳೇನಾದರೂ ಇದ್ದರೆ ಆ ದಿನ ಸಿಹಿ ಹೆಚ್ಚುವರಿ. ಇಂಥ ಸಂಭ್ರಮದಲ್ಲಿ ನೀವೂ ಭಾಗಿಯಾಗುವುದಾದರೆ ಬನ್ನಿ. ಶ್ರಮದಾನಕ್ಕೆ ಅಲ್ಲದಿದ್ದರೂ ನೋಡುವುದಕ್ಕಾದರೂ ಬರಲೇಬೇಕು. ಆಲಯ ಕಟ್ಟುವಲ್ಲಿ ಸರ್ವೆ ಗ್ರಾಮದ ಜನರ ಲವಲವಿಕೆಯನ್ನು ನೀವೂ ಕಣ್ತುಂಬಿಕೊಳ್ಳಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು