ಮಂಗಳೂರು : “ಮೊದಲು ಸೇವಕನಾಗು ಆಮೇಲೆ ನಾಯಕನಾಗು, ಯಾರು ಇತರರಿಗಾಗಿ ಬದುಕುತ್ತಾರೋ ಅವರು ನಿಜವಾಗಲೂ ಬದುಕಿರುತ್ತಾರೆ, ಉಳಿದವರು ಬದುಕಿದ್ದೂ ಸತ್ತಂತೆ ಎನ್ನುವ ಸಂದೇಶವನ್ನು ಜಗತ್ತಿಗೆ ನೀಡಿದವರು ಸ್ವಾಮಿ ವಿವೇಕಾನಂದರು,” ಎಂದು ಬೆಂಗಳೂರಿನ ಮನಸ್ ತರಬೇತಿ ಕೇಂದ್ರದ ನಿರ್ದೇಶಕ ಪ್ರೊ. ರಘೋತ್ತಮ ರಾವ್ ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ ಮತ್ತು ಮಂಗಳೂರು ರಾಮಕೃಷ್ಣ ಮಠದ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ʼವಿವೇಕ ವಾಣಿʼ ಸರಣಿ ಉಪನ್ಯಾಸಗಳ ಎರಡನೇ ಉಪನ್ಯಾಸ “ಸ್ವಾಮಿ ವಿವೇಕಾನಂದ ಮತ್ತು ನಾಯಕತ್ವ”, ವಿಶ್ವವಿದ್ಯಾಲಯದ ಡಾ. ಡಿ ವೀರೇಂದ್ರ ಹೆಗ್ಗಡೆ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಪ್ರೊ. ರಘೋತ್ತಮ ರಾವ್, ಸ್ವಾಮಿ ವಿವೇಕಾನಂದರು ನೀಡಿದ ನಾಯಕನ ಪರಿಕಲ್ಪನೆಯನ್ನು ವಿದ್ಯಾರ್ಥಿಗಳ ಮುಂದೆ ಪ್ರಸ್ತುತಪಡಿಸಿದರು. ವಿಶೇಷ ಆಹ್ವಾನಿತರಾಗಿ ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಪ್ರೊ. ಪೌಲ್ ಜಿ. ಆಕ್ವಿನಸ್ ಭಾಗವಹಿಸಿದ್ದರು. ವಿವೇಕಾನಂದ ಅಧ್ಯಯನ ಕೇಂದ್ರದ ಸಂಚಾಲಕ ಪ್ರೊ. ಶ್ರೀಪತಿ ಕಲ್ಲೂರಾಯ ಪಿ. ಸ್ವಾಗತಿಸಿ, ವಿವೇಕಾನಂದ ಅಧ್ಯಯನ ಕೇಂದ್ರದ ಸದಸ್ಯರಾದ ಡಾ. ಚಂದ್ರು ಹೆಗ್ಡೆ ವಂದಿಸಿದರು. ಮಂಗಳೂರು ರಾಮಕೃಷ್ಣ ಆಶ್ರಮದ ಸ್ವಯಂಸೇವಕರಾದ ರಂಜನ್ ಬೆಳ್ಳರ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ವಿವಿಧ ವಿಭಾಗಗಳ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.