ಕ್ಷಯವು ವಂಶಾನುಗತ ರೋಗವಲ್ಲ. ಇದು ಸೋಂಕುರೋಗ. ಯಾವುದೇ ವ್ಯಕ್ತಿಗೂ ಕ್ಷಯ ಬರಬಹುದು. ಕಫದಲ್ಲಿ ಬ್ಯಾಕ್ಟಿರಿಯಾ ಇರುವ ರೋಗಿಗಳು ಕೆಮ್ಮಿದಾಗ, ಉಗುಳಿದಾಗ ಅಥವಾ ಸೀನಿದಾಗ ತುಂತುರು ಹನಿಗಳ ಮೂಲಕ ಈ ಕ್ರಿಮಿಗಳು ಗಾಳಿಯನ್ನು ಸೇರಿಕೊಂಡು ಉಸಿರಿನ ಮೂಲಕ ಇತರರಿಗೆ ಹರಡುತ್ತದೆ.
ಚಿಕಿತ್ಸೆಗೆ ಸ್ಪಂದಿಸದ ಕೆಮ್ಮು ಅಥವಾ ಜ್ವರದ ಬಗ್ಗೆ ಅನಾದರತೆ ಬೇಡ. ಸಂಶಯ ಬಂದಾಗ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಂಡರಾಯಿತು. ಎಲ್ಲೆಂದರಲ್ಲಿ ಉಗಿಯುವುದು ರೋಗ ಹರಡುವಿಕೆಗೆ ಕಾರಣ. ಕೊಟ್ಟ ಔಷಧಿಯನ್ನು ಕ್ರಮಬದ್ಧವಾಗಿ ಸೇವಿಸಿದರೆ ಟಿ.ಬಿ ರೋಗ ಮಾಯವಾಗುತ್ತದೆ ಎಂದು ಉಜಿರೆಯ ಬೆನಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಗೋಪಾಲಕೃಷ್ಣ ಅವರು ತಿಳಿಸಿದರು. ಡಾ.ಗೋಪಾಲಕೃಷ್ಣ ಅವರು ವಿಶ್ವ ಟಿಬಿ ದಿನದ ಅಂಗವಾಗಿ ಬದನಾಜೆಯ ಸರಕಾರಿ ಫ್ರೌಡ ಶಾಲೆಯ ಇಂಟರಾಕ್ಟ್ ಕ್ಲಬ್ಬಿನ ಆಶ್ರಯದಲ್ಲಿ ಬೆಳ್ಟಂಗಡಿ ರೋಟರಿ ಕ್ಲಬ್ ಆಯೋಜಿಸಿದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಉಜಿರೆಯ ಶ್ರೀ.ಧ.ಮಂ. ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎ.ಜಯ ಕುಮಾರ ಶೆಟ್ಟಿ ಆರ್ಥಿಕತೆಯ ಮೇಲೆ ಟಿಬಿಯ ಪರಿಣಾಮದ ಬಗ್ಗೆ ಮಾತನಾಡುತ್ತಾ ಭಾರತದಲ್ಲಿ ಪ್ರತಿ ಕೋಟಿ ಜನರಲ್ಲಿ 40 ಲಕ್ಷ ಜನರಿಗೆ ಕ್ಷಯ ರೋಗ ಲಕ್ಷಣಗಳಿವೆ. ಅಧ್ಯಯನಗಳ ಪ್ರಕಾರ ಕ್ಷಯರೋಗದಿಂದಾಗಿ ವ್ಯಕ್ತಿಯೊಬ್ಬ ಕನಿಷ್ಠ 4 ತಿಂಗಳ ಶ್ರಮದ ನಷ್ಟ ಅನುಭವಿಸಯತ್ತಾನೆ ಹಾಗೂ ಇದರಿಂದಾಗಿ ವಾರ್ಷಿಕವಾಗಿ ಕುಟುಂಬದ ಆದಾಯವು ಶೇಕಡಾ 20-30ರಷ್ಟು ಕಡಿಮೆಯಾಗುತ್ತದೆ ಎಂದು ತಿಳಿದಾಗ ಕ್ಷಯರೋಗದ ದೀರ್ಘ ದುಷ್ಪರಿಣಾಮಗಳನ್ನು ಅರ್ಥೈಸಬಹುದಾಗಿದೆ ಎಂದು ಅಭಿಪ್ರಾಯಪಟ್ಟರು. ಬೆಳ್ತಂಗಡಿ ರೋಟರಿಯ ಅಧ್ಯಕ್ಷ ಧನಂಜಯ ರಾವ್ ಅವರು ಮಾತನಾಡುತ್ತಾ ಕ್ಷಯ ರೋಗದ ಸೋಂಕು ತಗುಲಿದ ವ್ಯಕ್ತಿಯು ಒಂದು ವರ್ಷದಲ್ಲಿ ಹತ್ತು ಜನರಿಗೆ ಸೋಂಕು ತಗುಲಿಸಬಹುದು. ಟಿಬಿಯ ಬಗೆಗಿನ ಸಾಮಾಜಿಕ ಕಳಂಕ ಹಾಗೂ ತಾರತಮ್ಯತೆ ರೋಗ ಹರಡುವಿಕೆಗೆ ಕಾರಣವಾಗಿದೆ. ಸರಳ ಕೆಮ್ಮು ಶಿಷ್ಟಾಚಾರಗಳನ್ನು ಅನುಸರಿಸುವುದು ಅಗತ್ಯವೆಂದು ಜನರು ಪರಿಗಣಿಸದಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ತಿಳಿಸಿದರು. ಬೆಳ್ತಂಗಡಿ ರೋಟರಿಯ ಇಂಟರಾಕ್ಟ್ ನಿರ್ದೇಶಕ ಅಬೂಬ್ಬಕ್ಕರ್, ಬದನಾಜೆ ಸರಕಾರಿ ಹೈಸ್ಕೂಲಿನ ಮುಖ್ಯ ಶಿಕ್ಷಕಿ ಶ್ರೀಮತಿ ಜಮುನಾ, ಬದನಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಶಾರದಾ, ಇಂಟರಾಕ್ಟ್ ಅಧ್ಯಕ್ಷೆ ವಿಶ್ರುತ ಹಾಗೂ ಕಾರ್ಯದರ್ಶಿ ವಂಶಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲೆಯ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದ ಕಾರ್ಯಕ್ರಮವನ್ನು ಯಕ್ಷಿತಾ ನಿರ್ವಹಿಸಿ ಕೊನೆಗೆ ಹಫಿಲ್ ವಂದಿಸಿದರು