Recent Posts

Friday, November 22, 2024
ಕಡಬ

ಕಡಬ : ಮಧ್ಯರಾತ್ರಿ ಮನೆಗೆ ನುಗ್ಗಿ ಅರಣ್ಯಾಧಿಕಾರಿಗಳಿಂದ ದೌರ್ಜನ್ಯ ಆರೋಪ – ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲಿಸಲು ನ್ಯಾಯಾಲಯದ ಆದೇಶ | ಕಳೆದ 6 ದಿನಗಳಿಂದ ನಡೆಯುತ್ತಿದ್ದ ಉಪವಾಸ ಅಂತ್ಯ-ಕಹಳೆ ನ್ಯೂಸ್

ಕಡಬ : ರಾತ್ರೋ ರಾತ್ರಿ ಮನೆಗೆ ನುಗ್ಗಿ ತನಿಖೆಯ ಸೋಗಿನಲ್ಲಿ ದೌರ್ಜನ್ಯ ಎಸಗಿದ್ದಾರೆ , ಅವರ ವಿರುದ್ದ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಕಡಬದ ಐತೂರು ನಿವಾಸಿ ಪದ್ಮಯ್ಯ ಗೌಡರ ಕುಟುಂಬ ಸದಸ್ಯರು ಹಾಗೂ ನೀತಿ ತಂಡದ ರಾಜ್ಯಾಧ್ಯಕ್ಷ ಜಯನ್.ಟಿ. ಅವರು ಮಾ.15ರಿಂದ ಕಡಬ ತಹಸೀಲ್ದಾರ್ ಕಛೇರಿಯ ಸಮೀಪ ನಡೆಸುತ್ತಿದ್ದ ಉಪಾವಸ ಸತ್ಯಾಗ್ರಹ 6 ನೇ ತಾರ್ಕಿಕ ಅಂತ್ಯ ಕಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ದೌರ್ಜನ್ಯ ಎಸಗಿದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರ ವಿರುದ್ದ ಪ್ರಕರಣ ದಾಖಲಿಸುವಂತೆ ಕೋರಿ ಸೀತಮ್ಮ ಎಂಬವರು ಪುತ್ತೂರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದು ಅದನ್ನು ಪುರಸ್ಕರಿಸಿದ ನ್ಯಾಯಾಲಯವೂ ದೌರ್ಜನ್ಯ ಎಸಗಿದ ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಆದೇಶ ನೀಡಿದೆ. ಅಧಿಕಾರಿಗಳು ಆಗಲಿ, ಜನಪ್ರತಿನಿಧಿಗಳು ಆಗಲಿ ದೂರುದಾರರ ನೆರವಿಗೆ ಬಾರದ ಹಿನ್ನಲೆಯಲ್ಲಿ ಕಾನೂನಿನ ಮೊರೆ ಹೋದ ಕುಟುಂಬಕ್ಕೆ ನ್ಯಾಯಾಲಯದ ಮೂಲಕ ಪುರಸ್ಕಾರ ಸಿಕ್ಕಿದೆ .ಈ ಹಿನ್ನಲೆಯಲ್ಲಿ 6 ದಿನಗಳ ಕಾಲ ನಡೆದ ಉಪವಾಸ ಸತ್ಯಾಗ್ರಹ ಯಶಸ್ವಿಯಾಗಿ ಮುಕ್ತಾಯ ಹೊಂದಿತು.

ಪ್ರಕರಣದ ವಿವರ :

ಸುಬ್ರಹಣ್ಯ ವಲಯ ರಕ್ಷಿತಾರಣ್ಯದ ಐತ್ತೂರು ಭಾಗದ ಅರಣ್ಯದಲ್ಲಿ ಕೋಟ್ಯಾಂತರ ಪ್ರಮಾಣದ ಬೆಳೆಬಾಳುವ ಮರಗಳನ್ನು ಕಡಿದು ಅಕ್ರಮವಾಗಿ ಮಾರಾಟ ಮಾಡಲಾಗಿದೆ, ಇದರಲ್ಲಿ ಅರಣ್ಯಾಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿ ಐತ್ತೂರು ಗ್ರಾಮದ ಮೂಜೂರು ನಿವಾಸಿ ಪ್ರಸಾದ್ ಎನ್ನುವವರು ಸಾಕ್ಷಿ ಸಮೇತ ಸಂಬಂಧಪಟ್ಟ ಇಲಾಖೆ ದೂರು ನೀಡಿದ್ದರು.

