ಇಳಿವಯಸ್ಸಿನಲ್ಲೂ ಏಕಾಂಗಿಯಾಗಿ ರಸ್ತೆ ದುರಸ್ತಿ; ಮಚ್ಚಿನ ಗ್ರಾ.ಪಂ. ರಸ್ತೆಗೆ ನಾಣ್ಯಪ್ಪ ಗೌಡರ ಕರಸೇವೆ-ಕಹಳೆ ನ್ಯೂಸ್
ಬೆಳ್ತಂಗಡಿ : ಹತ್ತಾರು ಮಂದಿ ನಿತ್ಯ ಅವಲಂಬಿಸುವ ಗ್ರಾಮ ಪಂಚಾಯತ್ ರಸ್ತೆಯನ್ನು 74ರ ಇಳಿವಯಸ್ಸಿನಲ್ಲೂ ಏಕಾಂಗಿಯಾಗಿ ಹಾರೆ, ಪಿಕ್ಕಾಸು ಹಿಡಿದು ಮೂರು ತಿಂಗಳುಗಳ ಅವಧಿಯಲ್ಲಿ ರಸ್ತೆ ದುರಸ್ತಿ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಬೆಳ್ತಂಗಡಿ ತಾಲೂಕು ಮಚ್ಚಿನ ಗ್ರಾಮದ ಕೋಡಿ ನಾಣ್ಯಪ್ಪ ಗೌಡರು.
ಮಚ್ಚಿನ ಗ್ರಾಮದ ನೇರೊಳ್‍ಪಲ್ಕೆ ಕುಕ್ಕಿಲ, ಮಾಯಿಲೋಡಿಗೆ ಸಾಗುವ ಮಣ್ಣಿನ ರಸ್ತೆ ತೀರಾ ಹದಗೆಟ್ಟಿದ್ದು, ನಾಣ್ಯಪ್ಪ ಗೌಡರು 74ರ ಇಳಿವಯಸ್ಸಿನಲ್ಲೂ ಏಕಾಂಗಿಯಾಗಿ ರಸ್ತೆಗೆ ವಾಲಿಕೊಂಡಿದ್ದ ಬಿದಿರು ಮೆಳೆಗಳನ್ನು ಸವರಿಸಿದ್ದಾರೆ. ಕಚ್ಚಾ ರಸ್ತೆಯಾದ್ದರಿಂದ ಮಳೆ ನೀರು ಹರಿಯಲು ಅಡ್ಡಲಾಗಿ ಟ್ರೆಂಚ್ ನಿರ್ಮಿಸಿ, ರಸ್ತೆಯನ್ನೂ ಸಮತಟ್ಟುಗೊಳಿಸಿದ್ದಾರೆ. ಇನ್ನು ಮೋರಿ ಸಮೀಪ ಬಿರುಕು ಬಿಟ್ಟಲ್ಲಿಗೆ ತಾವೇ ಕಲ್ಲುಗಳನ್ನು ಆಯ್ದು ತಂದು ತುಂಬಿ ಸಮತಟ್ಟು ಮಾಡಿದ್ದಾರೆ. ಸಧ್ಯ ನಾಣ್ಯಪ್ಪ ಗೌಡರ ನಿಸ್ವಾರ್ಥ ಸೇವೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.