ಬನ್ನೂರು: ಕನ್ನಡ ಭಾಷೆ ಈ ನಾಡಿನ ಆಡಳಿತ ಭಾಷೆ. ನಮ್ಮ ನಾಡಿನ ಎಲ್ಲ ಸಂಸ್ಕೃತಿಗಳು ಇದರಲ್ಲಿ ಅಂತರ್ಗತವಾಗಿವೆ. ಆದ್ದರಿಂದ ಕನ್ನಡದ ಬಗ್ಗೆ ಮಕ್ಕಳು ಅಭಿಮಾನ ಬೆಳೆಸಿಕೊಳ್ಳಬೇಕು. ಆದರೆ ಅಂದಾಭಿಮಾನ ಬೇಡ ಎಂದು ಸಾಹಿತಿ, ನಿವೃತ್ತ ಪ್ರಾಧ್ಯಾಪಕ ಪ್ರೊ| ವಿ.ಬಿ. ಅರ್ತಿಕಜೆ ಕಿವಿಮಾತು ಹೇಳಿದರು.
ಪುತ್ತೂರಿನ ಹಾರಾಡಿಯ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಾ| ಶಿವರಾಮ ಕಾರಂತ ಸಾಹಿತ್ಯ ವೇದಿಕೆ ಮತ್ತು ಹಾರಾಡಿ ಶಿವರಂಗದ ಆಶ್ರಯದಲ್ಲಿ ಮಂಗಳವಾರ ನಡೆದ ದ್ವಿತೀಯ ಮಕ್ಕಳ ಸಾಹಿತ್ಯ ಸಂಭ್ರಮ ಮತ್ತು ‘ಹಾರ’ ಶಾಲಾ ವಾರ್ಷಿಕ ಸಂಚಿಕೆಯ ಶಾಲಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಾಹಿತ್ಯ ಸಂಭ್ರಮದ ಸರ್ವಾಧ್ಯಕ್ಷತೆ ವಹಿಸಿದ್ದ ಶಾಲೆಯ ಹಿರಿಯ ವಿದ್ಯಾರ್ಥಿನಿ ಭಾಗ್ಯಲಕ್ಷ್ಮೀ ಮಾತನಾಡಿ, ಓದು ನಮ್ಮ ಮನಸ್ಸನ್ನು ಅರಳಿಸುತ್ತಾ ಸಾಗುತ್ತದೆ. ಇದರಿಂದ ನಾವು ಬೆಳೆಯುತ್ತೇವೆ. ಟಿವಿ, ಮೊಬೈಲ್, ಕಂಪ್ಯೂಟರ್ ಗೇಮ್ ಗಳಲ್ಲಿ ಸಮಯ ಕಳೆಯುವ ಬದಲು ಸಾಹಿತ್ಯದ ಓದಿನ ಕಡೆ ಹೆಚ್ಚಿನ ಒಲವು ಬೆಳೆಸಿಕೊಳ್ಳಬೇಕು. ಶಾಲಾ ಅಭ್ಯಾಸದ ಬಿಡುವಿನಲ್ಲಿ ಮಕ್ಕಳು ತಮ್ಮ ಒಂದಷ್ಟು ಸಮಯವನ್ನಾದರೂ ಓದಿನ ಕಡೆಗೆ ಮೀಸಲಿಡಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಾಹಿತ್ಯದ ಓದು ಮುಖ್ಯ
ಪಾಠ ಮತ್ತು ಪಠ್ಯದ ಓದಿನಂತೆ ಸಾಹಿತ್ಯದ ಓದೂ ಬಹಳ ಮುಖ್ಯ. ಕಥೆ, ಕಾದಂಬರಿ, ಕವನ, ಪ್ರಬಂಧ, ಲೇಖನ ಇತ್ಯಾದಿಗಳನ್ನು ಓದುವ ಅಭ್ಯಾಸ ಇಟ್ಟುಕೊಳ್ಳಬೇಕು. ಆರಂಭದಲ್ಲಿ ಸಾಹಿತ್ಯದ ಓದು ನಮಗೆ ಪಥ್ಯ ಅನಿಸದೇ ಇರಬಹುದು. ಆದರೆ ಓದುವ ಅಭ್ಯಾಸ ಹೆಚ್ಚುತ್ತಾ ಹೋದಂತೆ ಅದು ನಮ್ಮನ್ನು ಬೆಳೆಸುತ್ತಾ ಸಾಗುತ್ತದೆ ಎಂದರು.
ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಸಾಹಿತ್ಯಿಕ ಬರವಣಿಗೆಯುಳ್ಳ ‘ಹಾರ’ ವಾರ್ಷಿಕ ಸಂಚಿಕೆಯನ್ನು ಹಿರಿಯ ರಂಗಕರ್ಮಿ ಐ.ಕೆ. ಬೊಳುವಾರು ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ಮಕ್ಕಳ ಎಳೆ ಮನಸ್ಸು ಕುತೂಹಲದಿಂದ ಎಲ್ಲವನ್ನು ಗಮನಿಸುತ್ತಿರುತ್ತದೆ. ಈ ಕುತೂಹಲಕ್ಕೆ ಒಂದು ಮೂರ್ತರೂಪ ಸಿಗಬೇಕು. ಇದು ಓದಿನಿಂದ ಮಾತ್ರ ಸಾಧ್ಯ. ಓದುವ ಗುಣ ಬೆಳೆದಂತೆ ಮನಸ್ಸು ಪಕ್ವಗೊಳ್ಳುತ್ತದೆ ಎಂದರು.
ಕ್ಷೇತ್ರ ಸಂಪನ್ಮೂಲ ಕೇಂದ್ರದ ಬಿಆರ್‌ಪಿ ಸವಿತಾ ಗುಜ್ರನ್, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಿಆರ್‌ಪಿ ನಾರಾಯಣ ಪುಣಚ, ಹಾರಾಡಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ಪ್ರತಿಮಾ ಯು. ರೈ, ಶಾಲಾ ಮುಖ್ಯ ಶಿಕ್ಷಕ ಮುದರ ಎಸ್. ಮಾತನಾಡಿದರು.
ಶಾಲಾ ಶಿಕ್ಷಕ ಪ್ರಶಾಂತ್ ಅನಂತಾಡಿ ಪ್ರಾಸ್ತಾವಿಕ ಮಾತನಾಡಿ, ಮಕ್ಕಳ ಸಾಹಿತ್ಯ ಸಂಭ್ರಮ ಆಯೋಜನೆಯ ಹಿನ್ನೆಲೆ, ಆಶಯದ ಬಗ್ಗೆ ವಿವರಿಸಿದರು. ಶಾಲೆಯ ಡಾ| ಶಿವರಾಮ ಕಾರಂತ ಸಾಹಿತ್ಯ ವೇದಿಕೆ ಅಧ್ಯಕ್ಷೆ ಶಿವಾನಿ ಬಿ. ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀನಿ ಭಟ್ ವಂದಿಸಿದರು. ಯಕ್ಷಿತಾ ನಿರೂಪಿಸಿದರು. ಬಳಿಕ ನುಡಿನಮನ, ವಿದ್ಯಾರ್ಥಿ ವಿಚಾರಗೋಷ್ಠಿ, ಬೊಂಬೆ ನಾಟಕ ಪ್ರದರ್ಶನ, ವಿದ್ಯಾರ್ಥಿ ಕವಿಗೋಷ್ಠಿ ನಡೆಯಿತು. ಸಂಜೆ ಸಮಾರೋಪ ಸಮಾರಂಭ ನಡೆಯಿತು.
ಅಭಿಮಾನ ಮೂಡಲಿ
ಇಂದು ಮಾತೃಭಾಷಾ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಈಗ ನಾವು ನಮ್ಮ ಮಾತೃಭಾಷೆಯಾದ ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಕರ್ನಾಟಕದಲ್ಲಿ ಸಾರ್ವತ್ರಿಕವಾಗಿ ಕನ್ನಡವನ್ನು ಮಾತೃಭಾಷೆ ಎಂದು ಒಪ್ಪಿಕೊಳ್ಳಲಾಗಿದೆ. ಇದು ಆಡಳಿತ ಭಾಷೆಯೂ ಹೌದು. ಮುಂದಿನ ದಿನಗಳಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು. ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗೆಗಿನ ಅಭಿಮಾನವನ್ನು ಎಳವೆಯಲ್ಲೇ ಮೂಡಿಸಬೇಕು. ಹಾಗಾದಾಗ ಮಾತ್ರ ಮಣ್ಣಿನ ಸಾಂಸ್ಕೃತಿಕ ಘಮದೊಂದಿಗೆ ಬೆಳೆದ ಮಕ್ಕಳು ನಿಜವಾದ ಮಣ್ಣಿನ ಮಕ್ಕಳಾಗುತ್ತಾರೆ, ನಾಡಿನ ಸಂಪತ್ತಾಗುತ್ತಾರೆ ಎಂದು ಪ್ರೊ| ವಿ.ಬಿ. ಅರ್ತಿಕಜೆ ಹೇಳಿದರು.