ವಿಶ್ವವಿದ್ಯಾನಿಲಯ ಕಾಲೇಜಿನ ಅನ್ವೇಷಣಾ ಸಂಘ ಮತ್ತು ಪರಿಸರ ಸಂಘದ ವತಿಯಿಂದ ವಾಟರ್ ಆಡಿಟಿಂಗ್ ಮೂಲಕ ವಿಶ್ವ ಜಲ ದಿನಾಚರಣೆ-ಕಹಳೆ ನ್ಯೂಸ್
ಮಂಗಳೂರು : ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಅನ್ವೇಷಣಾ ಸಂಘ ಮತ್ತು ಪರಿಸರ ಸಂಘದ ವತಿಯಿಂದ ವಿಶ್ವ ಜಲ ದಿವಸವನ್ನು ವಾಟರ್ ಆಡಿಟಿಂಗ್ ಮಾಡುವ ಮೂಲಕ ಸೋಮವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾಲೇಜಿನ ಅವರಣದೊಳಗಿನ ನೀರಿನ ಕಾರಂಜಿಯನ್ನು ಶುಚಿಗೊಳಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಪರಿಸರ ಸಂಘದ ಸಹ ನಿರ್ದೇಶಕ ಡಾ. ಸಿದ್ಧರಾಜು ಎಂ. ಎನ್ ವಿದ್ಯಾರ್ಥಿಗಳಿಗೆ ವಿಶ್ವ ಜಲ ದಿನದ ಮಹತ್ವ ತಿಳಿಸಿ ವಾಟರ್ ಆಡಿಟಿಂಗ್ ಎಂದರೇನು, ಶಾಲಾ ಕಾಲೇಜುಗಳಲ್ಲಿ ನೀರಿನ ಆಡಿಟಿಂಗ್ ನಡೆಸುವುದು, ದಾಖಲೀಕರಿಸುವುದು ಮತ್ತು ಅದರ ನಿರ್ವಹಣೆ ಹೇಗೆ ಎಂದು ತಿಳಿಸಿದರು.
ಸದಸ್ಯರಾದ ವೇದಾಶಿನಿ, ಚೇತನ್ ಮತ್ತು ಹೇಮಂತ್ ನೇತೃತ್ವದಲ್ಲಿ ವಿದ್ಯಾರ್ಥಿಗಳನ್ನು ವಿವಿಧ ಗುಂಪುಗಳಾಗಿ ವಿಂಗಡಿಸಿ ಕಾಲೇಜಿನ ಅವರಣದೊಳಗಿನ ನೀರಿನ ಆಕರಗಳು, ನಲ್ಲಿಗಳು, ಕುಡಿಯುವ ನೀರಿನ ಕೂಲರ್ ಗಳು, ಉಪಯುಕ್ತ ಹಾಗು ಅನುಪಯುಕ್ತ ನಳಗಳು, ನೀರು ಶುಚಿತ್ವ ಸ್ಥಳಗಳು, ನೀರು ಸೋರುವ ಸ್ಥಳಗಳು, ಕ್ಯಾಂಟೀನ್, ವಿಭಾಗ ಕೋಣೆಗಳು, ಪ್ರಯೋಗಾಲಯಗಳಲ್ಲಿ ನೀರಿನ ಬಳಕೆ ಹೀಗೆ, ಒಟ್ಟು ನೀರಿನ ಆಯವ್ಯಯ ಪಟ್ಟಿ ಮಾಡಿ ದಾಖಲಿಸಲಾಯಿತು.
ಚೇತನ್ ಸಣ್ಣ ಪ್ರಾತ್ಯಕ್ಷಿಕೆಯ ಮೂಲಕ ನೀರಿನ ಸೋರುವಿಕೆಯನ್ನು ವಿವರಿಸಿದರು. ಸಣ್ಣಪುಟ್ಟ ಸೋರುವಿಕೆಯಿಂದ ನಾವು ಸಾವಿರಾರು ಲೀಟರ್ ನೀರು ಕಳೆದುಕೊಳ್ಳುತ್ತೇವೆ. ಇಂತಹ ಸಣ್ಣಪುಟ್ಟ ಅಂಶಗಳನ್ನು ಗಮನಿಸುವುದು ನಮ್ಮ ಕರ್ತವ್ಯವೆಂದು ತಿಳಿಸಿದರು.