ಆದರೆ ಇದಕ್ಕೆ ಯಾವುದೇ ಸ್ಪಂದನ ದೊರೆಯದಿದ್ದಾಗ ರಾಜ್ಯ ಸರಕಾರದ ಅಧೀನ ಕಾರ್ಯದರ್ಶಿ ಅವರಿಗೆ ದೂರು ನೀಡಲಾಗಿತ್ತು. ಇದರ ಪರಿಣಾಮವಾಗಿ ತನಿಖಾ ಆದೇಶ ಹೊರ ಬಿದ್ದಿತ್ತು. ಅರಣ್ಯ ಸಂಚಾರಿ ದಳದ ಮುಖ್ಯಸ್ಥೆ ಸಂಧ್ಯಾ ನೇತೃತ್ವದ ತಂಡ ತನಿಖೆಯ ಕಾರ್ಯಚರಣೆಗೆ ಇಳಿದಿತ್ತು. ಮುಂದಿನ ಬೆಳವಣಿಗೆಯಲ್ಲಿ ಮಾ. 2ರಂದು ರಾತ್ರಿ ಸಂಚಾರಿ ದಳದ ಸಂಧ್ಯಾ ಮತ್ತು ಅರಣ್ಯಾಧಿಕಾರಿಗಳು, ಪೋಲೀಸರು ಹಾಗೂ ಇನ್ನಿತರ ಕೆಲವು ಜನ ಪ್ರಸಾದ್ ಮನೆಗೆ ದಾಳಿ ನಡೆಸಿ ದಾಂಧಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು. ಇದಕ್ಕೆ ಪೂರಕವೆಂಬಂತೆ ದಾಳಿ ವೇಳೆ ದರ್ಪದಿಂದ ವರ್ತಿಸಿದ ವಿಡಿಯೋ ಕೂಡಾ ವೈರಲ್‌ ಆಗಿತ್ತು. ಈ ಸಂದರ್ಭ ದೂರುದಾರನ ಮೇಲೆ ಹಗೆ ಸಾಧನೆ ಮಾಡಲಾಗಿದೆ ಎಂದು ಪ್ರಸಾದ್ ಕುಟುಂಬ ಆರೋಪಿಸಿತ್ತು

ರಾತ್ರಿ ಪ್ರಸಾದ್ ಅವರು ಮನೆಯಲ್ಲಿ ಇಲ್ಲದ ವೇಳೆ ಮನೆಯೊಳಗಿನ ಅಟ್ಟಕ್ಕೆ ಹಾಸಲಾಗಿದ್ದ 30 ವರ್ಷ ಹಳೆಯದಾದ ಮಾವಿನ ಮರದ ಹಲಗೆಗಳನ್ನು ಕಿತ್ತು, ವಶಪಡಿಸಿಕೊಳ್ಳಲಾಗಿದೆ , ಮಹಿಳೆಯರು ಹಾಗೂ ಮಗು ಎಂದು ಯಾವುದೇ ಕನಿಕರ ತೋರದೆ ದೌರ್ಜನ್ಯವೆಸಗಲಾಗಿತ್ತು ಎನ್ನುವ ಆರೋಪ ಕೂಡಾ ಕೇಳಿ ಬಂತು. ಅಧಿಕಾರಿಗಳು ಮಾತ್ರವಲ್ಲದೆ ಐತ್ತೂರು ವಲಯದಲ್ಲಿ ಮರಳು ದಂಧೆಯಲ್ಲಿ ತೊಡಗಿಸಕೊಂಡಿರುವ ವ್ಯಕ್ತಿಯೊಬ್ಬ ಬೂಟು ಕಾಲಿನಿಂದ ಒಳಗೆ ಪ್ರವೇಶಿಸಿ ದೇವರ ಕೋಣೆಗೆ ಹೋಗಿರುವುದಲ್ಲದೆ, ಅಟ್ಟಕ್ಕೆ ಹತ್ತಿ ಧಾರ್ಮಿಕ ಭಾವನೆಗೆ ದಕ್ಕೆ ಉಂಟು ಮಾಡಿದ್ದಾರೆ ಎಂದು ಮನೆಯವರು ಆರೋಪಿಸಿದ್ದರು.

