ಕೊರಟಗೆರೆಯಲ್ಲಿ ಕಾಟಚಾರಕ್ಕೆ ಗ್ರಾಮವಾಸ್ತವ್ಯ ಕಾರ್ಯಕ್ರಮ ನಡೆಸಿದ ಅಧಿಕಾರಿಗಳು, ಸರ್ಕಾರದ ಆದೇಶ ಧಿಕ್ಕರಿಸಿ ಮನೆಯತ್ತ ಮುಖ ಮಾಡಿದ ತಹಸೀಲ್ದಾರ್-ಕಹಳೆ ನ್ಯೂಸ್
ಕೊರಟಗೆರೆ : ಗ್ರಾಮೀಣ ಪ್ರದೇಶದ ಬಡಜನರ ಹತ್ತಾರು ವರ್ಷದ ಸಮಸ್ಯೆಗಳನ್ನು ಇದ್ದಲ್ಲೇ ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಗ್ರಾಮ ವಾಸ್ತವ್ಯ ಮಾಡಲು ಕಟ್ಟುನಿಟ್ಟಿನ ಆದೇಶ ಮಾಡಿದೆ.
ಆದ್ರೆ ಕೊರಟಗೆರೆ ಆಡಳಿತ ಜನರಿಗೆ ಗ್ರಾಮ ವಾಸ್ತವ್ಯದ ಮಾಹಿತಿಯೇ ನೀಡದೆ ನೇಪಕ್ಕೆ ಕಾರ್ಯಕ್ರಮದ ಆಯೋಜನೆ ಮಾಡಿ ಮುಕ್ತಾಯ ಮಾಡುತ್ತಿರುವ ಪ್ರಸಂಗ ನಿನ್ನೆ ಬಹಿರಂಗವಾಗಿದೆ. ಇದಿಷ್ಟೇ ಅಲ್ಲದೆ, ಸರ್ಕಾರದ ಆದೇಶ ಧಿಕ್ಕರಿಸಿ ತಹಸೀಲ್ದಾರ್ ಗೋವಿಂದರಾಜು ಮನೆಯತ್ತ ಮುಖ ಮಾಡಿದ್ದಾರೆ. ತುಮಕೂರು ಜಿಲ್ಲೆ ಕೊರಟಗೆರೆ ಚನ್ನರಾಯನದುರ್ಗದಲ್ಲಿ ನಡೆದ ಗ್ರಾಮ ವಾಸ್ತವ್ಯಕ್ಕೆ ತಹಸೀಲ್ದಾರ್ ಎಳ್ಳು ನೀರು ಬಿಟ್ಟಿದ್ದಾರೆ. ಸದ್ಯ ಗ್ರಾಮ ಸಹಾಯಕರನ್ನ ಗ್ರಾಮದಲ್ಲಿ ಬಿಟ್ಟು ತಹಸೀಲ್ದಾರ್ ಮನೆಗೆ ತೆರಳಿದ್ರು. ಕಾಟಚಾರಕ್ಕೆ ಗ್ರಾಮವಾಸ್ತವ್ಯ ಮಾಡಿದ್ದಕ್ಕೆ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.