ಮರಗೋಡು ಭಾರತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ರೋಟರಿ ಮತ್ತು ನಾವಿಕ ಸಂಸ್ಥೆಗಳ ಸಹಯೋಗದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಟ್ಯಾಬ್ ಗಳನ್ನು ವಿತರಣೆ-ಕಹಳೆ ನ್ಯೂಸ್
ಮಡಿಕೇರಿ : ಸಮಾಜದಲ್ಲಿ ಸಹಾಯದ ನಿರೀಕ್ಷೆಯಲ್ಲಿರುವ ವರ್ಗವಿರುವಂತೆ ಸಹಾಯದ ಹಸ್ತ ಚಾಚಲು ಸಿದ್ಧವಾಗಿರುವ ವರ್ಗವೂ ಇರುತ್ತದೆ. ರೋಟರಿ ಸಂಸ್ಥೆಯು ಸಮಾಜಮುಖಿ ಕಾರ್ಯದಲ್ಲಿ ನಿರಂತರವಾಗಿ ತೊಡಗುತ್ತಿದ್ದು ವಿದ್ಯಾರ್ಥಿಗಳು ಇದರ ಸಹಾಯವನ್ನು ಪಡೆದುಕೊಂಡು ಪ್ರಗತಿ ಸಾಧಿಸಬೇಕೆಂದು ರೋಟರಿ ಸಂಸ್ಥೆಯ ಅಧ್ಯಕ್ಷ ಪಿ.ಟಿ.ಗಣಪತಿ ಕರೆ ನೀಡಿದರು.
ಮರಗೋಡು ಭಾರತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ರೋಟರಿ ಮತ್ತು ನಾವಿಕ ಸಂಸ್ಥೆಗಳ ಸಹಯೋಗದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಟ್ಯಾಬ್ ಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು. ನಾವಿಕ ಸಂಸ್ಥೆಯ ಪ್ರತಿನಿಧಿ ಬೊಳ್ಳೂರು ಜಯಪ್ರಕಾಶ್ ಮಾತನಾಡಿ, ಅಮೇರಿಕಾ ದೇಶದ ನಾನಾ ಭಾಗಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಸಾಂಸ್ಕøತಿಕವಾಗಿ ಸಂಘಟಿಸಲೆಂದು ಅಸ್ತಿತ್ವಕ್ಕೆ ಬಂದ ಸಂಸ್ಥೆಯೇ ನಾವು ವಿಶ್ವ ಕನ್ನಡಿಗರು (ನಾವಿಕ). ಶಿಕ್ಷಣ ,ಉದ್ಯೋಗ ನಿಮಿತ್ತ ಅಮೇರಿಕಾದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಕನ್ನಡಿಗರು ನೆಲೆಸಿದ್ದು ,ಈ ಅನಿವಾಸಿ ಕನ್ನಡಿಗರು ಕನ್ನಡ ನಾಡು, ನುಡಿ, ಸಂಸ್ಕೃತಿ, ಸಾಹಿತ್ಯ, ಪರಂಪರೆಯ ಹಿರಿಮೆಯನ್ನು ತಮ್ಮ ಮುಂದಿನ ಪೀಳಿಗೆಗೂ ಒಯ್ಯುವುದರ ಜೊತೆಯಲ್ಲಿ ತಾಯ್ನಾಡಿನ ಜನ-ಜೀವನಕ್ಕೆ ಆಸರೆ ನೀಡುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆ. 2021 ರಲ್ಲಿ ದೇಣಿಗೆ ಸಂಗ್ರಹಣೆಯ ಹೊಸ ವರ್ಷಕೊಂದು ಹೊಸ ಯೋಜನೆಯಾಗಿ ಕಡಲಾಚೆಯಿಂದ ನಿಮ್ಮಂಗಳಕೆ ಜ್ಞಾನ ದೀವಿಗೆ ಎಂಬ ಹೆಸರಿನಲ್ಲಿ ರೋಟರಿ ಕ್ಲಬ್, ಪಬ್ಲಿಕ್ ಟಿ ವಿ, ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ನಿಮ್ಮ ಶಾಲೆಗೆ ನಿಮ್ಮ ಕೊಡುಗೆ ಎಂಬ ಯೋಜನೆ ರೂಪಿಸಿ 10 ನೇ ತರಗತಿಯ ವಿಷಯಗಳನ್ನು ಪೂರ್ವದಲ್ಲೇ ಅಳವಡಿಸಿದ ಟ್ಯಾಬ್ ಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ ಎಂದು ವಿವರಿಸಿದರು. 