ಕಥೆ : ✍️ ಸುಜಯ ಆಚಾರ್ಯ, ಬಂಟ್ವಾಳ
ಇವರ ಜೀವನ ಹಲವರಿಗೆ ದಾರಿದೀಪ. ಇಂತವರ ಲೈಫ್ ಜರ್ನಿ ಸಿನಿಮಾಗಳಲ್ಲಿ ಕಾಣಬಹುದು ಆದರೆ ನಿಜ ಜೀವನದಲ್ಲಿ ಆಗುತ್ತಾ ಅಂತಾ ಇವರ ಕಥೆ ಕೇಳಿದಾಗ ಓದಿದಾಗ ಅಂದಿರುವವರು ಅದೆಷ್ಟೋ. ಕನಸು ಕಾಣೋ ಹಕ್ಕು ಎಲ್ಲರಿಗಿರುತ್ತೆ ಆದರೆ ಅದನ್ನು ನನಸು ಮಾಡುವ ಜವಾಬ್ಧಾರಿ ಕೂಡಾ ನಮ್ಮ ಮೇಲಿರುತ್ತದೆ. ನಾವು ಅಂದುಕೊಂಡ ಕೆಲಸ ಸಕ್ಸಸ್ ಆಗಬೇಕಾದರೆ ಎಷ್ಟು ಶ್ರದ್ಧೆಯಿಟ್ಟು ಕೆಲಸ ಮಾಡುತ್ತೇವೆಯೋ ಆಗ ಮಾತ್ರ ಗುರಿಮುಟ್ಟಲು ಸಾಧ್ಯ.. ಪರಿಶ್ರಮ ಮತ್ತು ಶ್ರದ್ಧೆಯಿಂದ ಏನು ಬೇಕಾದರೂ ಸಾಧಿಸಬಹುದು ಎಂಬುವುದಕ್ಕೆ ಈ ರಿಕ್ಷಾ ಡ್ರೈವರ್ ಎಲ್ಲರಿಗೂ ಮಾದರಿಯಾಗಿದ್ದಾರೆ. ಇವರು ಬೇರಾರು ಅಲ್ಲ ಸಂತೋಷ್ ಎನ್ನುವ ಮಂಗಳೂರಿನ ಆಟೋ ಡ್ರೈವರ್. ವಸಂತ್ ಹಾಗೂ ಲೀಲಾವತಿ ದಂಪತಿಗಳ ಮುದ್ದಿನ ಮಗ. 1977ರಲ್ಲಿ ಜನನವಾದ ಇವರು ತೊಕ್ಕೊಟ್ಟು ಸಮೀಪದ ಕೊಲ್ಯ ನಿವಾಸಿ. ಮಂಗಳೂರಿನ ಬಜಿಲಕೇರಿ ಇವರ ಹುಟ್ಟೂರು. ಸೈಂಟ್ ಅಲೋಶಿಯಸ್ ನಲ್ಲಿ ಬಿ.ಕಾಂ ಪದವಿಯನ್ನು ಸಂಪೂರ್ಣಗೊಳಿಸಿದ ಸಂತೋಷ್ ಜೀವನದಲ್ಲಿ ಅದೆಷ್ಟೋ ಕಷ್ಟದ ಮಜಲುಗಳನ್ನು ದಾಟಿ ಇಂದು ಒಬ್ಬ ಉತ್ತಮ ಡೈರೆಕ್ಟರ್ ಆಗಿ ಹೊರಹೊಮ್ಮಿದ್ದಾರೆ. ಇವರ ಜೀವನದ ಇಂಟ್ರೆಸ್ಟಿಂಗ್ ಸ್ಟೋರಿಗೆ ಅದೆಷ್ಟೋ ಜನ ಮೂಗಿಗೆ ಬೆರಳಿಡುವುದು ಸಹಜ.
