ವಿವಿ ಕಾಲೇಜಿನಲ್ಲಿ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗದ ಕಾರ್ಯಾಲಯ ಉದ್ಘಾಟನೆ, ಆರ್ಥಿಕ ಸಂಕಷ್ಟದ ನಡೆವೆಯೂ ತುಳುವಿನ ಪೋಷಣೆ ನಿಲ್ಲದು; ದಯಾನಂದ ಜಿ.ಕತ್ತಲ್ ಸಾರ್-ಕಹಳೆ ನ್ಯೂಸ್
ಮಂಗಳೂರು : ಆರ್ಥಿಕ ಸಂಕಷ್ಠದ ನಡುವೆಯೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಭಾಷೆ- ಸಂಸ್ಕೃತಿಯ ಪೋಷಣೆಗೆ ಶ್ರಮಿಸಿದವರನ್ನು, ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸ ಮುಂದುವರಿಸಲಿದೆ. ಈ ಬಾರಿಯಿಂದ ಹೊಸದಾಗಿ ಮಾಧ್ಯಮ ಪ್ರಶಸ್ತಿಯೂ ಸೇರಿದಂತೆ ಐದು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುವುದು, ಎಂದು ಅಕಾಡೆಮಿ ಅಧ್ಯಕ್ಷ ದಯಾನಂದ ಜಿ.ಕತ್ತಲ್ ಸಾರ್ ಹೇಳಿದ್ದಾರೆ .
ಮಂಗಳೂರು ವಿಶ್ವವಿದ್ಯಾನಿಲಯದ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜುಗಳ ಜಂಟಿ ಆಶ್ರಯದಲ್ಲಿ ಗುರುವಾರ ಕಾಲೇಜಿನಲ್ಲಿ ನಡೆದ ವಿಭಾಗದ ನೂತನ ಕಾರ್ಯಾಲಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತುಳು ಶಿಕ್ಷಕರಿಗೆ ಗೌರವಧನ ನೀಡುವುದೂ ಕಷ್ಟವಾಗುತ್ತಿದೆ.
ಆದರೆ ಅಕಾಡೆಮಿಯ ಹೆಸರಲ್ಲಿ ನಡೆಯುವ ಕಾರ್ಯಕ್ರಮಗಳು, ತುಳು ಪುಸ್ತಕಗಳ ಬಿಡುಗಡೆಗೆ ಪ್ರೋತ್ಸಾಹ ಮುಂದುವರಿಯಲಿದೆ, ಎಂದರು. ಕಾರ್ಯಕ್ರಮ ಉದ್ಘಾಟಕ ಹಿರಿಯ ವೈದ್ಯ ಡಾ. ವಾಮನ ಶೆಣೈ, ಸ್ಥಳೀಯ ಸಂಸ್ಕೃತಿಯ ಸೊಗಡು ಹೊಂದಿರುವ ಭಾಷೆ ರಕ್ಷಿಸಲು ಅದನ್ನು ಬಳಸುವುದು ಮುಖ್ಯ. ಭಾಷೆಯ ಬಗ್ಗೆ ಸ್ವಾಭಿಮಾನ, ಅಭಿಮಾನದ ಜೊತೆಗೆ ನಿರಂತರ ಕಲಿಕೆ ಮುಖ್ಯ, ಎಂದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಜಗದೀಶ್ ಪೈ, ತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಪ್ರಕ್ರಿಯೆಗೆ ಕೊಂಕಣಿ ಅಕಾಡೆಮಿ ಸಂಪೂರ್ಣ ಬೆಂಬಲ ನೀಡುತ್ತದೆ, ಎಂದರು.
ಉಡುಪಿ ತುಳುಕೂಟದ ಗೌರವಾಧ್ಯಕ್ಷ ಡಾ. ಭಾಸ್ಕರಾನಂದ ಕುಮಾರ್, ಕೂಟದ ಕಾರ್ಯಚಟುವಟಿಕೆಗಳ ಕಿರುಪರಿಚಯದ ಜೊತೆಗೆ, ತುಳು ಸ್ನಾತಕೋತ್ತರ ಅಧ್ಯಯನಕ್ಕೆ ಬೇಕಾಗುವ ಪುಸ್ತಕಗಳು ಸೇರಿದಂತೆ ಎಲ್ಲಾ ನೆರವು ನೀಡುವ ಭರವಸೆ ನೀಡಿದರು.
ಇದೇ ವೇಳೆ, ಉದ್ಯಮಿ ಸುನಿಲ್ ಆಚಾರ್, ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠದ ಸಲಹಾ ಮಂಡಳಿ ಸದಸ್ಯ ಪ್ರವೀಣ್ ಕುಮಾರ್, ಭಾಸ್ಕರಾನಂದ ಕುಮಾರ್ ಮತ್ತು ಕಳ್ಳಿಮಾರು ಗುತ್ತು ಮನೆತನದ ಪ್ರಸಾದ್ ರೈ ಅವರನ್ನು ಸನ್ಮಾನಿಸಲಾಯಿತು.
ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಮೋಹನ ಪಡಿವಾಳ್, ಕೆ ರಮೇಶ್, ರವಿಚಂದ್ರ ಪಿ ಎಂ, ರವೀಂದ್ರನಾಥ ರೈ, ವಿವೇಕಾನಂದ ಪನಿಯಾಲ, ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ. ಸುಭಾಷಿಣಿ ಶ್ರೀವತ್ಸ ಮೊದಲಾದವರ ಉಪಸ್ಥಿತಿಯಿತ್ತು.
ತುಳು ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ. ಮಾಧವ ಎಂ ಕೆ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು.
ವಿದ್ಯಾರ್ಥಿ ಪ್ರದ್ಯೋತ್ ಹೆಗ್ಡೆ ವಿಭಾಗದ ಚಟುವಟಿಕೆಗಳ ಪರಿಚಯ ಮಾಡಿದರು. ಪ್ರಾಧ್ಯಾಪಕ ಸುಭಾಶ್ಚಂದ್ರ ಕಣ್ವತೀರ್ಥ ಧನ್ಯವಾದ ಸಮರ್ಪಿಸಿದರು. ಪ್ರಶಾಂತಿ ಶೆಟ್ಟಿ ಅವರ ನಿರೂಪಣೆ, ಸುರೇಶ್ ರಾವ್ ಮತ್ತು ಸಂಗಡಿಗರು ಹಾಡಿದ ʼತುಳುನಾಡ್ದ ತೇರ್ನ್ ಒಯ್ಪಿ ಬಲೆʼ ಎಂಬ ಹಾಡು ಗಮನ ಸೆಳೆಯಿತು.