ಪುತ್ತೂರು : ಪ್ರತಿಷ್ಟಿತ ಐಐಟಿ ಹಾಗೂ ಎನ್ಐಟಿಗಳಿಗೆ ಪ್ರವೇಶ ಕಲ್ಪಿಸುವ ರಾಷ್ಟ್ರಮಟ್ಟದ ಜೆಇಇ ಮೈನ್ 20-21 ಪರೀಕ್ಷೆಯಲ್ಲಿ ಇಲ್ಲಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ತೋರಿದ್ದಾರೆ.
ವಿದ್ಯಾರ್ಥಿಗಳಾದ ಅಚಿಂತ್ಯಕೃಷ್ಣ ಬಿ (96.29), ಮೊಹಮ್ಮದ್ ಆಶಿಕ್ ಎಸ್ (93.22), ರಕ್ಷಿತಾ ಆರ್ (92.09), ಆಕಾಶ್ ಕೆ.ಪಿ (91.99), ಶ್ರೇಯಸ್ ಹೇರಳೆ (87.96), ಧನುಷ್ ರಾಜನ್ (86.84), ಪುನೀತ್ ಕುಮಾರ್ (85.41), ಅಜಯ್ ಎಚ್.ಆರ್ (83.40), ದೀಪಶ್ರೀ ಕೆ (82.9), ಜೀವನ್ ಎಸ್.ಎಂ (80.73) ಹಾಗೂ ವೈಷ್ಣವಿ ರೈ ಪಿ (80.25) ಉತ್ತಮ ಪರ್ಸಂಟೈಲ್ ಅಂಕಗಳನ್ನು ಗಳಿಸಿದ್ದಾರೆ.
ರಾಷ್ಟ್ರ ಮಟ್ಟದ ಸಂಸ್ಥೆಗಳಲ್ಲಿ ಇಂಜಿನಿಯರಿಂಗ್ ಅಧ್ಯಯನ ಬಯಸುವ ವಿದ್ಯಾರ್ಥಿಗಳಿಗಾಗಿ ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿಯು ಜೆಇಇ ಮೈನ್ಸ್ ಹಾಗೂ ಜೆಇಇ ಅಡ್ವಾನ್ಸ್ಡ್ ಎಂಬ ಎರಡು ಹಂತದ ಪರೀಕ್ಷೆಯನ್ನು ಪ್ರತೀ ವರ್ಷ ನಡೆಸುತ್ತಿದ್ದು ಅಂಬಿಕಾ ಸಂಸ್ಥೆಯ ವಿದ್ಯಾರ್ಥಿಗಳು ಸದಾ ಅತ್ಯುತ್ತಮ ಅಂಕಗಳೊಂದಿಗೆ ಸಾಧನೆ ಮೆರೆಯುತ್ತಿದ್ದಾರೆ.
ಪ್ರಸ್ತುತ ವರ್ಷ ಅಂಬಿಕಾ ಸಂಸ್ಥೆಯಿಂದ ಹಾಜರಾದ ವಿದ್ಯಾರ್ಥಿಗಳಲ್ಲಿ ಶೇಕಡಾ ಅರವತ್ತಕ್ಕಿಂತಲೂ ಅಧಿಕ ಮಂದಿ ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ಬರೆಯಲು ಅರ್ಹರಾಗಿರುವುದು ವಿದ್ಯಾರ್ಥಿಗಳ ಹಾಗೂ ಶಿಕ್ಷಣದ ಗುಣಮಟ್ಟವನ್ನು ಬಿಂಬಿಸಿದೆ.
ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದ ಸಂತಸ ವ್ಯಕ್ತಪಡಿಸಿದ್ದಾರೆ.