ಆಟೋ ಓಡಿಸುತ್ತಲೇ ಡೈರೆಕ್ಟರ್ ಆದ ಕಲಾ ಚತುರ…
ಶಾಲಾ ಕಾಲೇಜಿನಲ್ಲಿ ಓದುವುದರ ಜೊತೆಗೆ ಸಾಂಸ್ಕøತಿಕ ಕಾರ್ಯಕ್ರಮಗಳತ್ತ ಸಂತೋಷ್ ಚಿತ್ತ ಬಹಳಷ್ಟಿತ್ತು. ನಾಟಕಗಳಲ್ಲಿ ಭಾಗವಹಿಸುವುದು, ಕಥೆ ಕವನಗಳನ್ನು ಬರೆಯುವುದು ಇವರ ಹವ್ಯಾಸವಾಗಿತ್ತು. ಓದುವುದರಲ್ಲಿಯೂ ಇವರು ಮುಂದು. ಸಂತೋಷ್. ಬಿ.ಕಾಂ ಪೈನಲ್ ಇಯರ್ ಪರೀಕ್ಷೆ ಮುಗಿದು ಅತ್ತ ಪರೀಕ್ಷೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಉದ್ಯೋಗಕ್ಕಾಗಿ ಅಲೆದಾಡಿದ್ದು ಅಷ್ಟಿಷ್ಟಲ್ಲ. ಆದರೆ ಯಾವ ಕೆಲಸವೂ ಅವರಿಗೆ ಕೈಗತ್ತಲೇ ಇಲ್ಲ. ಜೀವನದ ಬಂಡಿ ಓಡಿಸೋಕೆ ಮಾತ್ರ ಏನಾದರೂ ಉದ್ಯೋಗ ಮಾಡಲೇ ಬೇಕಿತ್ತು. ಕುಟುಂಬ ನಿರ್ವಹಣೆ ಮಾಡುವುದಕ್ಕೆ ಉದ್ಯೋಗ ಮಾಡುವುದು ಅನಿವಾರ್ಯವಾಗಿತ್ತು. ಆದರೆ ಏನು ಮಾಡುವುದು ಉದ್ಯೋಗ ನಗರಿ ಬೆಂಗಳೂರಿನಲ್ಲಿ ಎಷ್ಟು ಅಲೆದಾಡಿದರೂ ಯಾವ ಕೆಲಸವೂ ಕೈಗತ್ತಲೇ ಇಲ್ಲ. ಕೊನೆಗೆ ಜೀವನ ಸಾಗಿಸಲು ಆಯ್ಕೆ ಮಾಡಿದ್ದು ಆಟೋ ಓಡಿಸುವ ವೃತ್ತಿ. ಜೀವನ ಸಾಗಿಸೋಕೆ ಈ ವೃತ್ತಿ ಏನೋ ಕಷ್ಟವಾಗಿರಲಿಲ್ಲ. ಆದರೆ ತನ್ನಲ್ಲಿದ್ದ ಅಗಾಧ ಪ್ರತಿಭೆ ಮಾತ್ರ ಅವರನ್ನು ಸುಮ್ಮನೆ ಕುಳಿತುಕೊಳ್ಳೋಕೆ ಬಿಡಲಿಲ್ಲ.
ಥೇಟ್ ಸಿನಿಮಾ ಕಥೆಯನ್ನೇ ಹೋಲುತ್ತೆ ಇವರ ಲೈಫ್ ಜರ್ನಿ!
ಕೆಲವರಿಗೆ ಇವರ ಕತೆ ಕೇಳಬೇಕಾದರೆ ಇದೇನೋ ಇವರು ಸಿನಿಮಾ ಸ್ಟೋರಿ ಹೇಳ್ತಾ ಇದ್ದಾರೋ ಅಂತ ಅನಿಸಬಹುದು… ಸಿನಿಮಾ ಕತೆಯನ್ನೇ ನಿಜ ಜೀವನದಲ್ಲಿ ಅಳವಡಿಸಿದವರು ಇವರು. ತುಳುನಾಡ ಈ ಕುವರ ಓರ್ವ ಆಟೋ ಡ್ರೈವರ್ ಆಗಿದ್ದವರು ಇಂದು ಡೈರೆಕ್ಟರ್ ಆಗಿ ಎಲ್ಲೆಡೆ ಮಿಂಚುತ್ತಿದ್ದಾರೆ. ದಿನ ಬೆಳಗಾದರೆ ಆಟೋ ಹಿಡಿದು ಅದರಲ್ಲಿ ಬರೋ ಸಂಪಾದನೆಯಿಂದ ಜೀವನ ಸಾಗಿಸ್ತಾ ಇದ್ರು. ಆದರೆ ಅವರಲ್ಲಿ ಅಗಾಧ ಪ್ರತಿಭೆ ಮಾತ್ರ ಅವರನ್ನು ಸುಮ್ಮನೆ ಕುಳಿತುಕೊಳ್ಳೋಕೆ ಬಿಡಲಿಲ್ಲ. ಆಟೋ ಓಡಿಸುತ್ತಲೇ ಹಲವಾರು ಸಿನಿಮಾ ಕಥೆಗಳನ್ನು ಬರೆದು ಬೆಂಗಳೂರಿಗೆ ಹೊರಟು ಅಲ್ಲಿ ಡೈರೆಕ್ಟರ್ ಗಳ ಕದ ತಟ್ಟಿದರು. ಆದರೆ ಅವರ ಕಥೆಗೆ ಯಾವ ಡೈರೆಕ್ಟರ್ ಗಳೂ ಓಕೆ ಅನ್ನಲೇ ಇಲ್ಲ. ಅಲ್ಲಿಂದ ಮತ್ತೆ ವಾಪಸ್ಸು ಮಂಗಳೂರಿನತ್ತ ಪಯಣ ಬೆಳೆಸಿ ಅದೇ ರಿಕ್ಷಾ ಹತ್ತಿ ಡ್ರೈವರ್ ಆಗಿ ಕೆಲಸ ನಿರ್ವಹಿಸಿದರು.
