ಮುಲ್ಕಿಯ ಬಳ್ಕುಂಜೆ ಪಟೇಲರ ಮನೆಯಲ್ಲಿ ಸುಮಾರು 300 ವರ್ಷಗಳಷ್ಟು ಹಳೆಯ ಇತಿಹಾಸವಿರುವ ದೈವಗಳ ಸೊತ್ತು ಪತ್ತೆ-ಕಹಳೆ ನ್ಯೂಸ್
ಮುಲ್ಕಿ : ಕಿನ್ನಿಗೋಳಿ ಸಮೀಪದ ಬಳ್ಕುಂಜೆ ಪಟೇಲರ ಮನೆಯಲ್ಲಿ ಕಾಲಗರ್ಭದಲ್ಲಿ ಹುದುಗಿ ಹೋಗಿರುವ ಸುಮಾರು 300 ವರ್ಷಗಳಷ್ಟು ಹಳೆಯ ಇತಿಹಾಸವಿರುವ ದೈವಗಳ ಸೊತ್ತು ಪತ್ತೆಯಾಗಿದೆ.
ಬಳ್ಕುಂಜೆ ಗುತ್ತು ಜುಮಾದಿ- ಬಂಟ ದೈವಗಳ ಕಾಲಾವಧಿ ನೇಮದಲ್ಲಿ ಬಳ್ಕುಂಜೆ ಪಟೇಲರ ಮನೆಯವರು ದೈವದ ಹತ್ತಿರ ತಮ್ಮ ಕಷ್ಟವನ್ನು ಪರಿಹರಿಸುವ ಸಲುವಾಗಿ ಪ್ರಾರ್ಥನೆ ಮಾಡಿದರು. ಆ ಪ್ರಕಾರವಾಗಿ ದೈವವು ಒಂದು ರಹಸ್ಯವನ್ನು ಪಟೇಲರ ಕುಟುಂಬದವರಿಗೆ ತಿಳಿಸಿತು. ಪುರಾತನ ಕಾಲದಲ್ಲಿ ಪಟೇಲರ ಮನೆಯಲ್ಲಿ ಜುಮಾದಿ- ಬಂಟ ಹಾಗೂ ಪರಿವಾರ ದೈವಗಳನ್ನು ಆರಾಧಿಸಿಕೊಂಡು ಬರಲಾಗಿತ್ತು. ಕಾಲ ಕ್ರಮೇಣ ಪಟೇಲರ ಮನೆಯು ಪಾಳು ಬಿದ್ದು ದೈವಸ್ಥಾನ ಹತ್ತಿರದ ಬಾವಿಯ ಮಣ್ಣಿನಲ್ಲಿ ಹೂತುಹೋಗಿವೆ ಎಂಬ ನುಡಿ ಬಂದಿತು. ಮುಂದೆ ಹೋಗಿ, ಅದನ್ನು ಜೀರ್ಣೋದ್ಧಾರ ಮಾಡಿಸಿ, ಎಲ್ಲ ಕಷ್ಟಗಳೂ ಪರಿಹಾರವಾಗುತ್ತೆ ಎಂದು ಮನೆಯವರಿಗೆ ಧೈರ್ಯ ನೀಡಿತು.
ಅದೇ ಪ್ರಕಾರ ಪಟೇಲರ ಮನೆಯವರು ಮಾರ್ಚ್ 8ರಂದು ಪುರಾತನ ಮನೆಯ ಹಿಂದೆ ಇರುವ ಬಾವಿಯಲ್ಲಿ ದೈವದ ಸೊತ್ತುಗಳನ್ನು ಹುಡುಕಲು ಪ್ರಾರಂಭಿಸಿದರು. ಸುಮಾರು 6 ಅಡಿ ಅಗೆಯುವಾಗ ದೈವದ ಹಳೆಯ ಮಣೆ ಮಂಚದ ಅವಶೇಷ ಸಿಕ್ಕಿತು. ಮತ್ತಷ್ಟು ಆಳದಲ್ಲಿ ಅಗೆದಾಗ ದೈವದ ಕಡ್ಸಲೆ, ಮೂರ್ತಿ ಮತ್ತು ಅನೇಕ ಪರಿಕರ ಗೋಚರಿಸಿತು! ಈ ರೀತಿಯಾಗಿ ಬಳ್ಕುಂಜೆ ಜುಮಾದಿ- ಬಂಟ ದೈವವು ತಮ್ಮ ಕಾರಣಿಕವನ್ನು ತೋರಿಸಿ, ಪಟೇಲರ ಮನೆಯವರಲ್ಲಿ ಮತ್ತು ಇಡೀ ತುಳುನಾಡಿನ ಜನರಲ್ಲಿ ಅಚ್ಚರಿ ಮೂಡಿಸಿದೆ.