ಉಡುಪಿ : ಪಡುಬಿದ್ರೆ ನಡ್ಸಾಲು ಗ್ರಾಮದ ಮನೆಯೊಂದರಲ್ಲಿ 57 ವರ್ಷದ ಸುಂದರಿ ದೇವಾಡಿಗ ಅನಾರೋಗ್ಯಕ್ಕೆ ತುತ್ತಾಗಿ ಗಂಭೀರ ಸ್ಥಿತಿಯಲ್ಲಿದ್ದರು. ಅವರು ಚಿಕಿತ್ಸೆ ಪಡೆಯಲು ಅಸಾಹಯಕರಾಗಿ ಮನೆಯಲ್ಲಿ ಮಲಗಿದ್ದಲ್ಲಿ ದಿನಗಳ ಕಳೆಯುತ್ತಿದರು.
ವಿಷಯ ತಿಳಿದ ಉಡುಪಿಯ ಸಾಮಾಜಿಕ ಕಾರ್ಯಕರ್ತರು, ಮಹಿಳೆಯನ್ನು ರಕ್ಷಿಸಿ, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿ ಮಾನವಿಯತೆ ಮೆರೆದ ಘಟನೆಯು ಒಂದು ತಿಂಗಳ ಹಿಂದೆ ನಡೆದಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮಹಿಳೆ ಮಾರ್ಚ್ 2, ರಂದು ಮೃತಪಟ್ಟಿದ್ದರು. ಮೃತದೇಹವನ್ನು ಆಸ್ಪತ್ರೆಯವರು ಸಂಬಂಧಿಕರ ಬರುವಿಕೆಗಾಗಿ ಶವಾಗಾರದ ಶೀತಲಿಕರಣ ಘಟಕದಲ್ಲಿ ರಕ್ಷಿಸಿ ಇಟ್ಟಿದ್ದರು. ಮೃತ ಮಹಿಳೆಯ ಅಂತ್ಯಸಂಸ್ಕಾರ ನಡೆಸಲು ಹತ್ತಿರದ ಸಂಬಂಧಿಕರು ಇಲ್ಲದೆ ಇರುವುದರಿಂದ, ಪಡುಬಿದ್ರೆಯ ದೇವಾಡಿಗ ಸಮಾಜದವರು ಮಹಿಳೆ ಮೃತಪಟ್ಟು 15 ದಿನಗಳ ಬಳಿಕ, ಕಾನೂನು ಪ್ರಕ್ರಿಯೆಗೆ ಸೂಕ್ತ ದಾಖಲೆಗಳ ಒದಗಿಸಿ ಆಸ್ಪತ್ರೆಯಿಂದ ಶವವನ್ನು ವಶಕ್ಕೆ ಪಡೆದು, ಉದ್ಯಾವರದ ಹಿಂದು ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರವನ್ನು ಬುಧವಾರ ನಡೆಸಿ ಮಾನವಿಯತೆ ಮೆರೆದರು. ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಸಹಕರಿಸಿದರು. ದೇವಾಡಿಗ ಸಮಾಜದ ಗಣೇಶ ದೇವಾಡಿಗ, ಜಯಣ್ಣ, ಭೋಜ ಶೇರಿಗಾರ, ರವಿ, ವಿಠಲ, ಪ್ರಕಾಶ್ ಮೊದಲಾದವರು ಅಂತ್ಯಸಂಸ್ಕಾರ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು.