ಮಂಗಳೂರು : ಕುಂಪಲ ಆಶ್ರಯಕಾಲನಿ ನಿವಾಸಿ ವಿದ್ಯಾರ್ಥಿನಿ ಮತ್ತು ಹವ್ಯಾಸಿ ಮಾಡೆಲ್ 17 ವರ್ಷದ ಪ್ರೇಕ್ಷಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಸ್ನೇಹಿತನಾದ ಆರೋಪಿ ಯತೀನ್ ರಾಜ್‍ಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿದೆ.
ಪ್ರೇಕ್ಷಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಯತೀನ್ ರಾಜ್‍ನನ್ನು ಬಂಧಿಸಲಾಗಿದ್ದು, ಮಾರ್ಚ್ 10 ರಂದು ಪ್ರೇಕ್ಷಾಳ ಮೃತ ದೇಹವು ಆಕೆಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆ ದಿನ ಆಕೆಯ ಮನೆಗೆ ಭೇಟಿ ನೀಡಿದ್ದ ಸ್ನೇಹಿತ ಯತೀನ್ ರಾಜ್ ಸೇರಿದಂತೆ ಮೂವರು ಯುವಕರನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದಿದ್ದು, ಆತನ ವಿಚಾರಣೆಯ ವೇಳೆ ಪೊಲೀಸರು ಸಂಗ್ರಹಿಸಿದ ಸಾಕ್ಷ್ಯಗಳ ಆಧಾರದ ಮೇಲೆ ಇಬ್ಬರನ್ನು ಮನೆಗೆ ಕಳುಹಿಸಲಾಗಿದೆ. ಆ ಪೈಕಿ ಯತೀನ್ ರಾಜ್‍ನನ್ನು ಬಂಧನದಲ್ಲಿರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹವ್ಯಾಸಿ ಮಾಡೆಲ್ ಆಗಿದ್ದ ಪ್ರೇಕ್ಷಾಳಿಗೆ ಫೋಟೋ ಶೂಟ್‍ಗೆ ಬೆಂಗಳೂರಿಗೆ ತೆರಳದಂತೆ ಒತ್ತಡ ಹೇರಿದ ಹಿನ್ನೆಲೆ ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗಿದೆ. ಏತನ್ಮಧ್ಯೆ ಪೊಲೀಸರು ಆಶ್ರಯ ಕಾಲೋನಿಯಲ್ಲಿ ಗಾಂಜಾ ಹಾಗೂ ಇತರ ಮಾದಕ ವಸ್ತುಗಳ ಸಾಗಾಟದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಮಾದಕ ವ್ಯಸನಕ್ಕೆ ಒಳಗಾದ 15 ಜನರ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಪೊಲೀಸರು ಅವರನ್ನು ಹುಡುಕುತ್ತಿದ್ದಾರೆ.