ಸ್ಪೂರ್ತಿದಾಯಕ ಸಾಧನೆ
ಅತ್ತ ಆಟೋ ಓಡಿಸುತ್ತ ಜೀವನ ನಿರ್ವಹಿಸುತ್ತಿದ್ದ ಸಂತೋಷ್ ಸಮಯ ಸಿಕ್ಕಾಗಲೆಲ್ಲಾ ತನ್ನ ಕನಸನ್ನು ಮರೆಯದೆ ಮತ್ತಷ್ಟು ನಾಟಕ ಸಿನಿಮಾ ಕಥೆಗಳನ್ನು ಬರೆಯುವುದಕ್ಕೆ ಆರಂಭಿಸಿದರು. ಗುರಿಮುಟ್ಟುವ ತನಕ ತನ್ನ ಹಠ ಬಿಡದ ಸಂತೋಷ್ ಸಿನಿಮಾ ಕಥೆಗಳ ಜೊತೆಗೆ ಮಾತಾ ಮರ್ಲೆರ್, ಕಾಂತಾ ಬಾರೆ ಬೂದಾಬಾರೆ, ನಮ ಎನ್ನಿಲೆಕ್ಕ ಇಜ್ಜಿ, ನೇಂದ ಬೂಳ್ಯ, ಲೈಫ್ ಲೋಕೇಸೆ ನಾಟಕಗಳಲ್ಲಿ ನಟಿಸಿರುವ ಸಂತೋಷ್ ಕನ್ನಡ ಚಿತ್ರರಂಗದ ಹಾಸ್ಯನಟ ಬ್ಯಾಂಕ್ ಜನಾರ್ದನ್‍ರವರು ಮೊತ್ತ ಮೊದಲ ಬಾರಿಗೆ ತುಳು ರಂಗಭೂಮಿಯಲ್ಲಿ ನಟಿಸಿರುವ ತುಳು ನಾಟಕ ಲೈಫ್ ಲೋಕೇಸೆ ಇದರ ಕತೆ ಸಂಭಾಷಣೆ ಮತ್ತು ನಿರ್ದೇಶನವನ್ನೂ ಮಾಡಿದ್ದಾರೆ. ಬಳಿಕ ಕಿರುತೆರೆಯಲ್ಲೂ ತನ್ನ ಚಾಕಚಕ್ಯೆತೆ ಮೆರೆದಿದ್ದರು. ಉಡುಗೊರೆ ಕಿರು ಚಿತ್ರದ ಸಹ ನಿರ್ದೇಶನವನ್ನೂ ಮಾಡಿದ್ದಾರೆ. ಇವರು ಕಥ- ಚಿತ್ರಕಥೆ- ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ನನ್ನುಸಿರೇ ಕನ್ನಡ ಕಿರುಚಿತ್ರ ಫಿಲ್ಮ್ ಸ್ಪರ್ಧೆಯಲ್ಲಿ ಖಾಸಗಿ ವಾಹಿನಿಯೊಂದರಲ್ಲಿ ಪ್ರಶಸ್ತಿ ಕೂಡಾ ದೊರಕಿದೆ.
