ಅಂಬಿಕಾ ಸಮೂಹಸಂಸ್ಥೆಗಳ ವತಿಯಿಂದ ಬಲಿದಾನ್ ದಿವಸ್ ಆಚರಣೆ ತ್ಯಾಗ ಜೀವನದ ಅಂಗವಾಗಬೇಕು :ಡಾ.ವಿನಾಯಕ ಭಟ್ಟ ಗಾಳಿಮನೆ- ಕಹಳೆ ನ್ಯೂಸ್
ಪುತ್ತೂರು: ಇಲ್ಲಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ಬಲಿದಾನ್ ದಿವಸ್ ಕಾರ್ಯಕ್ರಮವನ್ನು ಕಿಲ್ಲೆ ಮೈದಾನದ ಬಳಿ ಸಂಸ್ಥೆಯ ವತಿಯಿಂದ ಕಿಲ್ಲೆ ಮೈದಾನದ ಬಳಿ ಸ್ಥಾಪಿಸಲಾಗಿರುವ ಅಮರ್ ಜವಾನ್ ಜ್ಯೋತಿ ಸ್ಮಾರಕದ ಮುಂದೆ ಮಂಗಳವಾರ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಬಲಿದಾನ್ ದಿವಸದ ಸಂದೇಶ ನೀಡಿದ ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ವಿನಾಯಕ ಭಟ್ಟ ಗಾಳಿಮನೆ ಮಾತನಾಡಿ ತ್ಯಾಗ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು. ತ್ಯಾಗದ ಮಹತ್ವವನ್ನು ಬೋಧಿಸಿದ ದೇಶ ನಮ್ಮದು ಎಂದು ನುಡಿದರು. ರಾಜಗುರು, ಸುಖದೇವ್ ಹಾಗೂ ಭಗತ್ ಸಿಂಗ್ ಅವರ ಬಲಿದಾನದ ನೆನಪಿನಲ್ಲಿ ಆಚರಿಸಲಾಗುತ್ತಿರುವ ದಿನದಂದು ಸಾಮಾಜಿಕ ಚಿಂತನೆಗಳನ್ನು , ತ್ಯಾಗದ ಮಹತ್ವವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನಕ್ಕಿಳಿಯಬೇಕು. ಬ್ರಿಟಿಷರು ನಮ್ಮೊಳಗೇ ಜಗಳವನ್ನು ಹುಟ್ಟುಹಾಕಿ ಒಡೆದು ಆಳುವ ಪ್ರಯತ್ನ ನಡೆಸಿದ್ದರು. ಅಂತಹವರ ವಿರುದ್ಧ ಹೋರಾಡಿ ಪ್ರಾಣತ್ಯಾಗಗೈದ ಮಹನೀಯರ ತ್ಯಾಗವನ್ನು ನೆನಪಿಸಿ ಗೌರವಿಸಬೇಕಾದ್ದು ನಮ್ಮೆಲ್ಲರ ಧರ್ಮ ಎಂದು ನುಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಂದ ಪುಷ್ಪನಮನ ನಡೆಯಿತು. ನಟ್ಟೋಜ ಫೌಂಡೇಶನ್ ಟ್ರಸ್ಟ್ನ ಕೋಶಾಧಿಕಾರಿ ರಾಜಶ್ರೀ ನಟ್ಟೋಜ, ಅಂಬಿಕಾ ಸಮೂಹ ಸಂಸ್ಥೆಗಳ ಪ್ರಾಚಾರ್ಯರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.