ಲಕ್ನೋ : ಅಂಬೇಡ್ಕರ್ ಜಯಂತಿಯ ಪ್ರಯುಕ್ತ ಇಂದು ಶನಿವಾರ ಇಲ್ಲಿನ ಅಂಬೇಡ್ಕರ್ ಮಹಾಸಭಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ “ದಲಿತ ಮಿತ್ರ” ಬಿರುದನ್ನು ನೀಡಿ ಸಮ್ಮಾನಿಸಿತು.
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಆದಿತ್ಯನಾಥ್, “ಬಿಜೆಪಿ ಸರಕಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದಲಿತರ ವಿಮೋಚನೆ ಮತ್ತು ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತಿದೆ; ಗ್ರಾಮೀಣ ಪ್ರದೇಶಗಳಲ್ಲಿ ಸರಕಾರ ಈಗಾಗಲೇ 40 ಲಕ್ಷ ಶೌಚಾಲಯಗಳನ್ನು ನಿರ್ಮಿಸಿದೆ’ ಎಂದು ಹೇಳಿದರು.
ದಲಿತರ ಉನ್ನತಿಗಾಗಿ ಡಾ. ಭೀಮರಾಮ್ ಅಂಬೇಡ್ಕರ್ ವಹಿಸಿದ ಪಾತ್ರವನ್ನು ನೆನಪಿಸಿಕೊಂಡ ಯೋಗಿ ಆದಿತ್ಯನಾಥ್, ಸಮಾಜದಲ್ಲಿ ದಲಿತರ ವಿರುದ್ದದ ತಾರತಮ್ಯವನ್ನು ಹೋಗಲಾಡಿಸಿ ಸಮಾನತೆಯನ್ನು ಸ್ಥಾಪಿಸುವ ಸಲುವಾಗಿ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಹಲವಾರು ಅವಕಾಶಗಳನ್ನು ಒದಗಿಸಿದ್ದಾರೆ; ದಲಿತರು ಮತ್ತು ತುಳಿತಕ್ಕೆ ಒಳಗಾದ ವರ್ಗದವರ ಹಕ್ಕುಗಳಿಗಾಗಿ ಅಂಬೇಡ್ಕರ್ ತಮ್ಮ ಜೀವನದ ಉದ್ದಕ್ಕೂ ಹೋರಾಡಿದರು’ ಎಂದು ಹೇಳಿದರು.
ಸಮಾರಂಭದಲ್ಲಿ ರಾಜ್ಯಪಾಲ ರಾಮ ನಾಯಕ್, ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ಉಪಸ್ಥಿತರಿದ್ದರು.