ಲಿಂಗ ಸಮಾನತೆಯೇ ಅಭಿವೃದ್ಧಿಯ ಗುರಿ; ವಿಶ್ವವಿದ್ಯಾನಿಲಯದ ಮಾಜಿ ಪ್ರಾಧ್ಯಾಪಿಕೆ ಪ್ರೊ.ವಿಭೂತಿ ಪಟೇಲ್-ಕಹಳೆ ನ್ಯೂಸ್
ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಯುಜಿಸಿ ಮಹಿಳಾ ಅಧ್ಯಯನ ಕೇಂದ್ರ, ನವದೆಹಲಿಯ ಶಾಸ್ತ್ರಿ ಇಂಡೋ-ಕೆನಡಿಯನ್ ಇನ್ಸ್ಟಿಟ್ಯೂಟ್ (ಎಸ್‌ಐಸಿಐ) ಸಹಯೋಗದೊಂದಿಗೆ ಮತ್ತು ಕೇಂದ್ರ ಶಿಕ್ಷಣ ಸಚಿವಾಲಯದ ಸಹಕಾರದೊಂದಿಗೆ ಇತ್ತೀಚೆಗೆ “ಭಾರತ ಮತ್ತು ಕೆನಡದಲ್ಲಿ ಲಿಂಗತ್ವ ಮುಖ್ಯವಾಹಿನಿಯ ಪ್ರಯೋಗಗಳು” ಎಂಬ ವಿಷಯದ ಕುರಿತು ಅಂತಾರಾಷ್ಟ್ರೀಯ ವರ್ಚುವಲ್ ಸಮ್ಮೇಳನವನ್ನು ಆಯೋಜಿಸಲಾಗಿತ್ತು.
ತಮ್ಮ ಶಿಖರೋಪಾನ್ಯಾಸದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಸಮಾಜಶಾಸ್ತ್ರ ಪ್ರಾಧ್ಯಾಪಿಕೆ ಪ್ರೊ.ಇಂದಿರಾ, ಲಿಂಗತ್ವ ಮುಖ್ಯವಾಹಿನಿಯ ಕುರಿತ ನಮ್ಮ ತಿಳುವಳಿಕೆ ನೀತಿ ನಿರೂಪಣೆಯ ಪ್ರತಿಯೊಂದು ಹಂತದಲ್ಲೂ ಕಂಡುಬರಬೇಕು, ಎಂದು ಅಭಿಪ್ರಾಯಪಟ್ಟರು. ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಮತ್ತು ಎಸ್‌ಎನ್‌ಡಿಟಿ ವಿಶ್ವವಿದ್ಯಾನಿಲಯದ ಮಾಜಿ ಪ್ರಾಧ್ಯಾಪಿಕೆ ಪ್ರೊ.ವಿಭೂತಿ ಪಟೇಲ್ ಲಿಂಗ ಸಮಾನತೆಯೇ ಅಭಿವೃದ್ಧಿಯ ಗುರಿಯಾಗಿರಬೇಕು ಎಂದರು. ಎಸ್‌ಐಸಿಐ ನಿರ್ದೇಶಕಿ ಡಾ. ಪ್ರಾಚಿ ಕೌಲ್ ಅವರು ದೆಹಲಿಯಲ್ಲಿ ಎಸ್‌ಐಸಿಐ ಸಂಘಟನೆಯಲ್ಲಿ ಮಹಿಳೆಯರ ಪಾತ್ರವನ್ನು ಹೆಚ್ಚಿಸಲು ತೆಗೆದುಕೊಂಡಿರುವ ಕ್ರಮಗಳನ್ನು ವಿವರಿಸಿದರು. ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಯೂನಿವರ್ಸಿಟಿ ಆಫ್ ಆಲ್ಬರ್ಟಾ (ಕೆನಡಾ) ಪ್ರೊಫೆಸರ್ ಡಾ. ಡೆನಿಸ್ ಎಲ್. ಸ್ಪಿಟ್ಜರ್ ಅವರು ಲಿಂಗ ಆಧಾರಿತ ವಿಶ್ಲೇಷಣೆಯನ್ನು ಅನುಷ್ಠಾನಗೊಳಿಸುವಲ್ಲಿ ಕೆನಡಾಕ್ಕೆ ದೀರ್ಘ ಇತಿಹಾಸವಿದೆ, ಎಂದರು. ಯುಜಿಸಿ ಜಂಟಿ ಕಾರ್ಯದರ್ಶಿ ಡಾ.ಅರ್ಚನಾ ಠಾಕೂರ್ ಮಾತನಾಡಿ, ಹೊಸ ಶೈಕ್ಷಣಿಕ ನೀತಿ ಮಹಿಳೆಯರನ್ನು ಸಬಲೀಕರಣಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ, ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಡಾ.ಅನಿತಾ ರವಿಶಂಕರ್ ಅವರು ಕರ್ನಾಟಕದ ‘ಬಾಗೆಪಲ್ಲಿ ಕೂಲಿ ಸಂಘ’ ಎಂಬ ದೊಡ್ಡ ಜನರ ಸಂಘಟನೆ ಲಿಂಗತ್ವ ಮುಖ್ಯವಾಹಿನಿಗೆ ನಡೆಸಿರುವ ಪ್ರಯತ್ನಗಳ ಮೇಲೆ ಬೆಳಕು ಚೆಲ್ಲಿದರು. ಆಲ್ಬರ್ಟಾ ವಿಶ್ವವಿದ್ಯಾನಿಲಯದ ಮಹಿಳಾ ಮತ್ತು ಲಿಂಗತ್ವ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಿಕೆ ಡಾ. ಸುಸೇನ್ ಲುಹ್ಮಾನ್, ವಿಕ್ಟೋರಿಯಾ ವಿಶ್ವವಿದ್ಯಾನಿಲಯ (ಕೆನಡಾ) ಲಿಂಗತ್ವ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ಲಾರಾ ಪ್ಯಾರಿಸಿ, ಭಾರತಿದಾಸನ್ ವಿಶ್ವವಿದ್ಯಾನಿಲಯದ ಪ್ರೊ.ಎನ್. ಮಣಿಮೇಕಲೈ, ಮೈಸೂರು ವಿಶ್ವವಿದ್ಯಾನಿಲಯದ ಎಂ. ಇಂದಿರಾ ಅವರು ವಿವಿಧ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಸಹ-ಸಂಘಟನಾ ಕಾರ್ಯದರ್ಶಿಗಳಾದ ಮಂಗಳೂರು ವಿಶ್ವವಿದ್ಯಾಲಯದ ರಾಜಕೀಯ ವಿಜ್ಞಾನ ಪ್ರಾಧ್ಯಾಪಕ ಪ್ರೊ.ಜಯರಾಜ್ ಅಮೀನ್ ಮತ್ತು ಇಂಗ್ಲಿಷ್ ಪ್ರಾಧ್ಯಾಪಕ ಡಾ.ರವಿಶಂಕರ್ ರಾವ್ ಉಪಸ್ಥಿತರಿದ್ದರು.