ಇಷ್ಟೇ ಅಲ್ಲದೆ ಬೈದತಿ(ತುಳು-ಕನ್ನಡ) ಚಿತ್ರದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಸಂತೋಷ್ ಕೊಲ್ಯ ಕನ್ನಡ ಚಿತ್ರ ಲೋಕಲ್ ಲವ್ ಸ್ಟೋರಿ ಪೆನ್ಸಿಲ್ ಬಾಕ್ಸ್ ರಮ್ಯಾ ಫಾರ್ ಲವ್ ಚಿತ್ರದಲ್ಲಿ ನಟಿಸಿದ್ದಾರೆ. ಕ್ರಶ್ ಕನ್ನಡ ಸಿನಿಮಾದಲ್ಲಿ ನಟನೆಯ ಕಮಾಲ್ ತೋರಿಸಿದ ಇವರು ಅದರಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಆಗಿಯೂ ಅದರಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇನ್ನಷ್ಟು ಕಥೆಗಳು ಇವರ ಹಸ್ತದಲ್ಲಿದೆ ಉತ್ತಮ ನಿರ್ಮಾಪಕರು ಸಿಕ್ಕರೆ ಇನ್ನಷ್ಟು ಉತ್ತಮ ಸಿನಿಮಾಗಳು ತೆರೆಕಾಣಲಿವೆ ಎಂಬುವುದು ಸಂತೋಷ್‍ರವರ ಮಾತು.
2011ರ ವರೆಗೆ ಆಟೋ ರಿಕ್ಷಾ ಚಾಲಕನಾಗಿದ್ದುಕೊಂಡೆ ಸಿನಿಮಾ ಹುಚ್ಚನ್ನು ಮತ್ತಷ್ಟು ಹೆಚ್ಚು ಮಾಡಿಕೊಂಡರು. ಇವರ ಯಶಸ್ಸಿನ ಹಿಂದೆ ಇವರ ಇಡೀ ಕುಟುಂಬ ಹಾಗೂ ಇವರ ಗೆಳೆಯರು ಇವರ ಜೊತೆಗೆ ನಿಂತಿದ್ದು ಇವರಿಗೆ ಪ್ರೋತ್ಸಾಹಿಸಿ ಇವರ ಬೆನ್ನುತಟ್ಟಿ ನಿಂತಿದ್ದಾರೆ.
ಅಂದು ಸಂತೋಷ್ ರವರ ಕಥೆಗಳನ್ನು ರಿಜೆಕ್ಟ್ ಮಾಡಿದ ಡೈರೆಕ್ಟರ್ ಗಳು ಇಂತಹ ಉತ್ತಮ ಪ್ರತಿಭೆಯನ್ನು ಕಂಡು ಇಂದು ದಿಗ್ಭಮೆಯಾಗುತ್ತಿದ್ದಾರೆ. ಸಾಧನೆಗೆ ತಕ್ಕ ಪ್ರತಿಫಲವನ್ನು ಆ ದೇವರು ಒಂದಲ್ಲ ಒಂದು ದಿನ ಕೊಟ್ಟೇ ಕೊಡುತ್ತಾನೆ ಎಂಬುವುದಕ್ಕೆ ಇವರೇ ಸಾಕ್ಷಿ. ಬಡತನದಲ್ಲಿದ್ದರೇನು ನಮ್ಮ ಕನಸಿಗೆ ನಾವೇ ನೀರೆರೆದು ಮುಂದೆ ಸಾಗಿರದರೆ ಎಂತಹ ಮಜಲುಗಳನ್ನು ದಾಟಬಹುದು ಎಂಬುವುದಕ್ಕೆ ಇಂತವರೇ ನಿದರ್ಶನ. ಇವರು ನಾಟಕ ಸಿನಿಮಾ ಕ್ಷೇತ್ರದಲ್ಲಿ ಇನ್ನಷ್ಟು ಉತ್ತುಂಗಕ್ಕೇರಲಿ ಎಂಬುವುದೇ ನಮ್ಮೆಲ್ಲರ ಆಶಯ…ನಿಮ್ಮ ಸಾಧನೆ ಯುವಜನಾಂಗಕ್ಕೆ ದಾರಿ ದೀಪವಾಗಲಿ…. ತುಳುನಾಡಿನ ಹೆಮ್ಮೆಯ ಕಲಾವಿದ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಮಿಂಚಲಿ…