ಅಭಿವೃದ್ಧಿ ಎಂಬುದು ನಿಂತ ನೀರಲ್ಲ. ಅದು ನಿರಂತರ ಪ್ರಕ್ರಿಯೆಯಾಗಿದೆ, ಅಧಿಕಾರಿಗಳ ಜೊತೆಗೆ ಜನರ ಸಹಭಾಗಿತ್ವವೂ ಬಹಳ ಮುಖ್ಯವಾದುದು; ಡಿ.ಎ.ದಿವಾಕರ್-ಕಹಳೆ ನ್ಯೂಸ್
ಬಾಗೇಪಲ್ಲಿ : ಅಭಿವೃದ್ಧಿ ಎಂಬುದು ನಿಂತ ನೀರಲ್ಲ, ಅದು ನಿರಂತರ ಪ್ರಕ್ರಿಯೆಯಾಗಿದೆ. ಗ್ರಾಮದ ಅಭಿವೃದ್ಧಿಗೆ ಸರಕಾರ, ಅಧಿಕಾರಿಗಳ ಜೊತೆಗೆ ಜನರ ಸಹಭಾಗಿತ್ವವೂ ಬಹಳ ಮುಖ್ಯವಾದುದು ಎಂದು ಬಾಗೇಪಲ್ಲಿ ತಾಲೂಕು ದಂಡಾಧಿಕಾರಿಗಳಾದ ಡಿ.ಎ.ದಿವಾಕರ್ ಹೇಳಿದರು.
ಅವರು ಶನಿವಾರ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆದ ಬಾಗೇಪಲ್ಲಿ ತಾಲೂಕು ಗೂಳೂರು ಹೋಬಳಿ ಗೊರ್ತಪಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ, ಸರ್ಕಾರ ರೂಪಿಸಿರುವ ‘ಅಧಿಕಾರಿಗಳ ನಡೆ ಗ್ರಾಮದ ಕಡೆಗೆ’ ಕಾರ್ಯಕ್ರಮ ಬಹಳ ಹಿಂದಿನಿಂದ ಇದೆ. ಬೇರೆ ಬೇರೆ ಸರ್ಕಾರಗಳ ಅವಧಿಯಲ್ಲಿ ಬೇರೆ ಹೆಸರು ನೀಡುತ್ತ ಬರಲಾಗಿದೆ. ತಾಲೂಕು ಮಟ್ಟದ ಮತ್ತು ಗ್ರಾಮ ಮಟ್ಟದ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು.
ಜನರ ಮಧ್ಯೆ ಇಳಿದು ಕೆಲಸ ಮಾಡಬೇಕು. ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಕೆಲಸ ಮಾಡ್ತಾ ಇದ್ದೇವೆಯೇ ಎಂದು ಪ್ರತಿಯೊಬ್ಬರೂ ಅವಲೋಕನ ಮಾಡಿಕೊಳ್ಳಬೇಕು. ಯಾವುದೇ ಸಮಸ್ಯೆಗಳು ಇದ್ದರೆ, ಅಕ್ರಮಗಳು ಕಂಡು ಬಂದರೆ ಅದನ್ನು ನೇರವಾಗಿ ಸರಿಯಾದ ಮಾರ್ಗದಲ್ಲಿ ಸಂಬಂಧಪಟ್ಟವರ ಗಮನಕ್ಕೆ ತನ್ನಿ ಎಂದು ಅವರು ಹೇಳಿದರು. ಹಾಗೂ ಊರಿನ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಬೇಕು ಎಂದರು. ಪ್ರತಿ ಮನೆ ಮುಂದೆಯೂ ನಿಂತು ಮನೆಯ ಸದಸ್ಯರ ಯೋಗಕ್ಷೇಮ ವಿಚಾರಿಸಿ, ಸಮಸ್ಯೆಗಳಿದ್ದರೆ ತಿಳಿಸಿ ಎಂದು ಕೇಳಿದರು. ಕೆಲವರು ಪಡಿತರ ಚೀಟಿ, ವೃದ್ಧಾಪ್ಯ ವೇತನ ಸಮಸ್ಯೆಗಳ ಕಡೆಗೆ ಗಮನ ಸೆಳೆದರು. ನೀರಿನ ಸಮಸ್ಯೆ. ರಸ್ತೆ ಸಮಸ್ಯೆ ಪರಿಹರಿಸುವಂತೆ ಕೆಲವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಸಿ.ಎನ್.ಸತ್ಯನಾರಾಯಣ ರೆಡ್ಡಿ, ಕಾರ್ಯನಿರ್ವಾಹಣಾಧಿಕಾರಿಗಳಾದ ಮಂಜುನಾಥ ಸ್ವಾಮಿ, ಪಂಚಾಯತಿ ಅಧ್ಯಕ್ಷರಾದ ನಿರ್ಮಲಾ ಬಾಯಿ, ಶ್ರೀನಿವಾಸ ನಾಯಕ್ ಉಪಾಧ್ಯಕ್ಷರಾದ ರೇಣುಕಾ, ಶ್ರೀನಿವಾಸನಾಯಕ್ , ಸದಾಶಿವಾರೆಡ್ಡಿ ಲಕ್ಷ್ಮೀನಾರಾಯಣ ಸೋಮಶೇಖರ್ , ಹಾಗೂ ಗೊರ್ತಪಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದರು.