ಮಂಗಳೂರು : ಮಹಿಳೆಯರು ತಾವು ಸಶಕ್ತರು ಎಂದು ಅರಿತುಕೊಳ್ಳಬೇಕು. ಸಮಾಜದಲ್ಲಿ ಸಮಾನ ಹಕ್ಕುಗಳಿಗೆ ತಾವು ಈಗಾಗಲೇ ಅರ್ಹರು ಎಂಬುದನ್ನು ಮನಗಾಣಬೇಕು, ಎಂದು ವಿಶ್ವವಿದ್ಯಾನಿಲಯ ಕಾಲೇಜಿನ ಇತಿಹಾಸ ಪ್ರಾಧ್ಯಾಪಿಕೆ ಡಾ. ಮೀನಾಕ್ಷಿ ಹೇಳಿದರು.
ವಿಶ್ವವಿದ್ಯಾನಿಲಯ ಕಾಲೇಜಿನ ಹಿಂದಿ ಸ್ನಾತಕೋತ್ತರ ಮತ್ತು ಪದವಿ ವಿಭಾಗಗಳು ಜಂಟಿಯಾಗಿ ಶಿವರಾಮ ಕಾರಂತ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ʼಇತಿಹಾಸದ ಪುಟಗಳಲ್ಲಿ ಭಾರತೀಯ ಮಹಿಳೆʼ ಎಂಬ ಕುರಿತು ಮಾತನಾಡಿದ ಅವರು ಪುರಾಣದಿಂದ ನವಭಾರತದವರೆಗೂ ಮಹಿಳೆಯರು ನಡೆದುಬಂದ ಹಾದಿಯನ್ನು ವಿವರಿಸಿದರು. “ಸಂಪ್ರದಾಯದ ಹೆಸರಿನಲ್ಲಿ ಮಹಿಳೆಯರ ಶೋಷಣೆ ಹಿಂದಿನಿಂದಲೂ ನಡೆದುಬಂದಿದೆ. ಈಗ ಸಮಾನ ಅವಕಾಶಗಳು ದೊರೆಯುತ್ತಿದ್ದರೂ ಸಾಮಾನ್ಯ ಮಹಿಳೆಯರಿಗೆ ತಲುಪುತ್ತಿಲ್ಲ,” ಎಂದವರು ಖೇದ ವ್ಯಕ್ತಪಡಿಸಿದರು. ಸ್ನಾತಕೋತ್ತರ ಹಿಂದಿ ವಿಭಾಗದ ಮುಖ್ಯಸ್ಥೆ ಡಾ ಸುಮಾ ಟಿ ಆರ್ ಅತಿಥಿಗಳನ್ನು ಸ್ವಾಗತಿಸಿದರು. ಪದವಿ ವಿಭಾಗ ಮುಖ್ಯಸ್ಥೆ ಡಾ. ನಾಗರತ್ನ ಎನ್ ರಾವ್ ಅತಿಥಿಗಳನ್ನು ಪರಿಚಯಿಸಿದರು. ಸಹಪ್ರಾಧ್ಯಾಪಕರಾದ ಡಾ. ಗುರುದತ್ತ, ಡಾ. ಸಂಜೀವ್ ಮೊದಲಾದವರು ಉಪಸ್ಥಿತರಿದ್ದರು. ಶ್ರೇಯಾ ಕಾರ್ಯಕ್ರಮ ನಿರೂಪಿಸಿದರೆ, ರಕ್ಷಿತಾ ಧನ್ಯವಾದ ಸಮರ್ಪಿಸಿದರು.