ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ತುಳು ಭಾಷೆ- ಸಂಸ್ಕೃತಿಯ ಬೆಳವಣಿಗೆಗೆ ತನ್ನ ಕೈಲಾದ ನೆರವು ನೀಡಲಿದೆ, ಎಂದು ನೂತನ ಮೇಯರ್ ಪ್ರೇಮಾನಂದ ಶೆಟ್ಟಿ ಆಶ್ವಾಸನೆ ನೀಡಿದ್ದಾರೆ.ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ, ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ, ಲಯನ್ಸ್ ಕ್ಲಬ್ ಮಿಲಾಗ್ರಿಸ್ ಮತ್ತು ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜುಗಳ ಸಹಯೋಗದಲ್ಲಿ ರವೀಂದ್ರ ಕಲಾಭವನದಲ್ಲಿ ಶನಿವಾರ ನಡೆದ ʼಮಾಯದ ಮದಿಪುʼ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇದೇ ಸಂಧರ್ಭದಲ್ಲಿ ಮುಖ್ಯ ಅತಿಥಿ, ಲಯನ್ಸ್ ಕ್ಲಬ್ ಮಿಲಾಗ್ರಿಸ್ ಆಧ್ಯಕ್ಷ ಲೋಕೇಶ್ ಶೆಟ್ಟಿ ಮನೆಯಲ್ಲಿ ತುಳು ಭಾಷೆ ಮಾತನಾಡಿದರಷ್ಟೇ ಮಕ್ಕಳು ಕಲಿಯಬಹುದು, ಆಚರಣೆಗಳನ್ನು ಕಲಿಸಿದರಷ್ಟೇ ಮಕ್ಕಳು ಮುಂದುವರಿಸಬಹುದು, ಎಂದರು.ತುಳು ಹಾಸ್ಯ ಕಲಾವಿದ ಭೋಜರಾಜ ವಾಮಂಜೂರು ಮಾತನಾಡಿ ಇತ್ತೀಚೆಗೆ ಅನೇಕ ಕಾಲೇಜುಗಳಲ್ಲಿ ತುಳು ಕಾರ್ಯಕ್ರಮಗಳು ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ. ಭಾಷೆ-ಕಲೆಯಲ್ಲಿ ಆಸಕ್ತಿಯಿರುವ ಮಕ್ಕಳಿಗೆ ಎಳೆವೆಯಿಂದಲೇ ಪ್ರೋತ್ಸಾಹಿಸಿ ಎಂದು ಕಿವಿಮಾತು ಹೇಳಿದರು. ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ರಮೇಶ್ ಮತ್ತು ರವಿಚಂದ್ರ ಪಿ ಎಂ, ಮಂಗಳೂರು ವಿಶ್ವವಿದ್ಯಾನಿಲಯದ ತುಳು ಅಧ್ಯಯನ ಪೀಠಕ್ಕೆ ಧನಸಹಾಯ ಕೊಡಿಸುವ ಸಲುವಾಗಿ ಸರ್ಕಾರದ ಗಮನ ಸೆಳೆಯುವ ಭರವಸೆ ನೀಡಿದರು. ಈ ಮೊದಲು ಪ್ರಾಸ್ತಾವಿಕವಾಗಿ ಮಾತನಾಡಿದ ತುಳು ಸ್ನಾತಕೋತ್ತರ ವಿಭಾಗ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠದ ಸಂಯೋಜಕ ಡಾ.ಮಾಧವ ಎಂ ಕೆ, ತುಳುನಾಡಿನ ಪ್ರತಿ ಭಾಗದಲ್ಲೂ ಸಾಂಸ್ಕೃತಿಕ ವೈಶಿಷ್ಟ್ಯತೆಯಿದೆ. ಅವುಗಳನ್ನು ಪರಿಚಯಿಸುವ ಕೆಲಸವಾಗುತ್ತಿದೆ, ಎಂದರು. ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಡಾ. ಎ. ಹರೀಶ, ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ. ಸುಭಾಷಿಣಿ ಶ್ರೀವತ್ಸ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಇದೇ ಸಂಧರ್ಭದಲ್ಲಿ ಉಪ್ಪಿನಂಗಡಿಯ ವಿಶೇಷ ಸಾಮರ್ಥ್ಯದ ಪ್ರಗತಿಪರ ಕೃಷಿಕ ಯಾದವ್ ಅವರನ್ನು ಸನ್ಮಾನಿಸಲಾಯಿತು. ಕೆಡ್ಡಸ ಹಾಡು, ಏಕಪಾತ್ರಾಭಿನಯ, ಕವನವಾಚನ, ನೃತ್ಯ ಮೊದಲಾದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.