ವಿವೇಕಾನಂದ ಕಾಲೇಜಿನಲ್ಲಿ ರಕ್ಷಕ-ಶಿಕ್ಷಕ ಸಂಘದ ‘ವಾರ್ಷಿಕ ಮಹಾಸಭೆ’; ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ-ಕಹಳೆ ನ್ಯೂಸ್
ಪುತ್ತೂರು : ಕಾಲೇಜಿನಲ್ಲಿ ಸಿಗುವ ವಿಪುಲ ಅವಕಾಶಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹ ನೀಡಬೇಕು. ಕಾಲೇಜಿಗೆ ಸೇರಿಸಿದ ನಂತರ ವಿದ್ಯಾರ್ಥಿಗಳ ಚಟುವಟಿಕೆಗಳನ್ನು ಪೋಷಕರು ಗಮನಿಸಬೇಕು. ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಳ್ಳಬೇಕು. ವಿದ್ಯಾರ್ಥಿಗಳು ಯಾವುದೇ ರೀತಿಯ ಸಮಾಜಘಾತುಕ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ನೋಡಿಕೊಳ್ಳಬೇಕು ಎಂದು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶಿವರಾಮ ಭಟ್ ಕೆ. ಹೇಳಿದರು.
ಇಲ್ಲಿನ ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಆಶ್ರಯದಲ್ಲಿ ನಡೆದ ‘ವಾರ್ಷಿಕ ಮಹಾಸಭೆ’ಯ ಸಭಾಧ್ಯಕ್ಷತೆ ವಹಿಸಿ ಶನಿವಾರ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀನಿವಾಸ ಪೈ ಮಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಅಗತ್ಯವಾದ ಅವಕಾಶಗಳನ್ನು ಕಾಲೇಜು ನೀಡುತ್ತಿದೆ. ವಿದ್ಯಾರ್ಥಿಗಳು ಸಿಗುತ್ತಿರುವ ಅವಕಾಶಗಳನ್ನು ಬಳಸಿಕೊಳ್ಳಬೇಕು. ಮೊಬೈಲ್ ಬಳಕೆ ಕಡಿಮೆ ಮಾಡಿ ವಿದ್ಯಾರ್ಥಿಗಳನ್ನು ಓದಿನಲ್ಲಿ ತೊಡಗಿಸಿಕೊಳ್ಳುವಂತೆ ಪೋಷಕರು ಮಾರ್ಗದರ್ಶನ ಮಾಡಬೇಕು. ನಿರಂತರವಾಗಿ ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ ಎಂದರು. ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ.ಎನ್ ಮಾತನಾಡಿ, ಶಿಕ್ಷಣಕ್ಕೆ ಕೊರೋನ ಭೀತಿಯಿದ್ದರೂ, ಮತ್ತೆ ತರಗತಿಗಳು ಮುಂದುವರೆಯಲು ವಿದ್ಯಾರ್ಥಿಗಳು ಹಾಗೂ ಪೋಷಕರು ಕೈಜೋಡಿಸಿ ಸಹಕರಿಸಿದ್ದಾರೆ. ಆನ್‍ಲೈನ್ ಕ್ಲಾಸ್ ಶಿಕ್ಷಕರಿಗೆ ಹೊಸ ಅನುಭವ. ವಿದ್ಯಾರ್ಥಿಗಳ ಉತ್ತಮ ಶಿಕ್ಷಣ ಸಿಗಬೇಕು ಎಂಬುದು ನಮ್ಮ ವಿದ್ಯಾಸಂಸ್ಥೆಯ ಮುಖ್ಯಧ್ಯೇಯ ಎಂದು ನುಡಿದರು. ಈ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ರಕ್ಷಕ-ಶಿಕ್ಷಕ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ನಡೆಯಿತು. ರಕ್ಷಕ- ಶಿಕ್ಷಕ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನಂತರದಲ್ಲಿ ಕಾಲೇಜಿನ ಪ್ರಾಚಾರ್ಯ ಪ್ರೊ.ವಿಷ್ಣು ಗಣಪತಿ ಭಟ್ ಕಾಲೇಜಿನಲ್ಲಿ ನಡೆಯುವ ಪಠ್ಯ- ಪಠ್ಯೇತರ ಚಟುವಟಿಕೆಗಳ ಕುರಿತಾಗಿ ಮಾಹಿತಿ ನೀಡಿದರು. ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಕೋಶಾಧಿಕಾರಿ ಸೇಡಿಯಾಪು ಜನಾರ್ಧನ ಭಟ್, ರಕ್ಷಕ-ಶಿಕ್ಷಕ ಸಂಘದ ಕಾರ್ಯದರ್ಶಿ ಡಾ.ಶ್ರೀಧರ್ ನಾೈಕ್ ಹಾಗೂ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕೀರ್ತಿಕುಡ್ವ ಹಾಗೂ ಬಳಗದವರು ಪ್ರಾರ್ಥಿಸಿದರು. ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕಿ ಡಾ. ವಿಜಯ ಸರಸ್ವತಿ ಸ್ವಾಗತಿಸಿ, ಕಾಲೇಜಿನ ಪ್ರಾಚಾರ್ಯ ಪ್ರೊ. ವಿಷ್ಣು ಗಣಪತಿ ಭಟ್ ಪ್ರಸ್ತಾವನೆಗೈದರು. ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಅರುಣ್‍ಪ್ರಕಾಶ್ ವಂದಿಸಿದರು. ಉಪನ್ಯಾಸಕರಾದ ವಿಜಯಲಕ್ಷ್ಮಿ ಹಾಗೂ ಮುಕುಂದಕೃಷ್ಣ ಕಾರ್ಯಕ್ರಮ ನಿರೂಪಿಸಿದರು.