ಸಾರಿಗೆ ಸಂಪರ್ಕ ಅಭಿವೃದ್ಧಿ ಸಾಧಿಸಲು ಪ್ರಯತ್ನ ; ಯೋಜನೆಗೆ ವೇಗ ನೀಡಲು ಪುತ್ತೂರು ಶಾಸಕ ಸಂಜೀವ ಮಠಂದೂರು ಚಿಂತನೆ –ಕಹಳೆ ನ್ಯೂಸ್
ಪುತ್ತೂರು : ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು, ರಾಷ್ಟ್ರೀಕೃತ ಗ್ರಾಮೀಣ ಮಾರ್ಗ ಸೂಚಿಗಳು ಹಾಗೂ ದೂರ ಪ್ರಯಾಣದ ಮಾರ್ಗಸೂಚಿಗಳನ್ನು ನಿರ್ವಹಣೆ ಮಾಡುವ ಜಿಲ್ಲೆಯ ಪ್ರಮುಖ ಘಟಕವಾಗಿರುವ ಪುತ್ತೂರು ಕೆಎಸ್‌ಆರ್‌ಟಿಸಿ ಘಟಕದ ಕಾರ್ಯ ಒತ್ತಡವನ್ನು ಕಡಿಮೆ ಮಾಡಲು ಮತ್ತು ಸಾರಿಗೆ ಸಂಪರ್ಕ ವ್ಯವಸ್ಥೆಯಲ್ಲಿ ಇನ್ನಷ್ಟು ಅಭಿವೃದ್ಧಿ ಸಾಧಿಸಲು ಪುತ್ತೂರಿನಲ್ಲಿ ಕೆಎಸ್‌ಆರ್‌ಟಿಸಿ ಎರಡನೇ ಘಟಕವನ್ನು ಆರಂಭಿಸುವ ಯೋಜನೆಗೆ ವೇಗ ನೀಡಲು ಚಿಂತನೆ ನಡೆಸಿದ್ದಾರೆ.
ಪುತ್ತೂರಿನಲ್ಲಿ ಕೆಎಸ್‌ಆರ್‌ಟಿಸಿ ಎರಡನೇ ಘಟಕ ಆರಂಭವಾಗದೆ ಉದ್ದೇಶಿತ ಸಾರಿಗೆ ಸಂಪರ್ಕ ಅಭಿವೃದ್ಧಿ ಸಾಧಿಸಲು ಕಷ್ಟ ಸಾಧ್ಯವಾಗುತ್ತಿದೆ. ಹಾಗೇ ನೂತನ ಘಟಕವನ್ನು ಆರಂಭಿಸಲು ಕೆಎಸ್‌ಆರ್‌ಟಿಸಿಗೆ ರೂ.5 ಕೋಟಿ ವೆಚ್ಚವಾಗುತ್ತದೆ. ಈಗ ಕೆಎಸ್‌ಆರ್‌ಟಿಸಿಯ ಘಟಕಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಅಳವಡಿಸಿಕೊಳ್ಳುವುದರಿಂದ ಘಟಕ ನಿರ್ಮಾಣದ ಯೋಜನಾವೆಚ್ಚವು ರೂ. 2 ಕೋಟಿಗಳಿಂದ ರೂ. 5 ಕೋಟಿಗಳಿಗೆ ಏರಿಕೆಯಾಗಿದೆ. ಘಟಕ ನಿರ್ಮಾಣದ ಜೊತೆಗೆ ಸಿಬಂದಿ ವಸತಿ ವ್ಯವಸ್ಥೆಯನ್ನು ಕೂಡಾ ನಿರ್ಮಿಸಬೇಕಾಗುತ್ತದೆ. ಏಕೆಂದರೆ, ಕೆಎಸ್‌ಆರ್‌ಟಿಸಿ ಘಟಕವು ದಿನದ 24 ತಾಸುಗಳ ಕಾಲ ಕಾರ್ಯ ನಿರ್ವಹಿಸುತ್ತದೆ. ಇದರೊಂದಿಗೆ ಘಟಕದಲ್ಲಿ ಡೀಸೆಲ್ ಬಂಕ್ ಅತೀ ಅಗತ್ಯವಾಗಿದೆ. ಬಸ್ ದುರಸ್ಥಿಯ ಸಲಕರಣೆಗಳು, ಬಿಡಿ ಭಾಗಗಳು ಹೀಗೆ ವಿವಿಧ ಸೌಲಭ್ಯಗಳನ್ನು ಘಟಕವು ಒಳಗೊಂಡಿರಬೇಕು. ಮತ್ತು ಪುತ್ತೂರಿನಲ್ಲಿ ಕೆಎಸ್‌ಆರ್‌ಟಿಸಿ ಎರಡನೇ ಘಟಕವನ್ನು ಆರಂಭಿಸಲು ಕನಿಷ್ಠ 5 ಎಕ್ರೆ ಸರಕಾರಿ ನಿವೇಶನ ಬೇಕು. ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ 5 ಕಿ.ಮೀ. ಸುತ್ತಳತೆಯಲ್ಲಿ ನಿವೇಶನ ಲಭ್ಯವಾಗಬೇಕು. ಬಸ್ ನಿಲ್ದಾಣದಿಂದ 5 ಕಿ.ಮೀ.ಗೂ ಹೆಚ್ಚು ದೂರದಲ್ಲಿರುವ ನಿವೇಶನದಲ್ಲಿ ಘಟಕ ನಿರ್ಮಾಣ ಮಾಡಿದರೆ ಘಟಕ ಮತ್ತು ಬಸ್ ನಿಲ್ದಾಣಗಳ ನಡುವಣ ಬಸ್‍ಗಳ ಖಾಲಿ ಓಡಾಟದಿಂದ ಆದಾಯ ನಷ್ಟ ಉಂಟಾಗುತ್ತದೆ. ಆದ ಕಾರಣ 5 ಕಿ.ಮೀ.ವರೆಗೆ ನಿವೇಶನವನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಹಾಗೂ ಪುತ್ತೂರಿನಲ್ಲಿ ಕೆಎಸ್‌ಆರ್‌ಟಿಸಿ 2ನೇ ಘಟಕ ಆರಂಭವಾದರೆ ಮಂಗಳೂರು ಮಾದರಿಯಲ್ಲಿ ದೂರಪ್ರಯಾಣದ ಬಸ್‍ಗಳ ನಿರ್ವಹಣೆಗೆ ಒಂದು ಘಟಕ. ಗ್ರಾಮಾಂತರ ಮಾರ್ಗ ಸೂಚಿಗಳ ನಿರ್ವಹಣೆಗೆ 1 ಘಟಕವನ್ನು ಮೀಸಲಿಡುವ ಮೂಲಕ ಸಾರಿಗೆ ನಿರ್ವಹಣಾ ವ್ಯವಸ್ಥೆಯಲ್ಲಿ ಬದಲಾವಣೆ ಸಾಧ್ಯ. ಅಲ್ಲದೇ, ಪುತ್ತೂರಿನಿಂದ ಉತ್ತರಕರ್ನಾಟಕದ ಜಿಲ್ಲಾ ಕೇಂದ್ರಗಳಿಗೂ ಬಸ್ ಸಂಚಾರ ಆರಂಭಿಸುವ ಕುರಿತು ಶಾಸಕ ಸಂಜೀವ ಮಠಂದೂರು ಉತ್ಸುಕರಾಗಿದ್ದಾರೆ. ಈಗಾಗಲೇ ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗ ಮಟ್ಟದ ಸಾರಿಗೆ ಅದಾಲತ್‍ನಲ್ಲಿ ಶಾಸಕರು ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಪ್ರಸ್ತುತ ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗದ ಸುಳ್ಯ ಘಟಕದಿಂದ ಸುಳ್ಯ-ಪುತ್ತೂರು- ಧರ್ಮಸ್ಥಳ-ಮುಂಡರಗಿ ಬಸ್ ಸಂಚಾರ ಇದೆ. ಇದು ಉತ್ತರಕರ್ನಾಟಕದ ಕಡೆಗೆ ತೆರಳುವ ಏಕೈಕ ಮಾರ್ಗಸೂಚಿಯಾಗಿದೆ. ಇನ್ನೂ ಪುತ್ತೂರು ಕೆಎಸ್‌ಆರ್‌ಟಿಸಿ ಘಟಕದಲ್ಲಿ ಹಾಲಿ 135 ಬಸ್‍ಗಳಿದ್ದು 127 ಮಾರ್ಗಸೂಚಿಗಳನ್ನು ನಿರ್ವಹಿಸಲಾಗುತ್ತಿದೆ. ಮೊದಲು 120ರಷ್ಟು ಮಾರ್ಗಸೂಚಿಗಳನ್ನು ನಿರ್ವಹಿಸಲಾಗುತ್ತಿತ್ತು. ಈಗ ಸುಳ್ಯದಲ್ಲಿ ಕೆಎಸ್‌ಆರ್‌ಟಿಸಿ ನೂತನ ಘಟಕ ಆರಂಭವಾಗಿರುವುದರಿಂದ ಸುಳ್ಯ-ಸುಬ್ರಹ್ಮಣ್ಯ ಪ್ರದೇಶದ ಮಾರ್ಗಸೂಚಿಗಳನ್ನು ಪುತ್ತೂರಿನಿಂದ ಸುಳ್ಯ ಘಟಕಕ್ಕೆ ವರ್ಗಾಯಿಸಲಾಗಿದೆ. ಈಗ ಪುತ್ತೂರು- ಬೆಂಗಳೂರು, ಪುತ್ತೂರು- ಮೈಸೂರು, ಪುತ್ತೂರು-ಹುಬ್ಬಳ್ಳಿ ದೂರ ಪ್ರಯಾಣದ ಮಾರ್ಗಸೂಚಿಗಳು ನಿರ್ವಹಣೆಯಾಗುತ್ತಿವೆ. ಬೇರೆ ದೂರ ಪ್ರಯಾಣದ ಮಾರ್ಗಸೂಚಿಗಳನ್ನು ನಿರ್ವಹಣೆ ಮಾಡಲು ಹಾಲಿ ವ್ಯವಸ್ಥೆಯಲ್ಲಿ ಸಾಧ್ಯವಿಲ್ಲವಾಗಿದೆ.