ಬೆಂಗಳೂರು : ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಒಂಬತ್ತು ಗಡಿ ಜಿಲ್ಲೆಗಳಲ್ಲಿ ಬಿಗಿ ನಿಯಂತ್ರಣ ಕ್ರಮ ಕೈಗೊಂಡರೆ ರಾಜ್ಯದಲ್ಲಿ ಕೊರೊನಾ 2ನೇ ಅಲೆ ಹಬ್ಬುವುದನ್ನು ಯಶಸ್ವಿಯಾಗಿ ನಿಯಂತ್ರಿಸಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಅವರು, ಸೋಂಕು ಹೆಚ್ಚಿರುವ ಜಿಲ್ಲೆಗಳನ್ನು ಕೊರೊನಾ ಎರಡನೇ ಅಲೆ ಪೀಡಿತ ಜಿಲ್ಲೆಗಳು ಎಂದು ಪರಿಗಣಿಸಿ ಅಲ್ಲಿ ಕಠಿಣ ಕ್ರಮ ಜಾರಿ ಮಾಡಬೇಕು ಎಂದು ಪ್ರತಿಪಾದಿಸಿದ್ದಾರೆ. ಈ ತಿಂಗಳ ಅಂಕಿ ಅಂಶಗಳನ್ನು ನೋಡಿದರೆ 9 ಜಿಲ್ಲೆಗಳಲ್ಲಿ ಸೋಂಕು ಹೆಚ್ಚಿದೆ. 11 ಜಿಲ್ಲೆಗಳಲ್ಲಿ 20ರ ಆಸುಪಾಸು, 10 ಜಿಲ್ಲೆಗಳಲ್ಲಿ ಬೆರಳೆಣಿಕೆಯಷ್ಟು ಪ್ರಕರಣಗಳು ಮಾತ್ರ ವರದಿಯಾಗುತ್ತಿವೆ. ಹೀಗಾಗಿ ಹೆಚ್ಚು ಪ್ರಕರಣ ಇರುವ ಜಿಲ್ಲೆಗಳಲ್ಲಿ ಕಠಿಣ ಕ್ರಮಗಳನ್ನು ಜಾರಿಗೊಳಿಸಿದರೆ ಇತರ ಜಿಲ್ಲೆಗಳನ್ನು ರಕ್ಷಿಸಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಸೋಂಕು ಹೆಚ್ಚಿರುವ ಪ್ರದೇಶವನ್ನು ಮೈಕ್ರೋ ಕಂಟೈನ್ಮೆಂಟ್ ಝೋನ್ ಎಂದು ಪರಿಗಣಿಸುವಂತೆ ಮತ್ತು ಸೋಂಕು ಹೆಚ್ಚಿ ರುವ ಜಿಲ್ಲೆಗಳನ್ನು ಎರಡನೇ ಅಲೆ ಪೀಡಿತ ಜಿಲ್ಲೆ ಎಂದು ಪರಿಗಣಿಸಬಹುದು ಎಂದು ತಜ್ಞರು ಎನ್ನುತ್ತಾರೆ. ಹಾಗೂ ಸೋಂಕು ಹೆಚ್ಚಿರುವ ಕಡೆ ಪರೀಕ್ಷೆ ಹೆಚ್ಚಳ ಮಾತ್ರವಲ್ಲದೆ ಸಾರ್ವಜನಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು. ಸೋಂಕು ಕಡಿಮೆ ಇರುವ ಜಿಲ್ಲೆಗಳಲ್ಲಿ ತಡಮಾಡದೆ ಶೈಕ್ಷಣಿಕ ಚಟುವಟಿಕೆಗಳನ್ನು ಪೂರ್ಣಗೊಳಿಸಬೇಕು ಎಂದು ತಜ್ಞರು ಹೇಳಿದ್ದಾರೆ. ಮತ್ತು ರಾಜಧಾನಿ ಬೆಂಗಳೂರಿನಲ್ಲಿ ನಿತ್ಯ ಸರಾಸರಿ 1,700 ಪ್ರಕರಣಗಳು ವರದಿಯಾಗುತ್ತಿವೆ. ಮಹಾರಾಷ್ಟ್ರ ಗಡಿ ಜಿಲ್ಲೆಗಳಾದ ಕಲಬುರಗಿ, ಬೀದರ್, ಕೇರಳದ ಗಡಿ ಮೈಸೂರು, ವಲಸೆ ಕಾರ್ಮಿಕರು ಹೆಚ್ಚಿರುವ ಉಡುಪಿಯಲ್ಲಿ ನಿತ್ಯ ಸರಾಸರಿ 100ಕ್ಕೂ ಹೆಚ್ಚು, ದಕ್ಷಿಣ ಕನ್ನಡ, ತುಮಕೂರು, ಬೆಂಗಳೂರು ಗ್ರಾಮಾಂತರ, ಹಾಸನಗಳಲ್ಲಿ ನಿತ್ಯ ಸರಾಸರಿ 50ಕ್ಕೂ ಹೆಚ್ಚು ಮಂದಿಗೆ ಸೋಂಕು ತಗಲಿದೆ.