ಉಪವಾಸ ಸತ್ಯಾಗ್ರಹ :

ಬಳಿಕ ಪ್ರಸಾದ್ ಮೇಲೆ ಹೆಬ್ಬಲಸು ಮರ ಮತ್ತು ಇತ್ತರ ಬೆಳೆಬಾಳುವ ಮರಗಳನ್ನು ಕಡಿದು ಮನೆಯಲ್ಲಿ ಅಕ್ರಮವಾಗಿ ಇಟ್ಟುಕೊಂಡಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು. ಈ ದಾಳಿ ವೇಳೆ ಪ್ರಸಾದ್ ತಾಯಿ ಸೀತಮ್ಮ ಅವರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಈ ಬಗ್ಗೆ ದೂರು ನೀಡಲಾಗಿದ್ದೂ ಇದಕ್ಕೆ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಅರಣ್ಯಾಧಿಕಾರಿಗಳು ಹಾಗೂ ಇತರ ಸಿಬ್ಬಂದಿಗಳು ದಾಂಧಲೆ ನಡೆಸಿ ದೌರ್ಜನ್ಯ ನಡೆಸಿದ್ದಾರೆ ಎಂದು ದೂರು ನೀಡಿದ್ದರೂ ಪ್ರಕರಣ ದಾಖಲಾಗಿರಲಿಲ್ಲ.

ಪ್ರಸಾದ್ ಕುಟಂಬದ ಬೆನ್ನಿಗೆ ನಿಂತು ಪ್ರಕರಣ ದಾಖಲಿಸಬೇಕೆಂದು ರೈತ ಸಂಘದ ಪ್ರಮುಖರು, ಮಲೆನಾಡು ಜನಹಿತರಕ್ಷಣಾ ಸಮಿತಿಯವರಯ ಕಡಬ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದರು. ಇದಾದ ಬಳಿಕ ನೀತಿ ತಂಡ ಎನ್ನುವ ಸಮಾಜಿಕ ಸಂಘಟನೆ ಕೂಡಾ ಪ್ರಸಾದ್ ಬೆಂಬಲಕ್ಕೆ ನಿಂತು, ಪ್ರತಿಭಟನೆ ಮನವಿ ಸಲ್ಲಿಸಿತು. ಯಾವುದೇ ಪ್ರಯೋಜವಾಗಿರಲಿಲ್ಲ.

ಇದರಿಂದ ಅಕ್ರೋಶಗೊಂಡ ನೀತಿ ತಂಡದ ರಾಜ್ಯಾಧ್ಯಕ್ಷ ಜಯನ್ ಟಿ ಅವರು ಅರಣ್ಯಾಧಿಕಾರಿಗಳು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿ ಕಳೆದ ಆರು ದಿನಗಳಿಂದ ಕಡಬ ತಹಶಿಲ್ದಾರ್ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಸತ್ಯಾಗ್ರಹದ ಐದನೇ ದಿನ ಕೈಯನ್ನು ಕೊಯಿದ್ದುಕೊಂಡು ರಕ್ತ ಲೇಪಿತ ಫಲಕ ಬರೆಯುವ ಮೂಲಕ ನ್ಯಾಯಕ್ಕಾಗಿ ಮನವಿ ಸಲ್ಲಿಸಿದ್ದರು.

