ರಮಾನಾಥ್ ರೈಗೆ ಆಶ್ಚರ್ಯ ಆಗುವಷ್ಟು, ಸಿದ್ದರಾಮಯ್ಯರಿಗೆ ನಿದ್ದೆ ಬಾರದಷ್ಟು ದೊಡ್ಡ ಸುದ್ದಿ ದ.ಕ ಜಿಲ್ಲೆಯಲ್ಲಿ ಆಗುತ್ತದೆ – ನಳಿನ್ ಕುಮಾರ್
ಮಂಗಳೂರು : ಕಾಂಗ್ರೆಸ್ ಮುಖಂಡ ರಮಾನಾಥ್ ರೈ ಅವರು ಬಿಜೆಪಿಗರು ಕಾಂಗ್ರೆಸ್ ಸೇರುತ್ತಾರೆ ಎಂದು ಕಾದು ಕುಳಿತುಕೊಳ್ಳಲಿ. ಬಿಜೆಪಿಯಲ್ಲಿ ಯಾವತ್ತೂ ಭಿನ್ನಾಭಿಪ್ರಾಯ ಸ್ಫೋಟ ಆಗುವುದಿಲ್ಲ ಎಂದು ಮಂಗಳೂರಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಟಿಕೆಟ್ ಆಕಾಂಕ್ಷಿಯಾಗಿದ್ದವನು ಕೊನೆ ತನಕ ಬಿಜೆಪಿಯಲ್ಲಿ ಹೋರಾಟ ಮಾಡುತ್ತಾನೆ. ಟಿಕೆಟ್ ಸಿಗದೇ ಇದ್ದಾಗ ಟಿಕೆಟ್ ಸಿಕ್ಕ ಅಭ್ಯರ್ಥಿಯನ್ನ ಬೆಂಬಲಿಸಿ ಕೆಲಸ ಮಾಡುತ್ತಾರೆ. ಕಾಂಗ್ರೆಸ್ ಪಟ್ಟಿ ಘೋಷಣೆ ಆದ ಮೇಲೆ ಅಲ್ಲಿನವರು ಕೆಲವರು ನಮ್ಮಲ್ಲಿಗೆ ಬರುತ್ತಾರೆ ಎಂದು ನಳಿನ್ ಕುಮಾರ್ ಹೇಳಿದ್ದಾರೆ.
ನಮ್ಮ ಪಕ್ಷದ ಬಾಗಿಲು ತಟ್ಟುವ ಕಾಂಗ್ರೆಸ್ ಮುಖಂಡರನ್ನ ನಾವು ಸೇರಿಸಿಕೊಳ್ಳುತ್ತೇವೆ. ರಮಾನಾಥ್ ರೈಗೆ ಆಶ್ಚರ್ಯ ಆಗುವಷ್ಟು, ಸಿದ್ದರಾಮಯ್ಯರಿಗೆ ನಿದ್ದೆ ಬಾರದಷ್ಟು ದೊಡ್ಡ ಸುದ್ದಿ ದ.ಕ ಜಿಲ್ಲೆಯಲ್ಲಿ ಆಗುತ್ತದೆ ಎಂದು ಬಾಂಬ್ ಸಿಡಿಸಿದ್ದಾರೆ.
ನಮ್ಮ ಎಲ್ಲಾ ಕ್ಷೇತ್ರಗಳಿಗೆ ನಾವು ಕೊಟ್ಟ ಹೆಸರುಗಳ ಆಧಾರದಲ್ಲಿ ಮತ್ತೆ ಸಮೀಕ್ಷೆಯಾಗುತ್ತಿದೆ. ಜನಾಭಿಪ್ರಾಯದ ಮುಖೇನ ಗೆಲುವಿನ ಅಭ್ಯರ್ಥಿಗೆ ಟಿಕೆಟ್ ಕೊಡುವ ಕೆಲಸವಾಗುತ್ತಿದೆ. ನಾನು ಪಕ್ಷದ ಕಾರ್ಯಕರ್ತನಾಗಿದ್ದು, ನಾನು ಪಕ್ಷದ ಬೆಂಬಲಿಗ. ಹೀಗಾಗಿ ಯಾರ ಪರವೂ ಬ್ಯಾಟಿಂಗ್ ಮಾಡಲ್ಲ, ಯಾರ ಟಿಕೆಟ್ ಕೂಡ ತಡೆ ಹಿಡಿಯಲ್ಲ. ಈ ಬಗ್ಗೆ ಎದ್ದಿರುವ ಸಂಶಯ ಕೇವಲ ಊಹಾಪೋಹಗಳಷ್ಟೇ ಟಿಕೆಟ್ ಸಿಗದೇ ಇದ್ದಾಗ ಆಕ್ರೋಶಗೊಂಡು ಬೈಯ್ಯುವುದು ಸಹಜ. ಆದರೆ ಬೈದರೂ ಮತ್ತೆ ನಾವು ಒಂದಾಗಿ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು.
ಇನ್ನು ರಮಾನಾಥ್ ರೈ, ಖಾದರ್, ಅಭಯರ ಬೆಂಬಲಿಗರು ಇದ್ದರೆ ನಾನು ಬಿಜೆಪಿಗೆ ತೆಗೆದುಕೊಳ್ಳುತ್ತೇನೆ. ಅಲ್ಲಿ ಅವರಿಗೆ ಟಿಕೆಟ್ ಕೊಡದೇ ಇದ್ದರೆ ನಮಲ್ಲಿಗೆ ಬಂದರೆ ನಾವು ಅವರನ್ನು ಸ್ವಾಗತಿಸುತ್ತೇವೆ, ಆದರೆ ಟಿಕೆಟ್ ನೀಡುವುದಿಲ್ಲ ಎಂದು ನಳಿನ್ ಕುಮಾರ್ ಹೇಳಿದ್ದಾರೆ.