1952 ರಲ್ಲಿ ಸ್ಥಾಪಿತವಾದ ರೋಟರಿಯ ಶಾಖೆಗಳು ಪ್ರಪಂಚದಾದ್ಯಂತ 200 ದೇಶಗಳಲ್ಲಿ ಹರಡಿದ್ದು, ರೋಟರಿ ಜಿಲ್ಲಾ ಸಂಖ್ಯೆ 3181 ರ ಅಡಿಯಲ್ಲಿ 85 ರೋಟರಿ ಘಟಕಗಳಿದ್ದು ಅತಿ ಹಳೆಯ ಘಟಕವೆಂಬ ಮಾನ್ಯತೆಯನ್ನು ಕೊಡಗು ಘಟಕ ಹೊಂದಿದೆ. ಕೊಡಗು ರೋಟರಿ ಘಟಕದಿಂದ ಪ್ರತಿ ವರ್ಷ ಸರ್ಕಾರಿ ಶಾಲೆಗಳಲ್ಲಿ ಓದುವ 40 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಮಡಿಕೇರಿಯ ಸರಕಾರಿ ಪ್ರೌಢಶಾಲೆಗೆ 39ಸಾವಿರ ರೂಪಾಯಿ ಮೌಲ್ಯದ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಗಿದೆ.ಪ್ರತಿ ವರ್ಷ ಸಾಧಕ ಶಿಕ್ಷಕರಿಗೆ ಸನ್ಮಾನ ಮಾಡುತ್ತಿದ್ದು ರೋಟರಿಯಲ್ಲಿ ಅಧಿಕಾರದ ಆಸೆ, ಸ್ವಾರ್ಥಕ್ಕಿಂತ ಸೇವೆ ಮಾಡುವುದು ಮುಖ್ಯವಾಗಿದೆ ಎಂದು ತಿಳಿಸಿದರು. ನಾವಿಕ ಸಂಸ್ಥೆಯ ಪಲ್ಲವಿ ಜಯಪ್ರಕಾಶ್ ಮಾತನಾಡಿ, ಶೈಕ್ಷಣಿಕ ಅಭಿವೃದ್ಧಿಯಾಗಲು ವಿದ್ಯಾರ್ಥಿಗಳು ತಂತ್ರಜ್ಞಾನಕ್ಕೆ ತೆರೆದುಕೊಳ್ಳಬೇಕು ಎಂದು ಕರೆ ನೀಡಿದರು. ಬಳಿಕ ಟ್ಯಾಬ್ ನ ಬಳಕೆಯ ವಿಧಿ, ವಿಧಾನಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಭಾರತಿ ಹೈಸ್ಕೂಲ್ ಸೊಸೈಟಿಯ ಅಧ್ಯಕ್ಷ ಕಟ್ಟೆಮನೆ ಸೋನ ಶಾಲೆ ಕಾಲೇಜುಗಳಲ್ಲಿ ರೋಟರಿ ಇಂಟರ್ಯಾಕ್ಟ್ ಕ್ಲಬ್ ನ್ನು ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಸ್ಥಾಪಿಸಿರುವುದರ ಬಗ್ಗೆ ಮಾಹಿತಿ ನೀಡಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕ ಪಿ ಎಸ್ ರವಿಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಟರಿ ಜಿಲ್ಲಾ ಕಾರ್ಯದರ್ಶಿ ಗೀತಾ ಗಿರೀಶ್, ಧನು ಗಣಪತಿ, ಭಾರತಿ ವಿದ್ಯಾಸಂಸ್ಥೆ ಉಪಾಧ್ಯಕ್ಷ ಕೋಚನ ಲವಿನ್, ನಿರ್ದೇಶಕರಾದ ಬಿ.ಎಸ್ ಪ್ರಭುಶೇಖರ್, ಮಾಳಿಗೆಮನೆ ದೇವಯ್ಯ, ಬಡುವಂಡ್ರ ಕವಿತಾ, ಬಳಪದ ಜಯಕುಮಾರ್, ಪ್ರಾಂಶುಪಾಲ ಸುರೇಶ್ ನಾಯ್ಕ್ ಉಪಸ್ಥಿತರಿದ್ದರು. ಶಿಕ್ಷಕಿ ಬಿ.ಬಿ ಪೂರ್ಣಿಮಾ ಸ್ವಾಗತಿಸಿ, ಎಂ ಪಿ ವೀಣಾ ವಂದಿಸಿದರು.