ಅಧಿಕಾರಿಗಳ ಅಸಡ್ಡೆ :

ಕಡಬ ಎಸ್.ಐ ರುಕ್ಮ ನಾಯ್ಕ್, ತಹಶಿಲ್ದಾರ್ ಅನಂತಶಂಕರ್ ಹಾಗೂ ಪುತ್ತೂರು ಸಹಾಯಕ ಆಯುಕ್ತ ಡಾ. ಯತೀಶ್ ಉಳ್ಳಾಲ್ ಪ್ರತಿಭಟನಾಕಾರರ ಮನವೊಲಿಕೆ ಮಾಡಲು ಯತ್ನಿಸಿ ವಿಫಲರಾಗಿದ್ದರು. ಅರಣ್ಯಾಧಿಕಾರಿಗಳು ಕಾನೂನು ರೀತಿಯಲ್ಲಿ ಪ್ರಸಾದ್ ಮನೆಗೆ ದಾಳಿ ನಡೆಸಿದ್ದಾರೆ, ಅವರ ವಿರುದ್ಧ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಕಡ್ಡಿ ಮುರಿದಂತೆ ಹೇಳುತ್ತಿದ್ದರೆ. ಇದಕ್ಕೆ ಪ್ರತಿಭಟನಕಾರರು ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ಹಿಂಬರಹ ನೀಡಿ ಎಂದು ಅಗ್ರಹಿಸಿದ್ದರು. ಪ್ರತಿಭಟನೆಗೆ ತಾಲೂಕಿನ ಹಲವು ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿದ್ದರು. ಈ ಮಧ್ಯೆ ಜೆಡಿಯಸ್ ಪ್ರಮುಖರು ಸ್ಥಳಕ್ಕೆ ಬಂದು ಮಾಜಿ ಮುಖ್ಯ ಮಂತ್ರಿ ಮೂಲಕ ಸದನದಲ್ಲಿ ಈ ಘಟನೆ ಬಗ್ಗೆ ಪ್ರಶ್ನಿಸುವ ಭರವಸೆ ನೀಡಿದರು.

ಕಾಂಗ್ರೇಸ್ ಮುಖಂಡೆ ಹಾಗೂ ಪುತ್ತೂರು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಯವರು ಮಧ್ಯಾಹ್ನ ಪ್ರತಿಭಟನೆ ಸ್ಥಳಕ್ಕೆ ಬಂದು ಎಲ್ಲಾ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರೂ ಪ್ರಕರಣ ದಾಖಲಿಸಲು ಆಗಲೀ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂಬುದಾಗಿ ಹಿಂಬರಹ ನೀಡಲು ಅಧಿಕಾರಿಗಳು ಮುಂದೆ ಬಂದಿರಲಿಲ್ಲ.ಆದರೂ ಪ್ರತಿಭಟನೆ ಸ್ಥಳದಲ್ಲೇ ಇದ್ದ ಶಕುಂತಲಾ ಶೆಟ್ಟಿ ಅವರು ನಿರಂತರವಾಗಿ ಅಧಿಕಾರಿಗಳೊಂದಿಗೆ ವಿನಂತಿ ಮಾಡುತ್ತಲೇ ಇದ್ದರು.
ಈ ವೇಳೆ ನ್ಯಾಯಾಲಯವೂ ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲಿಸುವಂತೆ ಆದೇಶ ನೀಡಿದ ಮಾಹಿತಿಯೂ ಪ್ರತಿಭಟನಾಕಾರರಿಗೆ ಲಭ್ಯವಾಯಿತು . ತಕ್ಷಣವೇ ಎಳನೀರು ನೀಡುವ ಮೂಲಕ ಶಕುಂತಲಾ ಶೆಟ್ಟಿ ಅವರು ಪ್ರತಿಭಟನೆ ಮುಕ್ತಾಯಗೊಳಿಸಿದರು. ದೂರು ದಾರೆ ಸೀತಮ್ಮ ಪರ ವಕೀಲರಾದ ನಾಗೇಶ್ ಶರ್ಮಾ ವಾದಿಸಿದರು