Monday, January 20, 2025
ಪುತ್ತೂರು

ಬಪ್ಪಳಿಗೆಯ ಅಂಬಿಕಾ ಸಂಸ್ಥೆಯಲ್ಲಿ ಎನ್‍ಡಿಎ ತರಬೇತಿ ತರಗತಿಗಳಿಗೆ ಚಾಲನೆ, ರಾಷ್ಟ್ರೀಯ ಭಾವೈಕ್ಯಕ್ಕೆ ಸೇನೆ ಅತ್ಯುತ್ತಮ ಉದಾಹರಣೆ ; ಕರ್ನಲ್ ಶರತ್ ಚಂದ್ರ ಭಂಡಾರಿ-ಕಹಳೆ ನ್ಯೂಸ್

ಪುತ್ತೂರು : ಜಗತ್ತಿನ ಹತ್ತು ಅತ್ಯುತ್ತಮ ತರಬೇತಿ ಸಂಸ್ಥೆಗಳಲ್ಲಿ ನಮ್ಮ ದೇಶದ ನ್ಯಾಶನಲ್ ಡಿಫೆನ್ಸ್ ಅಕಾಡೆಮಿ ಕೂಡ ಒಂದು ಎನ್ನುವುದು ಅತ್ಯಂತ ಹೆಮ್ಮೆಯ ವಿಚಾರ. ಹಾಗಾಗಿಯೇ ಇಲ್ಲಿಗೆ ಆಯ್ಕೆಯಾಗುವುದು ಅನೇಕರ ಕನಸಾಗಿದೆ. ಪ್ರೌಢಶಾಲಾ ಮಟ್ಟದಿಂದಲೇ ಆ ಕುರಿತು ಅಧ್ಯಯನ, ಅಭ್ಯಾಸ ಆರಂಭಿಸಿ ನಿಗದಿತ ಸಂಗತಿಗಳಲ್ಲಿ ಹಿಡಿತ ಸಾಧಿಸುತ್ತಾ ಮುಂದುವರೆದರೆ ಎನ್‍ಡಿಎ ಪರೀಕ್ಷೆಯಲ್ಲಿ ತೇರ್ಗಡೆಯಾಗಬಹುದು ಎಂದು ನಿವೃತ್ತ ಕರ್ನಲ್ ಶರತ್ ಚಂದ್ರ ಭಂಡಾರಿ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಇಲ್ಲಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿಪೂರ್ವ ಕಾಲೇಜಿನಲ್ಲಿ ಎನ್‍ಡಿಎ ಪರೀಕ್ಷೆಯ ತರಬೇತಿ ತರಗತಿಗಳನ್ನು ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ಎಲ್ಲೆಡೆಯೂ ಜಾತಿ, ಧರ್ಮಗಳ ವಿಷಯವೇ ಪ್ರಚಲಿತದಲ್ಲಿರುವಾಗ ಅಂತಹ ಯಾವ ಸೊಲ್ಲು ಇಲ್ಲದ ಪವಿತ್ರ ತಾಣ ಭಾರತೀಯ ಸೈನ್ಯ. ಇಲ್ಲಿ ಎಲ್ಲರೂ ಸಮಾನರು. ಪ್ರತಿಯೊಂದು ಧರ್ಮದ ಆಚರಣೆ, ಹಬ್ಬಗಳಲ್ಲೂ ಎಲ್ಲಾ ಧರ್ಮದವರು ಭಾಗಿಯಾಗುವುದನ್ನು ನೋಡುವುದೇ ಒಂದು ಸಂಭ್ರಮ. ಹಾಗಾಗಿಯೇ ರಾಷ್ಟ್ರೀಯ ಭಾವೈಕ್ಯಕ್ಕೆ ಭಾರತೀಯ ಸೇನೆ ಅತ್ಯುತ್ತಮ ಉದಾಹರಣೆ. ಇಂತಹ ಶ್ರೇಷ್ಟ ತಂಡದ ಭಾಗವಾಗುವುದಕ್ಕೆ ಅರ್ಹತೆಯೊಂದೇ ಮಾನದಂಡ. ಹಣಬಲದಿಂದಾಗಲೀ, ಪ್ರಭಾವ ಬೀರುವುದರಿಂದಾಗಲೇ ಸೈನಿಕನಾಗಲು ಸಾಧ್ಯವಿಲ್ಲ ಎಂದು ನುಡಿದರು. ಭಾರತೀಯ ಸೈನ್ಯಕ್ಕೆ ಪ್ರತಿವರ್ಷವೂ ಸುಮಾರು ಅರವತ್ತೈದು ಸಾವಿರ ಮಂದಿ ಆಯ್ಕೆಯಾಗುತ್ತಾರೆ. ಅರ್ಜಿ ಸಲ್ಲಿಸಿದವರ ದೇಹದಾಢ್ಯತೆ ಹಾಗೂ ಪರೀಕ್ಷಾ ಸಾಧನೆಯನ್ನು ಗಮನಿಸಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಆದರೆ ಅರ್ಜಿ ಸಲ್ಲಿಸಿದವರ ಪೈಕಿ ಕೇವಲ ಎಂಟು ಶೇಕಡಾದಷ್ಟು ಮಂದಿ ಮಾತ್ರ ಆಯ್ಕೆಯಾಗುತ್ತಾರೆಂಬುದು ಇಲ್ಲಿ ಎಂತಹ ಕಠಿಣ ಸ್ಪರ್ಧೆಯಿದೆ ಎಂಬುದನ್ನು ಬಿಂಬಿಸುತ್ತದೆ. ಭಾರತೀಯ ಸೇನೆಗೆ ಜವಾನನಾಗಿ ಆಯ್ಕೆಯಾದರೂ ಆಂತರಿಕ ಪರೀಕ್ಷೆಗಳನ್ನು ತೇರ್ಗಡೆಯಾಗುವುದರ ಮೂಲಕ ಲೆಪ್ಟಿನೆಂಟ್ ಜನರಲ್ ಹುದ್ದೆಯವರೆಗೂ ಏರಬಹುದು ಎಂದು ತಿಳಿಸಿದರು. ಅಂಬಿಕಾ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಪ್ರಸ್ತಾವನೆಗೈದು ಇಂದು ನಾವು ಸುಖವಾಗಿರುವುದಕ್ಕೆ ಸೈನಿಕರಾಗಿ ಈಗ ನಿವೃತ್ತರಾಗಿರುವವರು ಹಾಗೂ ಈಗಿನ ಯೋಧರೇ ಕಾರಣ. ಆದರೆ ಮುಂದಿನ ದಿನಗಳಲ್ಲೂ ಇಂತಹ ಭದ್ರತೆ ಇರಬೇಕಿದ್ದಲ್ಲಿ ಯುವಶಕ್ತಿ ಹೆಚ್ಚಿನ ಆದ್ಯತೆಯೊಂದಿಗೆ ಸೈನ್ಯಕ್ಕೆ ಸೇರಿಕೊಳ್ಳಬೇಕಿದೆ. ಇಸ್ರೇಲ್‍ನಂತಹ ರಾಷ್ಟ್ರದಲ್ಲಿ ಸೈನ್ಯಕ್ಕೆ ಸೇರ್ಪಡೆ ಕಡ್ಡಾಯಗೊಳಿಸಿದ್ದಾರೆ. ಹಾಗಾಗಿಯೇ ಆ ದೇಶ ಪುಟ್ಟದಾಗಿದ್ದರೂ ಶಕ್ತಿಯುತವಾಗಿರುವುದಕ್ಕೆ ಸಾಧ್ಯವಾಗಿದೆ. ನಮ್ಮ ದೇಶದಲ್ಲಿ ರಾಜಕೀಯಕ್ಕೆ ಅಡಿಯಿಡಲು ಕನಿಷ್ಟ ಹತ್ತು ವರ್ಷಗಳ ಸೈನಿಕ ಸೇವೆ ಕಡ್ಡಾಯ ಎಂದು ಕಾನೂನು ಜಾರಿಯಾದರೆ ನಿಜವಾದ ಪ್ರಾಮಾಣಿಕ ರಾಜಕಾರಣಿಗಳ ಸೃಷ್ಟಿಯಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಸುರೇಶ್ ಶೆಟ್ಟಿ ಮಾತನಾಡಿ ಭಾರತದಲ್ಲಿ ರಾಣಾಪ್ರತಾಪನಿಂದ ತೊಡಗಿ ಇಂದಿನ ಸೈನಿಕರ ವರೆಗೆ ಯೋಧರ ಬಹುದೊಡ್ಡ ಪರಂಪರೆಯೇ ಇದೆ. ಒಮ್ಮೆ ಒಬ್ಬಾತ ಸೈನಿಕನಾಗಿ ಗುರುತಿಸಿಕೊಂಡರೆ ಮತ್ತೆಂದಿಗೂ ಆತ ಸೈನಿಕನಾಗಿಯೇ ಉಳಿದುಕೊಳ್ಳುತ್ತಾನೆ. ಸೈನಿಕನ ಬದುಕು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು ಎಂದು ನುಡಿದರು ವೇದಿಕೆಯಲ್ಲಿ ಕ್ಯಾಪ್ಟನ್ ದೀಪಕ್ ಅಡ್ಯಂತಾಯ, ಹವಾಲ್ದಾರ್ ರಮೇಶ್ ಬಾಬು, ಮಾಜಿ ಸೈನಿಕರ ಸಂಘದ ಗೌರವಾಧ್ಯಕ್ಷ ಸಿ.ಎಫ್.ಎನ್ ತುಳಸೀದಾಸ್, ಕಾರ್ಯದರ್ಶಿ ಸಾಜೆಂಟ್ ಗಣೇಶ್ ಡಿ.ಎಸ್, ನಿವೃತ್ತ ಸೈನಿಕರ ಬಿಲ್ಡಿಂಗ್ ಟ್ರಸ್ಟ್ ಅಧ್ಯಕ್ಷ ಜೋಸೆಫ್ ಡಿಸೋಜ, ಅಂಬಿಕಾ ಸಮೂಹ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ನೇಹ ಹಾಗೂ ಶ್ರದ್ಧಾ ಪ್ರಾರ್ಥಿಸಿದರು. ಅಂಬಿಕಾ ಪಿಯು ಕಾಲೇಜಿನ ಪ್ರಾಚಾರ್ಯ ಶಂಕರನಾರಾಯಣ ಭಟ್ ಸ್ವಾಗತಿಸಿದರು. ಉಪನ್ಯಾಸಕಿ ಸುಚಿತ್ರ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕ ತಿಲೋಶ್ ಕುಮಾರ್ ವಂದಿಸಿ, ಉಪನ್ಯಾಸಕಿ ಗೀತಾ ಸಿ.ಕೆ ಕಾರ್ಯಕ್ರಮ ನಿರ್ವಹಿಸಿದರು.